ದೇವಿಯ ದರ್ಶನ ಪಡೆದ ಲಕ್ಷಾಂತರ ಭಕ್ತರು

| Published : Mar 25 2024, 12:50 AM IST

ಸಾರಾಂಶ

ಚಿಕ್ಕಮಕ್ಕಳ ಪಾಲಕರು, ವಯೋವೃದ್ಧರು ದೇವಿ ದರ್ಶನ ಪಡೆಯಲು ಹರಸಾಹಪಡುವಂತಾಯಿತು.

ಶಿರಸಿ: ದಕ್ಷಿಣ ಭಾರತದ ಅತ್ಯಂತ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಶಿರಸಿಯ ಮಾರಿಕಾಂಬಾ ದೇವಿ ಜಾತ್ರೆಯು ಐದನೆಯ ದಿನಕ್ಕೆ ಕಾಲಿಟ್ಟಿದ್ದು, ಭಾನುವಾರ ಲಕ್ಷಾಂತರ ಭಕ್ತರು, ಗಣ್ಯರು, ನಗರದ ಬಿಡ್ಕಿಬೈಲ್‌ನಲ್ಲಿ ವಿರಾಜಮಾನಳಾದ ಮಾರಿಕಾಂಬೆಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.ಕಳೆದ ನಾಲ್ಕು ದಿನ ಭಕ್ತರ ಸಂಖ್ಯೆ ಕಡಿಮೆ ಇತ್ತು. ಶನಿವಾರದಿಂದ ಸೋಮವಾರದವರೆಗೆ ಸಾಲು ರಜೆ ಇದ್ದ ಕಾರಣ ದೂರದ ಊರುಗಳಲ್ಲಿ ನೆಲೆಸಿರುವ ಲಕ್ಷಾಂತರ ಭಕ್ತರು, ಉದ್ಯೋಗಸ್ಥರು ಭಾನುವಾರ ದೇವಿಯ ದರ್ಶನ ಪಡೆದರು. ಬೆಳಗ್ಗೆ ೫ ಗಂಟೆಯಿಂದ ಮಧ್ಯರಾತ್ರಿಯ ವರೆಗೂ ಜನದಟ್ಟಣೆ ಮುಂದುವರಿದಿತ್ತು. ದೇವಿ ದರ್ಶನ ಪಡೆಯುವ ೨ ಸಾಲು ಮಾರಿಕಾಂಬಾ ದೇವಸ್ಥಾನ ದಾಟಿತ್ತು. ಬಿಸಿಲನ್ನು ಲೆಕ್ಕಿಸದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ಕೃತಾರ್ಥರಾದರು.

ಗಣ್ಯರ ಭೇಟಿ: ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ದಂಪತಿ, ಸಂಸದ ಅನಂತಕುಮಾರ ಹೆಗಡೆ ದಂಪತಿ, ಮಕ್ಕಳು ಹಾಗೂ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಶಾಸಕ ಆರ್.ವಿ. ದೇಶಪಾಂಡೆ ಸೇರಿದಂತೆ ಮತ್ತಿತರ ಗಣ್ಯರು ಮಾರಿ ಜಪ್ಪರಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದರು. ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ ವ್ಯವಸ್ಥೆಯನ್ನು ನಿರ್ವಹಿಸಿದರು.

ನೂಕುನುಗ್ಗಲು: ಸಾಲು ರಜೆ ಇದ್ದ ಕಾರಣ ಬೇರೆ ಊರುಗಳಲ್ಲಿ ಉದ್ಯೋಗದ ನಿಮಿತ್ತ ನೆಲೆಸಿರುವ ಭಕ್ತರು ಭಾನುವಾರ ಒಂದೇ ಸಮನೇ ಜಾತ್ರೆ ಪೇಟೆಗೆ ಆಗಮಿಸಿದ್ದರಿಂದ ೧೦ ಗಂಟೆಯಿಂದ ಮಧ್ಯಾಹ್ನ ೨ ಗಂಟೆಯವರೆಗೆ ಜನದಟ್ಟಣೆ ಉಂಟಾಗಿ, ನೂಕುನುಗ್ಗಲಿಗೆ ಕಾರಣವಾಯಿತು.

ಚಿಕ್ಕಮಕ್ಕಳ ಪಾಲಕರು, ವಯೋವೃದ್ಧರು ದೇವಿ ದರ್ಶನ ಪಡೆಯಲು ಹರಸಾಹಪಡುವಂತಾಯಿತು. ವಯೋವೃದ್ಧರಿಗೆ ಜಾತ್ರಾ ಮಂಟಪಕ್ಕೆ ತೆರಳಲಾಗದೇ ಅರ್ಧದಿಂದಲೇ ವಾಪಸ್ಸು ತೆರಳಿದ ಘಟನೆಯೂ ನಡೆಯಿತು. ಭಕ್ತಾದಿಗಳನ್ನು ನಿಯಂತ್ರಿಸಲು ಬೆರಳಣಿಕೆಯಷ್ಟಿದ್ದ ಪೊಲೀಸರು ಹರಸಾಹಸಪಟ್ಟರೂ ನಿಯಂತ್ರಣ ಸಾಧ್ಯವಾಗಿಲ್ಲ. ಸ್ವಯಂ ಸೇವಕರು, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಚಿಕ್ಕಮಕ್ಕಳು, ಮಹಿಳೆಯರು, ವೃದ್ಧರಿಗೆ ದೇವಿಯ ದರ್ಶನ ಮಾಡಿಸಲು ಸಹಕರಿಸಿದರು.

ಅಂಗಡಿಕಾರರಿಗೆ ಭರ್ಜರಿ ವ್ಯಾಪಾರ: ದೇವಿಯು ಬಿಡ್ಕಿಬೈಲ್‌ನಲ್ಲಿ ಪ್ರತಿಷ್ಠಾಪನೆ ಆರಂಭವಾದ ದಿನದಿಂದ ಶುಕ್ರವಾರದವರೆಗೆ ಕಳೆದ ಜಾತ್ರೆಗಿಂತ ಈ ವರ್ಷದ ಜಾತ್ರೆಯಲ್ಲಿ ಬಹಳ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದಾರೆ. ಪ್ರತಿ ಜಾತ್ರೆಯಲ್ಲಿಯೂ ಶುಕ್ರವಾರ ಮತ್ತು ಮಂಗಳವಾರ ಉಳಿದ ದಿನಕ್ಕಿಂತ ಹೆಚ್ಚಿನ ಸಂಖ್ಯೆಯ ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದರು. ಆದರೆ ಈ ವರ್ಷ ಭಾನುವಾರ ಕಾಲು ಹಾಕಲು ಜಾಗವಿಲ್ಲದಷ್ಟು ದಟ್ಟಣೆ ಉಂಟಾಗಿತ್ತು. ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಶಿರಸಿ ಭಾಗದ ಯುವಕರು ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಹೊರಟು ಶನಿವಾರ, ಭಾನುವಾರ ಜಾತ್ರೆಗೆ ಆಗಮಿಸಿದ್ದರಿಂದ ಭಾನುವಾರ ರಾತ್ರಿ ೩ ಗಂಟೆಯವರೆಗೂ ಜಾತ್ರೆ ಪೇಟೆಯಲ್ಲಿ ಜನಸಾಗರವೇ ತುಂಬಿತ್ತು.

ಮನರಂಜನಾ ಆಟಿಕೆಗಳು, ತಿಂಡಿ- ತಿನಿಸುಗಳು, ಐಸ್‌ಕ್ರೀಮ್‌ಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಮಂದಗತಿಯಲ್ಲಿ ನಡೆಯುತ್ತಿರುವ ವ್ಯಾಪಾರ ಶನಿವಾರ ಮತ್ತು ಭಾನುವಾರ ಹೆಚ್ಚಾದ್ದರಿಂದ ವ್ಯಾಪಾರಸ್ಥರು ಖುಷಿಪಟ್ಟರು.

ಗಮನಸೆಳೆದ ಅಮ್ಯೂಸ್‌ಮೆಂಟ್‌ಗಳು: ಕೋಟೆಕೆರೆಯ ಮಾರಿಕಾಂಬಾ ಪ್ಯೂಯಲ್ಸ್ ಪಕ್ಕದಲ್ಲಿ ಶಿರಸಿಯ ಯುವಕರು ಹಾಕಿರುವ ಮಾರಿಕಾಂಬಾ ಅಮ್ಮ ಅಮ್ಯೂಸ್‌ಮೆಂಟ್‌ಗಳು ಜನರನ್ನು ಬೆರಗುಗೊಳಿಸಿತು. ಜೋಯಿಂಟ್ ವೀಲ್, ಕ್ರಾಸ್‌ವೀಲ್, ಟೋರಾಟೋರಾ, ಸಲೋಂಬೋ, ರೇಂಜರ್, ಟೋವರ್, ಮೌತ್ ಕಾ ಖುವಾ, ಕೋಲೋಂಬಸ್ ಹಾಗೂ ಮಕ್ಕಳ ಮನರಂಜನಾ ಆಟಗಳನ್ನು ಆಡಿ ಸಂಭ್ರಮಿಸಿದರು. ಅಲ್ಲದೇ, ಬೈಕ್ ಸ್ಟಂಟ್‌ನ "ಸ್ಟಂಟ್ ಮೇನಿಯಾ " ಬಹು ಆಕರ್ಷಣೀಯವಾಗಿತ್ತು.