ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಿತಾಂಶ ಈಗಾಗಲೇ ಲಕ್ಷಾಂತರ ಮಹಿಳೆಯರ ಜೀವನದಲ್ಲಿ ಬೆಳಕು ಮೂಡಿಸುತ್ತಿದ್ದು, ಅದರಲ್ಲೂ "ಶಕ್ತಿ ಯೋಜನೆ " ಮೂಲಕ ಉಚಿತ ಬಸ್ ಪ್ರಯಾಣ ಅವಕಾಶದಿಂದ ಲಕ್ಷಾಂತರ ಮಹಿಳೆಯರು ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ಶಾಸಕ ಎಚ್.ಕೆ. ಸುರೇಶ್ ಹೇಳಿದರು.ಶಾಸಕ ಎಚ್ ಕೆ ಸುರೇಶ್ ಅವರು, "ಈ ಯೋಜನೆಯ ಮೂಲಕ ವರ್ಷದವರೆಗೂ ಸುಮಾರು ₹500 ಕೋಟಿ ಮೌಲ್ಯದ ಉಚಿತ ಸಾರಿಗೆ ಪ್ರಯಾಣವನ್ನು ಮಹಿಳೆಯರು ಪಡೆದುಕೊಳ್ಳುತ್ತಿದ್ದಾರೆ. ಇದೊಂದು ಮಹಿಳಾ ಸಬಲೀಕರಣದ ಹೆಜ್ಜೆ ಆಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ದಿಟ್ಟ ನಿರ್ಧಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ, " ಎಂದರಲ್ಲದೆ ಈ ಹಿಂದೆ ಇದೇ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಯ ಉದ್ಘಾಟನೆ ನಾನೇ ಮಾಡಿದ್ದೆ. ಇಂದಿಗೆ ಗ್ರಾಮೀಣ ಭಾಗದ ಸಾವಿರಾರು ಮಹಿಳೆಯರು ಈ ಯೋಜನೆಯಿಂದ ಲಾಭ ಪಡೆದು, ತಮ್ಮ ಅಗತ್ಯ ಕೆಲಸಗಳಿಗಾಗಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಇದರ ಪರಿಣಾಮವಾಗಿ ರಾಜ್ಯದ ವಿವಿಧ ಪುಣ್ಯಕ್ಷೇತ್ರ ಹಾಗೂ ಧಾರ್ಮಿಕ ತಾಣಗಳಿಗೆ ಮಹಿಳೆಯರ ಭೇಟಿಯ ಪ್ರಮಾಣ ಹೆಚ್ಚಾಗಿದೆ. ಈ ಯೋಜನೆಯಿಂದ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದ್ದು, ತಮ್ಮದೇ ಆದ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಇದೊಂದು ಸಾಮಾಜಿಕ ಕ್ರಾಂತಿಯೆಂದು ಕರೆಯಬಹುದಾದ ಯೋಜನೆಯಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಆನಂದ್ ದೇಶಾಣಿ, ಗ್ಯಾರಂಟಿ ಯೋಜನೆಗಳು ಮಹಿಳೆಯರ ಬಾಳಿಗೆ ಆಶಾದೀಪ, ಕಾಂಗ್ರೆಸ್ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳು ಮಹಿಳೆಯರ ಬದುಕಿಗೆ ನೂತನ ದಿಕ್ಕು ನೀಡುತ್ತಿವೆ ಎಂದ ಅವರು, ಅನ್ನಭಾಗ್ಯ, ವಿದ್ಯುತ್, ವಿದ್ಯಾನಿಧಿ, ಶಕ್ತಿ, ಗೃಹಲಕ್ಷ್ಮಿ ಸೇರಿದಂತೆ ಗ್ಯಾರಂಟಿ ಯೋಜನೆಗಳು ಎಲ್ಲ ಮನೆಮನೆ ಬಾಗಿಲಿಗೂ ತಲುಪುತ್ತಿವೆ. ಗ್ರಾಮೀಣ ಹಾಗೂ ನಗರ ಪ್ರದೇಶದ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ವಿಶೇಷವಾಗಿ ಶಕ್ತಿ ಯೋಜನೆಯ ಉಚಿತ ಬಸ್ ಪ್ರಯಾಣದ ಪ್ರಯೋಜನವನ್ನು ಲಕ್ಷಾಂತರ ಮಹಿಳೆಯರು ಪಡೆದುಕೊಂಡಿದ್ದಾರೆ. ಇದುವರೆಗೆ ೭೭ ಲಕ್ಷ ೮೯ ಸಾವಿರಕ್ಕೂ ಹೆಚ್ಚು ಮಹಿಳಾ ಪ್ರಯಾಣಿಕರು ಈ ಯೋಜನೆಯಡಿ ಪ್ರಯಾಣಿಸಿದ್ದಾರೆ. ಇದಕ್ಕಾಗಿ ಸರ್ಕಾರವು ₹ ೫೯ ಕೋಟಿ ೨೬ ಲಕ್ಷಕ್ಕೂ ಅಧಿಕ ಹಣವನ್ನು ವ್ಯಯಿಸಿದ್ದು, ಮಹಿಳೆಯರು ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಈ ಗ್ಯಾರಂಟಿ ಯೋಜನೆಗಳು ಮಹಿಳೆಯರ ಆರ್ಥಿಕ ಸುಧಾರಣೆಗೆ ಪೂರಕವಾಗಿದ್ದು, ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ಸಹಾಯಕಾರಿಯಾಗಿ ಪರಿಣಮಿಸುತ್ತಿವೆ ಎಂದು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಬೇಲೂರು ಹಳೆಬೀಡು ಪ್ರಾಧಿಕಾರದ ಅದ್ಯಕ್ಷ ಸೈಯದ್ ತೌಫಿಕ್, ಪುರಸಭೆ ಪ್ರಭಾರಿ ಅದ್ಯಕ್ಷೆ ಉಷಾ ಸತೀಶ್, ಬಿ ಎಂ ರಂಗನಾಥ್ ರಾಜ್ಯ ಹಿಂದುಳಿದ ವರ್ಗಗದ ಕಾರ್ಯದರ್ಶಿ, ಚಂದ್ರಶೇಖರ್ ಬಿ ಎನ್, ತಾಲೂಕು ಹಿಂದುಳಿದ ವರ್ಗದ ಅಧ್ಯಕ್ಷರು, ಮಾಜಿ ಪುರಸಭೆ ಅದ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್, ಕೆಡಿಪಿ ಸದಸ್ಯೆ ಸೌಮ್ಯ ಆನಂದ್, ಗ್ಯಾರಂಟಿ ಯೋಜನೆಯ ಸದಸ್ಯರಾದ ಚೇತನ್ ಸಿ, ಶರತ್, ಅಶೋಕ್. ಡಿ.ಆರ್, ಸುರೇಶ್ ಬಿ ಎಂ, ಪ್ರತಾಪ್ ಕೆ. ಸಿ., ಇಂದ್ರೇಶ್ ಮಹೇಶ್, ಸತೀಶ್, ನಿಶ್ಚಲ್ ಮನ್ಸೂರ್ ಅಹಮದ್, ಮಹೇಶ್, ಅಬೀಬ್ ಚಂದ್ರಶೇಖರ್ ಧರ್ಮಬೋವಿ, ವಿಶಾಲಾಕ್ಷಿ, ಹಾಗೂ ಡಿಪೋ ವ್ಯವಸ್ಥಾಪಕರು ಸೇರಿದಂತೆ ಇತರರು ಹಾಜರಿದ್ದರು.