ಮಹಿಳಾ ಸಬಲೀಕರಣಕ್ಕೆ ಹಾಲು ಉತ್ಪಾದಕರ ಸಂಘ ಹೆಚ್ಚಬೇಕು: ಶಾಸಕ

| Published : Jun 17 2024, 01:38 AM IST

ಸಾರಾಂಶ

ಮಹಿಳಾ ಸಬಲೀಕರಣ ಹಿತದೃಷ್ಟಿಯಿಂದ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘಗಳು ಹೆಚ್ಚಾಗಬೇಕಿದೆ ಎಂದು ಶಾಸಕ ದರ್ಶನ್‌ ಧ್ರುವನಾರಾಯಣ್ ಹೇಳಿದರು.

ಕನ್ನಡಪ್ರಭ ವಾರ್ತೆ ನಂಜನಗೂಡು

ಮಹಿಳಾ ಸಬಲೀಕರಣ ಹಿತದೃಷ್ಟಿಯಿಂದ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘಗಳು ಹೆಚ್ಚಾಗಬೇಕಿದೆ ಎಂದು ಶಾಸಕ ದರ್ಶನ್‌ ಧ್ರುವನಾರಾಯಣ್ ಹೇಳಿದರು.

ತಾಲೂಕಿನ ಕೋರೆಹುಂಡಿ ಗ್ರಾಮದಲ್ಲಿ ಆರಂಭವಾದ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸರ್ಕಾರದಿಂದ ಸಾಲ ಸೌಲಭ್ಯದ ಜೊತೆಗೆ ಸಬ್ಸಿಡಿ ಕೂಡ ದೊರಕುವ ಜೊತೆಗೆ ಅನೇಕ ಸವಲತ್ತುಗಳನ್ನು ಸರ್ಕಾರ ಒದಗಿಸಲಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ಸಂಘದ ಸದಸ್ಯರು ಆರ್ಥಿಕವಾಗಿ ಮುಂದೆ ಬರಬೇಕು. ಈ ಹಾಲು ಉತ್ಪಾದಕರ ಸಹಕಾರ ಸಂಘವು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಗೊಳ್ಳಲು ಎಲ್ಲರೂ ಗುಣಮಟ್ಟದ ಹಾಲನ್ನು ಪೂರೈಸಿ ಎಂದು ಅವರು ಕರೆ ನೀಡಿದರು.

ಈ ಸಂಘಕ್ಕೆ ಕಟ್ಟಡ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಜೊತೆಗೆ ಕನಕ ಸಮುದಾಯ ಭವನ, ಸ್ಮಶಾನ ಅಭಿವೃದ್ಧಿಗೊಳಿಸುವಂತೆಯೂ ಮನವಿ ಮಾಡಿದ್ದಾರೆ. ಅತೀ ಶೀಘ್ರದಲ್ಲೇ ಅನುದಾನ ತಂದು ಕಟ್ಟಡ ನಿರ್ಮಿಸಿಕೊಡಲು ಬದ್ಧನಾಗಿದ್ದೇನೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮೈಮುಲ್ ನಿರ್ದೇಶಕ ಕುರಹಟ್ಟಿ ಮಹೇಶ್ ಮಾತನಾಡಿ, ಮೈಮುಲ್ ವತಿಯಿಂದ ಸಹಕಾರ ಸಂಘಗಳಿಗೆ ರಿಯಾಯಿತಿ ದರದ ಜೊತೆಗೆ ಸಬ್ಸಿಡಿ ಸೌಲಭ್ಯದೊಂದಿಗೆ ಹಸುವಿಗೆ ಹಾಸುವ ಮ್ಯಾಟ್, ಹಾಲು ಕರೆಯುವ ಯಂತ್ರ, ಮೇವು ಕಟಾವು ಯಂತ್ರ ಸೇರಿದಂತೆ ಅನೇಕ ಸೌಲಭ್ಯಗಳು ದೊರಕಲಿವೆ ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ವ್ಯವಸಾಯದ ಜೊತೆಗೆ ಹೈನುಗಾರಿಕೆ ಅನುಸರಿಸಿದಲ್ಲಿ ಆರ್ಥಿಕವಾಗಿ ಸದೃಢರಾಗಬಹುದು ಎಂದು ಅವರು ಸಲಹೆ ನೀಡಿದರು.

ಈ ವೇಳೆ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ. ಶಂಕರ್, ಮೈಮುಲ್ ನಿರ್ದೇಶಕ ಗುರುಸ್ವಾಮಿ, ಮುಖಂಡರಾದ ಮೈಕ್ ಮಹದೇವು, ಮದನ್, ಅಬ್ದುಲ್‌ ಖಾದರ್, ಜಿ. ಸಿದ್ದಿಖ್, ನಗರಸಭಾ ಸದಸ್ಯ ಸಿದ್ದಿಖ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ರಾಜಮ್ಮ, ಉಪಾಧ್ಯಕ್ಷೆ ಮಂಗಳಮ್ಮ ಮೊದಲಾದ ಪ್ರಮುಖರು ಇದ್ದರು.