ನಾನೂ ಒಬ್ಬ ಹಾಲು ಉತ್ಪಾದಕನಾಗಿದ್ದು, ಸುಮಾರು 120 ಹಸುಗಳನ್ನು ಸಾಕುತ್ತಿದ್ದೇನೆ. ನಿರ್ವಹಣಾ ವೆಚ್ಚ ಹೆಚ್ಚಾದ ಹಿನ್ನೆಲೆಯಲ್ಲಿ ನಾವೂ ಹೈನುಗಾರಿಕೆ ಕೈಬಿಡುವ ಯೋಚನೆ ಮಾಡಿದ್ದೆವು. ಆದರೆ ಇದೀಗ ಪ್ರತಿ ಲೀಟರ್‌ಗೆ 7ರು. ಪ್ರೋತ್ಸಾಹಧನ ಹಾಗೂ ಹಾಲಿನ ಗುಣಮಟ್ಟದ ಆಧಾರದ ಮೇಲೆ ಹೆಚ್ಚುವರಿ ದರ ದೊರೆಯುತ್ತಿರುವುದರಿಂದ ರೈತರಿಗೆ ಅನುಕೂಲವಾಗಿದೆ. ಪ್ರಸ್ತುತ ಉತ್ತಮ ಗುಣಮಟ್ಟದ ಹಾಲಿಗೆ ಸುಮಾರು ₹೪೯ರಿಂದ ₹೫೦ರವರೆಗೆ ದರ ಸಿಗುತ್ತಿದೆ. ನಾನು ಪ್ರತಿದಿನ ಸುಮಾರು 1200 ಲೀ.ಹಾಲು ಉತ್ಪಾದಿಸಿ ಡೇರಿಗೆ ನೀಡುತ್ತಿದ್ದೇನೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹೊಸಕೋಟೆ

ಹಾಲಿನ ದರ ಹೆಚ್ಚಳ ಹಾಗೂ ರಾಜ್ಯ ಸರ್ಕಾರ ನೀಡುತ್ತಿರುವ ಪ್ರತಿ ಲೀಟರ್‌ಗೆ 7 ರು.ಪ್ರೋತ್ಸಾಹಧನದಿಂದ ಹೊಸಕೋಟೆ ತಾಲೂಕಿನಲ್ಲಿ ಹೈನುಗಾರಿಕೆ ಮತ್ತೆ ಚೇತರಿಕೆ ಕಾಣುತ್ತಿದೆ. ಪ್ರತಿದಿನದ ಹಾಲಿನ ಸಂಗ್ರಹದಲ್ಲಿ 10 ಸಾವಿರ ಲೀ. ಹೆಚ್ಚಳವಾಗಿದೆ ಎಂದು ಬಮುಲ್ ನಿರ್ದೇಶಕ ಬಿ.ವಿ. ಸತೀಶ್ ಗೌಡ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ವಿವಿಧ ಹಾಲು ಒಕ್ಕೂಟಗಳ ಅಧ್ಯಕ್ಷರು ಹಾಗೂ ನಿರ್ದೇಶಕರು ಒಗ್ಗೂಡಿ ರೈತರ ಸಂಕಷ್ಟವನ್ನು ಮನಗಂಡು ಹಾಲಿನ ದರ ಹೆಚ್ಚಳಕ್ಕೆ ಒತ್ತಾಯಿಸಿದ್ದರ ಪರಿಣಾಮವಾಗಿ ರಾಜ್ಯ ಸರ್ಕಾರ ಪ್ರತಿ ಲೀ.ಹಾಲಿಗೆ 7ರು. ಪ್ರೋತ್ಸಾಹಧನ ನೀಡಿದೆ. ಇದರಿಂದ ಸಂಕಷ್ಟದಲ್ಲಿದ್ದ ಹೈನುಗಾರರಿಗೆ ಹೊಸ ಉತ್ತೇಜನ ದೊರೆತಿದ್ದು, ಹೈನುಗಾರಿಕೆಯಲ್ಲಿ ಮತ್ತೆ ಆಸಕ್ತಿ ಮೂಡಿದೆ. ಕೃಷಿ ಉತ್ಪಾದನಾ ವೆಚ್ಚದ ಜತೆಗೆ ಪಶು ಆಹಾರ, ಹಿಂಡಿ, ಮೇವು ಸೇರಿದಂತೆ ಹೈನುಗಾರಿಕೆಗೆ ಅಗತ್ಯವಿರುವ ವಸ್ತುಗಳ ಬೆಲೆ ಏರಿಕೆಯಾಗಿದ್ದರಿಂದ ರೈತರು ಹಸುಗಳನ್ನು ಸಾಕಲು ಪರದಾಡುವಂತಾಗಿತ್ತು. ಪರಿಣಾಮವಾಗಿ ಹೊಸಕೋಟೆ ತಾಲೂಕಿನಲ್ಲಿ ಹಿಂದೆ ಸುಮಾರು 8500 ಇದ್ದ ಹಾಲು ಉತ್ಪಾದಕರ ಸಂಖ್ಯೆ 6 ಸಾವಿರಕ್ಕೆ ಇಳಿಕೆಯಾಗಿತ್ತು. ಪ್ರತಿದಿನ ಸುಮಾರು 10 ಸಾವಿರ ಲೀ.ಹಾಲಿನ ಉತ್ಪಾದನೆಯೂ ಕಡಿಮೆಯಾಗಿತ್ತು. ಇದೀಗ ಹಾಲಿನ ದರ ಹೆಚ್ಚಳ ಹಾಗೂ ಪ್ರೋತ್ಸಾಹಧನದಿಂದ ಮತ್ತೆ ಪ್ರತಿದಿನ 10 ಸಾವಿರ ಲೀ.ಹಾಲು ಹೆಚ್ಚುವರಿಯಾಗಿ ಸಂಗ್ರಹವಾಗುತ್ತಿದೆ. ಇದು ಹೈನುಗಾರಿಕೆ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಿಸಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.

ನಾನೂ ಒಬ್ಬ ಹಾಲು ಉತ್ಪಾದಕನಾಗಿದ್ದು, ಸುಮಾರು 120 ಹಸುಗಳನ್ನು ಸಾಕುತ್ತಿದ್ದೇನೆ. ನಿರ್ವಹಣಾ ವೆಚ್ಚ ಹೆಚ್ಚಾದ ಹಿನ್ನೆಲೆಯಲ್ಲಿ ನಾವೂ ಹೈನುಗಾರಿಕೆ ಕೈಬಿಡುವ ಯೋಚನೆ ಮಾಡಿದ್ದೆವು. ಆದರೆ ಇದೀಗ ಪ್ರತಿ ಲೀಟರ್‌ಗೆ 7ರು. ಪ್ರೋತ್ಸಾಹಧನ ಹಾಗೂ ಹಾಲಿನ ಗುಣಮಟ್ಟದ ಆಧಾರದ ಮೇಲೆ ಹೆಚ್ಚುವರಿ ದರ ದೊರೆಯುತ್ತಿರುವುದರಿಂದ ರೈತರಿಗೆ ಅನುಕೂಲವಾಗಿದೆ. ಪ್ರಸ್ತುತ ಉತ್ತಮ ಗುಣಮಟ್ಟದ ಹಾಲಿಗೆ ಸುಮಾರು ₹೪೯ರಿಂದ ₹೫೦ರವರೆಗೆ ದರ ಸಿಗುತ್ತಿದೆ. ನಾನು ಪ್ರತಿದಿನ ಸುಮಾರು 1200 ಲೀ.ಹಾಲು ಉತ್ಪಾದಿಸಿ ಡೇರಿಗೆ ನೀಡುತ್ತಿದ್ದೇನೆ ಎಂದು ತಿಳಿಸಿದರು.

ಹಾಲಿನಲ್ಲಿರುವ ಫ್ಯಾಟ್ ಮತ್ತು ಪ್ರೋಟೀನ್ ಅಂಶದ ಆಧಾರದ ಮೇಲೆ ದರ ನಿಗದಿಯಾಗುತ್ತದೆ. ಗುಣಮಟ್ಟದ ಹಾಲು ಉತ್ಪಾದನೆಗೆ ಉತ್ತಮ ಪಶು ಆಹಾರ ನೀಡುವುದು ಅತ್ಯಗತ್ಯ. ಈ ಹಿಂದೆ ಪಶು ಆಹಾರದ ಗುಣಮಟ್ಟದ ಬಗ್ಗೆ ರೈತರಿಂದ ದೂರುಗಳು ಕೇಳಿಬರುತ್ತಿದ್ದವು. ಇದೀಗ ಪ್ರತ್ಯೇಕ ಗುಣಮಟ್ಟದ ಪಶು ಆಹಾರ ತಯಾರಿಕಾ ಘಟಕ ಸ್ಥಾಪಿಸುವ ಮೂಲಕ ಉತ್ತಮ ದರ್ಜೆಯ ಆಹಾರ ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಹಾಲಿನ ಗುಣಮಟ್ಟ ಹೆಚ್ಚಿಸಲು ಸಾಧ್ಯವಾಗಲಿದೆ ಎಂದರು.

ಹಾಲಿನ ದರ ಹೆಚ್ಚಳದ ಜತೆಗೆ ಮೊಸರು ಮತ್ತು ತುಪ್ಪದ ದರವನ್ನೂ ಪರಿಗಣಿಸುವ ಅಗತ್ಯವಿದೆ. ಒಂದು ಲೀ. ಮೊಸರು ತಯಾರಿಸಲು ಸುಮಾರು 4 ರಿಂದ 5 ಲೀಟರ್ ಹಾಲು ಅಗತ್ಯವಾಗುತ್ತದೆ. ಅದೇ ರೀತಿ ಒಂದು ಲೀ.ತುಪ್ಪ ತಯಾರಿಸಲು ಸುಮಾರು 12 ಲೀ. ಹಾಲು ಬೇಕಾಗುತ್ತದೆ. ಹೀಗಾಗಿ ಉತ್ಪಾದನಾ ವೆಚ್ಚ ಹಾಗೂ ಹಾಲಿನ ಗುಣಮಟ್ಟಕ್ಕೆ ಅನುಗುಣವಾಗಿ ದರ ಪರಿಷ್ಕರಣೆ ಮಾಡುವುದು ಅನಿವಾರ್ಯವಾಗಿತ್ತು ಎಂದರು.

ದೇಶದಲ್ಲಿ ನಂದಿನಿಗೆ ಪ್ರಥಮ ಸ್ಥಾನ:

ಕೇಂದ್ರದಿಂದ ಪ್ರಮಾಣ ಪತ್ರ

ದೇಶದಲ್ಲಿಯೇ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಗುಣಮಟ್ಟದಲ್ಲಿ ಉತ್ತಮ ಸ್ಥಾನ ಪಡೆದಿವೆ. ಕೇಂದ್ರ ಸರ್ಕಾರದಿಂದಲೂ ನಂದಿನಿ ಉತ್ಪನ್ನಗಳ ಗುಣಮಟ್ಟಕ್ಕೆ ಸಂಬಂಧಿಸಿದ ಪ್ರಮಾಣಪತ್ರ ದೊರೆತಿರುವುದು ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ಗುಣಮಟ್ಟದ ಪಶು ಆಹಾರ ಪೂರೈಕೆ, ಹಾಲಿನ ಗುಣಮಟ್ಟ ಹೆಚ್ಚಳ ಹಾಗೂ ರೈತರಿಗೆ ಸೂಕ್ತ ದರ ಒದಗಿಸುವ ಮೂಲಕ ನಂದಿನಿ ಬ್ರ‍್ಯಾಂಡ್‌ನ ಗೌರವವನ್ನು ಮತ್ತಷ್ಟು ಹೆಚ್ಚಿಸಲಾಗುವುದು. ರೈತರ ಸಂಕಷ್ಟಕ್ಕೆ ಸ್ಪಂದಿಸಿ ಹೈನುಗಾರಿಕೆಗೆ ಉತ್ತೇಜನ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಸರ್ಕಾರಕ್ಕೆ ಹಾಲು ಉತ್ಪಾದಕರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಬಮುಲ್ ನಿರ್ದೇಶಕ ಬಿವಿ.ಸತೀಶ್‌ಗೌಡ ತಿಳಿಸಿದರು.