ಸಾರಾಂಶ
ದುಪ್ಪಟ್ಟು ಇಳುವರಿ ನಿರೀಕ್ಷೆಯಲ್ಲಿ ರೈತರು । ಎಲ್ಲೆಡೆ ಕಾಣುತ್ತಿರುವ ಹಸಿರು ತೆನೆ । ಮಳೆರಾಯನಿಗೆ ವಿವಿಧ ಪೂಜೆ ಮಾಡಿದ್ದ ಅನ್ನದಾತರು
ಬಿ.ರಂಗಸ್ವಾಮಿ ತಿಪಟೂರುಕನ್ನಡಪ್ರಭ ವಾರ್ತೆ ತಿಪಟೂರು
ತಾಲೂಕಿನಾದ್ಯಂತ ರೈತರು ಪ್ರಸಕ್ತ ವರ್ಷ ಬಿತ್ತನೆ ಮಾಡಿರುವ ರಾಗಿ ಬೆಳೆಗೆ ಮಳೆ ಇಲ್ಲದೆ ಇನ್ನೇನು ಬೆಳೆ ಕೈಕೊಟ್ಟಿತು ಎಂದು ತಲೆಮೇಲೆ ಕೈಹೊತ್ತು ಆತಂಕದಲ್ಲಿದ್ದ ಅನ್ನದಾತರ ಸಂಕಷ್ಟಕ್ಕೆ ತಡವಾಗಿಯಾದರೂ ಸ್ಪಂದಿಸುತ್ತಿರುವ ಮಳೆರಾಯನ ಕೃಪೆಯಿಂದ ಕಲ್ಪತರು ನಾಡಿನಾದ್ಯಂತ ರಾಗಿ ಬೆಳೆ ಹಸಿರು ತೆನೆ ಸಹಿತ ಹಸಿರು ಹೊದಿಕೆಯೊಂದಿಗೆ ಹುಲುಸಾಗಿ ಬೆಳೆಯುತ್ತಿದ್ದು ರೈತರು ಬಂಪರ್ ಇಳುವರಿ ನಿರೀಕ್ಷೆಯಲ್ಲಿದ್ದಾರೆ.ಆಗಸ್ಟ್‌ನಲ್ಲಿ ರಾಗಿ ಬಿತ್ತನೆ ಮಾಡಬೇಕಾಗಿದ್ದು, ಮಳೆರಾಯ ಆಗಲೂ ಕೈಕೊಟ್ಟಿದ್ದ ಕಾರಣ ಒಣಭೂಮಿಗೇ ರೈತರು ರಾಗಿ ಬಿತ್ತನೆ ಮಾಡಿದ್ದರೂ, ನಂತರ ಬಂದ ಸೋನೆ ಮಳೆಗೆ ರಾಗಿ ಪೈರು ಮೊಳಕೆಯೊಡೆದು ಹುಟ್ಟಿ ಬಂದಿತ್ತು. ನಂತರ ಕಳೆ ತೆಗೆದು ಯೂರಿಯಾ ಗೊಬ್ಬರ ಹಾಕಿದ ನಂತರ ಸುಮಾರು ಒಂದೂವರೆ ತಿಂಗಳು ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ರೈತರು ರಾಗಿ ಬೆಳೆ ಆಸೆಯನ್ನು ಕೈಬಿಟ್ಟಿದ್ದರು. ಆ ಸಂದಿಗ್ದ ಸಮಯದಲ್ಲಿ ಮಳೆರಾಯನಿಗಾಗಿ ಕತ್ತೆ ಹಾಗೂ ಮಕ್ಕಳ ಮದುವೆಯಂತಹ ಆಚರಣೆಗಳ ಮಾಡಿ ಮಳೆರಾಯನಿಗಾಗಿ ಇನ್ನಿಲ್ಲದೆ ಮೊರೆ ಹೋಗಿದ್ದರು. ನಂತರ ಕಳೆದ ತಿಂಗಳ ಕೊನೆ ಭಾಗದಲ್ಲಿ ಮಳೆ ಪ್ರಾರಂಭವಾಗಿ ಈ ತನಕವೂ ಉತ್ತಮ ಮಳೆ ಬರುತ್ತಿರುವ ಕಾರಣದಿಂದ ರಾಗಿ ಪೈರು ಹಚ್ಚ ಹಸುರಿನಿಂದ ಹುಲುಸಾಗಿ ಬೆಳೆಯುತ್ತಿದ್ದು ರಾಗಿ ತೆನೆ ಕಳೆಗಟ್ಟಿ ಎಲ್ಲೆಲ್ಲೂ ಹಸಿರೇ ಕಂಗೊಳಿಸುತ್ತಿದ್ದು ಬಹುತೇಕ ಬಂಪರ್ ಬೆಳೆ ನಿರೀಕ್ಷೆಯಲ್ಲಿ ಇರುವಂತಾಗಿದೆ.
ಕೆಂದ್ರದ ಬೆಂಬಲ ಬೆಲೆ 4300 ರು.:ಕಳೆದ ವರ್ಷ ತಾಲೂಕಿನ ಕೆಲವೆಡೆ ರಾಗಿಬೆಳೆ ಸುಮಾರಾದ ಇಳುವರಿ ನೀಡಿತ್ತು. ಸರ್ಕಾರ ನಫೆಡ್ ಮೂಲಕ ಕ್ವಿಂಟಾಲ್ ರಾಗಿಯನ್ನು ಬೆಂಬಲ ಬೆಲೆಗೆ ಕೊಂಡುಕೊಂಡಿತ್ತು. ರೈತರು ನಿತ್ಯ ಬಳಕೆಗೆ ಸಾಕಾಗುವಷ್ಟು ಮಾತ್ರ ರಾಗಿ ಇಟ್ಟುಕೊಂಡು ಉಳಿದ ರಾಗಿಯನ್ನು ನಫೆಡ್ ಕೇಂದ್ರಕ್ಕೆ ಮಾರಾಟ ಮಾಡಿದ್ದರಿಂದ ಖರ್ಚಿನ ಅರ್ಧ ಭಾಗವಾದರೂ ಸಿಕ್ಕಿತ್ತು. ಈ ವರ್ಷ ಹೆಚ್ಚಿನ ನಿರೀಕ್ಷೆಯಲ್ಲಿರುವ ರೈತರು ತುಸು ಖುಷಿಯಲ್ಲಿದ್ದಾರೆ. ಬೆಂಬಲ ಬೆಲೆಯನ್ನು 4300 ರು.ಗೆ ಹೆಚ್ಚಿಸಿರುವುದು ಅನುಕೂಲವಾಗಿದೆ. ರಾಗಿ ಬೆಳೆಯಲು ಕ್ವಿಂಟಾಲ್ ಒಂದಕ್ಕೆ ನಾಲ್ಕು ಸಾವಿರ ರು. ಖರ್ಚು ಬರುತ್ತದೆ. ಹಾಗಾಗಿ ಕೇಂದ್ರ ಸರ್ಕಾರ ರಾಗಿ ಬೆಂಬಲ ಬೆಲೆಯನ್ನು 5 ಸಾವಿರ ರು.ಗಾದರೂ ಏರಿಸಿ, ಅದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರ ರಾಗಿ ಬೆಳೆಗಾರರನ್ನು ಪ್ರೋತ್ಸಾಹಿಸಲು ಕ್ವಿಂಟಾಲ್ ಒಂದಕ್ಕೆ ಒಂದು ಸಾವಿರ ರು.ವನ್ನಾದರೂ ನೀಡಿದರೆ ರಾಗಿ ಬೆಳೆಗಾರರು ಸ್ವಲ್ಪವಾದರೂ ಲಾಭ ಮಾಡಿಕೊಳ್ಳಬಹುದು ಎಂದು ರೈತರು ಹೇಳುತ್ತಾರೆ.
೨೩ ಸಾವಿರ ರು.ಗೂ ಹೆಚ್ಚು ಹೆಕ್ಟೇರ್‌ನಲ್ಲಿ ರಾಗಿ:ತಾಲೂಕಿನಾದ್ಯಂತ 23 ಸಾವಿರ ಹೆಕ್ಟೇರ್‌ಗಿಂತ ಹೆಚ್ಚು ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದ್ದು, ಅಲ್ಲಲ್ಲಿ ಬೆಂಕಿ ಹಾಗೂ ಇತರೆ ರೋಗಗಳ ಕಾಟವಿದ್ದು ಇವುಗಳ ಹತೋಟಿಗೆ ಕೃಷಿ ಇಲಾಖೆ ರೈತರಿಗೆ ಅಗತ್ಯ ಮಾಹಿತಿ, ಔಷದೋಪಚಾರ ಮಾಹಿತಿ ಹೆಚ್ಚು ಅನುಕೂಲವಾಗಬಹುದು.
ಕಳೆದ ವರ್ಷ ತೆನೆ ಬರುವ ವೇಳೆಗೆ ಮಳೆ ಕೈಕೊಟ್ಟ ಪರಿಣಾಮ ಇಳುವರಿ ಕಡಿಮೆ ಇತ್ತು. ಆದರೆ ಈ ಬಾರಿ ಮಳೆರಾಯ ಕೃಪೆ ತೋರಿರುವುದರಿಂದ ರಾಗಿ ಹುಲುಸಾಗಿ ಬೆಳೆಯುತ್ತಿದ್ದು, ರೈತರು ಆಶಾವಾದಿಯಾಗಿದ್ದಾರೆ. ಇದೇ ರೀತಿ ಮಳೆ ಮುಂದುವರಿದರೆ ಉತ್ತಮ ಇಳುವರಿ ಬರಲಿದೆ.ತಡಸೂರು ಗುರುಮೂರ್ತಿ, ರೈತ.
ಈ ಬಾರಿ ಉತ್ತಮ ಮಳೆಯಾಗುತ್ತಿದ್ದು ತಾಲೂಕಿನಲ್ಲಿ 23ಸಾವಿರ ಹೆಕ್ಟೇರ್‌ಗೂ ಹೆಚ್ಚು ರಾಗಿ ಬಿತ್ತನೆಯಾಗಿದೆ. ರೋಗ ಬಾಧೆ ಕಂಡು ಬಂದಲ್ಲಿ ಇಲಾಖೆಯಿಂದ ರೈತರಿಗೆ ಅಗತ್ಯ ಮಾಹಿತಿ ನೀಡಲಾಗುವುದು. ಒಟ್ಟಾರೆ ಈ ವರ್ಷ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದೇವೆ.ಡಾ.ಪವನ್, ಸಹಾಯಕ ಕೃಷಿ ನಿರ್ದೇಶಕರು, ತಿಪಟೂರು.