ಹೊರರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲೇ ಹಾಲಿನ ದರ ಕಡಿಮೆ: ಸಚಿವ ಲಾಡ್

| Published : Apr 08 2025, 12:34 AM IST

ಸಾರಾಂಶ

ಹೊರರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ಬೆಲೆ ತೀವ್ರ ಕಡಿಮೆ ಇದೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.

ಗಜೇಂದ್ರ ಯಾಧವ್ ಮನೆಗೆ ಭೇಟಿ ನೀಡಿ ಹೇಳಿಕೆ

ಕನ್ನಡಪ್ರಭ ವಾರ್ತೆ ಆನಂದಪುರ

ಹೊರರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ಬೆಲೆ ತೀವ್ರ ಕಡಿಮೆ ಇದೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.

ಅವರು ಆನಂದಪುರ ಕಾಂಗ್ರೆಸ್ ಘಟಕದ ಅಧ್ಯಕ್ಷ ಗಜೇಂದ್ರ ಯಾದವ್ ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದರು.

ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಬಿಜೆಪಿಯವರು ಆಡಳಿತ ನಡೆಸುತ್ತಿರುವಾಗ ಎಷ್ಟು ಬೆಲೆ ಏರಿಕೆ ಆಗಿತ್ತೆಂದು ಎಲ್ಲರಿಗೂ ತಿಳಿದಿದೆ. ಕರ್ನಾಟಕ ರಾಜ್ಯ ಹೊರತುಪಡಿಸಿದರೆ, ದೇಶದ ಎಲ್ಲಾ ರಾಜ್ಯದಲ್ಲಿ ಹಾಲಿನ ಬೆಲೆ ತೀವ್ರ ಹೆಚ್ಚಾಗಿದೆ. ನಾವು ನಮ್ಮ ರಾಜ್ಯದಲ್ಲಿನ ಲಕ್ಷಾಂತರ ರೈತರ ಹಾಲಿಗೆ ಶೇ.4ರಷ್ಟು ಸಬ್ಸಿಡಿ ನೀಡುತ್ತಿದ್ದೇವೆ. ಇದರಿಂದ ರೈತರಿಗೆ ಅನುಕೂಲವಾಗಿದೆ ಎಂದರು.

ಭಾರತ ದೇಶದಲ್ಲಿನ ಬಿಜೆಪಿ ಅಧಿಕಾರದಲ್ಲಿರುವಂತಹ ರಾಜ್ಯಗಳಲ್ಲಿ ಹಾಲಿನ ದರ, ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೆ ಏರಿದ್ದರೂ ಅವರನ್ನು ಏಕೆ ಯಾರು ಪ್ರಶ್ನಿಸುತ್ತಿಲ್ಲ. ರಾಜ್ಯದ ಜನತೆಗೆ 60,000 ಕೋಟಿ ರು. ಅನುದಾನದಲ್ಲಿ ಗ್ಯಾರಂಟಿ ಯೋಜನೆ ನೀಡುತ್ತಿದ್ದೇವೆ. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಜನರಿಗೆ ಯಾವ ಗ್ಯಾರಂಟಿ ನೀಡಿದ್ದಾರೆ ಎಂದು ತಿಳಿಸಲಿ ಎಂದರು.

ಬಿಜೆಪಿಯಿಂದ ಯತ್ನಾಳ್ ಉಚ್ಚಾಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮುಸ್ಲಿಮರಿಗೆ ಬೈದ ತಕ್ಷಣ ಯಾರು ಹಿಂದೂ ಬ್ರಾಂಡ್ ಆಗಲು ಸಾಧ್ಯವಿಲ್ಲ. ಕಾರಣ ನಾವೆಲ್ಲರೂ ಹಿಂದುಗಳೇ ಪ್ರತಿಯೊಬ್ಬ ವ್ಯಕ್ತಿಯು ತನ್ನ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕು. ಭಾರತ ದೇಶದಲ್ಲಿನ ಜನರು ಜಾತ್ಯತೀತವಾಗಿ ಬದುಕುತ್ತಿದ್ದಾರೆ. ಎಲ್ಲರನ್ನೂ ಒಂದೇ ಸಮನಾಗಿ ಕಾಣಬೇಕು ಎಂದು ಪ್ರತಿಕ್ರಿಯಿಸಿದರು.

ಈ ಸಂದರ್ಭದಲ್ಲಿ ಆನಂದಪುರ ಕಾಂಗ್ರೆಸ್ ಘಟಕದ ಅಧ್ಯಕ್ಷ ಗಜೇಂದ್ರ ಯಾದವ್, ರಮಾನಂದ್ ಸಾಗರ್, ಎಂ.ಎಲ್.ಈಶ್ವರ, ಸುರೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.