- ವಜ್ರಮಲೆ ಮರದ ಕೆಲಸಕ್ಕೆ ಸಚಿವರು ಆಕ್ರೋಶ
- ಕೆಲಸ ಗುಣಮಟ್ಟದ್ದಾಗಿರುವಂತೆ ಖಡಕ್ ಸೂಚನೆ---
ಕನ್ನಡಪ್ರಭ ವಾರ್ತೆ ಚಾಮರಾಜನಗರಮಲೆ ಮಹದೇಶ್ವರ ಬೆಟ್ಟದಲ್ಲಿ ಕ್ಷೇತ್ರಾಭಿವೃದ್ಧಿ ಕಾಮಗಾರಿಯನ್ನು ಪರಿಶೀಲನೆಗೆ ತೆರಳಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರು ಅಲ್ಲಿನ ಕಳಪೆ ಪೀಠೋಪಕರಣ ಕಾಮಗಾರಿಯನ್ನು ಕಂಡು ಕುಪಿತಗೊಂಡರು. ತಕ್ಷಣವೇ ಗುಣಮಟ್ಟವಿಲ್ಲದ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದರು.
ಇಲ್ಲಿ ನಿರ್ಮಾಣವಾಗಿರುವ 386 ಕೊಠಡಿಗಳ ವಜ್ರಮಲೆಯ ಪ್ರತಿ ಕೊಠಡಿಗೂ ಮಂಚ, ಟೇಬಲ್, ಕುರ್ಚಿ, ಸೋಫಾ ನಿರ್ಮಾಣಕ್ಕಾಗಿ ಪೀಠೋಪಕರಣಗಳ ಕೆಲಸ ನಡೆಯುತ್ತಿದ್ದು, ಸಚಿವರು ಇವುಗಳ ಪರಿಶೀಲನೆಗೆ ತೆರಳಿದರು. ಗುಣಮಟ್ಟವಿಲ್ಲದ ಕಾಮಗಾರಿ ವೀಕ್ಷಿಸಿದ ಬಳಿಕ, ಕಳಪೆ ಕಾಮಗಾರಿಗೆ ಅವಕಾಶವಿಲ್ಲ. ಪೀಠೋಪಕರಣಗಳಿಗೆ ಬಿಳಿ ಮರ ಬಳಸಬಾರದು. ಗುಣಮಟ್ಟ ಮರ ಬಳಸಬೇಕೆಂದು ಖಡಕ್ ಸೂಚನೆ ಕೊಟ್ಟರು.
ಬಳಿಕ ದೀಪದ ಒಡ್ಡುವಿನಲ್ಲಿರುವ ಮಲೆ ಮಹದೇಶ್ವರನ ಎತ್ತರದ ಪ್ರತಿಮೆ ಸ್ಥಳಕ್ಕೆ ತೆರಳಿ ಅಲ್ಲಿ ನಿರ್ಮಾಣವಾಗುತ್ತಿರುವ ಗೇಬಿಯನ್ ವಾಲ್ ಕಾಮಗಾರಿಯನ್ನು ಪರಿಶೀಲಿಸಿದರು.
ಜಿಲ್ಲಾಧಿಕಾರಿ ಶ್ರೀರೂಪ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಮಲೆ ಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಕಿರಣ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಿನ್ನಣ್ಣ ಇನ್ನಿತರ ಅಧಿಕಾರಿಗಳು ಇದ್ದರು.---
ಕುಡಿಯುವ ನೀರಿಗೆ ತೊಂದರೆ ಸಲ್ಲ: ಸಚಿವ- ಕುಡಿಯುವ ನೀರಿ, ಜಾನುವಾರುಗಳ ಮೇವಿನ ಕುರಿತು ಪರಿಶೀಲನೆ---
ಕನ್ನಡಪ್ರಭ ವಾರ್ತೆ ಹನೂರುಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಗತ್ಯ ಪ್ರಮಾಣದಲ್ಲಿ ಸಮರ್ಪಕವಾಗಿ ನೀರು ಸರಬರಾಜು ಮಾಡಲು ಅಧಿಕಾರಿಗಳು ತುರ್ತು ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಲಭ್ಯತೆ ಹಾಗೂ ವಿಪತ್ತು ನಿರ್ವಹಣೆ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕುಡಿಯುವ ನೀರು ಸಮಸ್ಯೆ ಇರುವ ಗ್ರಾಮಗಳ ಕುರಿತು ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವರು ಪ್ರಸ್ತುತ ಬೇಸಿಗೆ ಆರಂಭವಾಗಿದೆ. ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಿರುವ ಕಡೆ ಆದ್ಯತೆ ಮೇರೆಗೆ ನೀರು ಒದಗಿಸುವುದು ನಮ್ಮ ಜವಾಬ್ದಾರಿಯಾಗಿದೆ. ಖಾಸಗಿ ಕೊಳವೆಬಾವಿ, ಟ್ಯಾಂಕರ್ ಸೇರಿದಂತೆ ಪರ್ಯಾಯ ವಿಧಾನಗಳ ಮೂಲಕ ಕುಡಿಯುವ ನೀರು ಪೂರೈಸಬೇಕು. ಜೊತೆಗೆ ಮನೆಯ ದಿನಬಳಕೆಗಾಗಿ ಅಗತ್ಯವಿರುವ ನೀರನ್ನೂ ಸಹ ಒದಗಿಸಬೇಕು ಎಂದರು.
ಕುಡಿಯುವ ನೀರಿನ ಸಮಸ್ಯೆ ಇರುವ ಕಡೆ ಅಧಿಕಾರಿಗಳು ಹೆಚ್ಚಾಗಿ ತೆರಳಿ ಪರಿಹಾರಕ್ಕೆ ಮುಂದಾಗಬೇಕು. ಯಾವ ಪಂಚಾಯ್ತಿಯಲ್ಲಿ ತೊಂದರೆ ಇದೆ ಎಂದು ಖುದ್ದು ವೀಕ್ಷಿಸಬೇಕು. ಬೇಸಿಗೆ ಸಂದರ್ಭದಲ್ಲಿ ವಿಶೇಷ ಗಮನ ಹರಿಸಬೇಕು ಎಂದರು.ಅಂತರ್ಜಲ ಹೆಚ್ಚಿರುವ ಕಡೆ ಕೊಳವೆಬಾವಿಗಳನ್ನು ಇನ್ನಷ್ಟು ಆಳವಾಗಿ ಕೊರೆದು ಸಮಸ್ಯೆ ಬಗೆಹರಿಸಬೇಕು. ಅನುಷ್ಠಾನದಲ್ಲಿರುವ ಕುಡಿಯುವ ನೀರಿನ ಕಾಮಗಾರಿಯನ್ನು ವಿಳಂಬ ಮಾಡದೇ ಪೂರ್ಣಗೊಳಿಸಬೇಕು. ನಗರ, ಪಟ್ಟಣ ಪ್ರದೇಶಗಳಲ್ಲಿಯೂ ಅಗತ್ಯಕ್ಕೆ ತಕ್ಕಂತೆ ನೀರು ಸರಬರಾಜು ಮಾಡಬೇಕು. ಅಮೃತ್ 2 ಯೋಜನೆಯಡಿ ಚಾಮರಾಜನಗರ ಪಟ್ಟಣಕ್ಕೆ ನೀರು ಒದಗಿಸುವ ಯೋಜನೆಯ ಪ್ರಗತಿ ವೇಗವಾಗಿ ಆಗಬೇಕು ಎಂದು ಸಚಿವರು ನಿರ್ದೇಶನ ನೀಡಿದರು.ಇದೇ ವೇಳೆ ಮಾತನಾಡಿದ ಶಾಸಕರಾದ ಎಂ.ಆರ್. ಮಂಜುನಾಥ್, ಹನೂರು ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಪ್ರಸ್ತುತ ₹1.90 ಕೋಟಿ ವೆಚ್ಚದ ಕುಡಿಯುವ ನೀರಿನ ಕಾಮಗಾರಿ ನಿರ್ವಹಿಸಲು ಅನುದಾನ ಅಗತ್ಯವಿದೆ. ಅರಣ್ಯದಂಚಿನ ಗ್ರಾಮಗಳಲ್ಲಿ ಕೈಗೆತ್ತಿಕೊಳ್ಳಲಾಗಿರುವ ವಿದ್ಯುತ್ ಕಾಮಗಾರಿ ಮುಂದುವರೆಸಲು ಅರಣ್ಯ ಇಲಾಖೆಯಿಂದ ಯಾವುದೇ ಅಡಚಣೆಯಾಗಬಾರದು ಎಂದರು.ಮುಂಬರುವ ದಿನಗಳಲ್ಲಿ ಜಾನುವಾರುಗಳಿಗೆ ಅಗತ್ಯವಿರುವ ಮೇವು ಸಂಗ್ರಹಣೆ ಸಂಬಂಧ ವಿವರ ಪಡೆದ ಸಚಿವರು ಮೇವಿಗೆ ಯಾವುದೇ ಕೊರತೆಯಾಗದಂತೆ ದಾಸ್ತಾನು ಮಾಡಬೇಕು. ರೈತರಿಗೆ ಅವರ ಬೇಡಿಕೆ ಅನುಸಾರ ಅಗತ್ಯವಿರುವ ಪ್ರಮಾಣದಲ್ಲಿ ವಿದ್ಯುತ್ ಒದಗಿಸಬೇಕು. ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಶೀಘ್ರವೇ ಸ್ಪಂದಿಸಬೇಕು ಎಂದರು.
ಜಿಲ್ಲಾಧಿಕಾರಿ ಶ್ರೀರೂಪ ಅವರು ಮಾತನಾಡಿ ಬೇಸಿಗೆ ವೇಳೆಯಲ್ಲಿ ಕಾಡ್ಗಿಚ್ಚು, ಅಗ್ನಿ ಅನಾಹುತಗಳು ಸಂಭವಿಸದಂತೆ ಅರಣ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ವಿಕೋಪ ಸಂದರ್ಭಗಳಲ್ಲಿ ಅಧಿಕಾರಿ ಸಿಬ್ಬಂದಿ, ಅಗ್ನಿಶಾಮಕಗಳ ಸನ್ನದವಾಗಿರಬೇಕು. ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಬವಣೆ ನೀಗಿಸಲು ಪೂರಕವಾಗಿರುವ ಎಲ್ಲ ಕ್ರಮಗಳ ಅನುಷ್ಠಾನಕ್ಕೆ ಮುಂದಾಗಬೇಕು ಎಂದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಮಾತನಾಡಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ 15ನೇ ಹಣಕಾಸು ಯೋಜನೆಯಡಿ ಸದ್ಬಳಕೆಯಾಗಬೇಕು. ತಾಲೂಕು ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ನಿರಂತರ ಉಸ್ತುವಾರಿ ಮಾಡಿ ವಿಶೇಷವಾಗಿ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ತಹಶೀಲ್ದಾರರಾದ ಗಿರಿಜಾ, ಬಸವರಾಜು, ಚೈತ್ರ, ತನ್ಮಯ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಇಮ್ಯಾನುವಲ್ ಸಂತೋಷ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಕಿರಣ್, ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಶಿವಪ್ರಸಾದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ತಾಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಇತರೆ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
---24ಸಿಎಚ್‌ಎನ್51ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಲಭ್ಯತೆ ಹಾಗೂ ವಿಪತ್ತು ನಿರ್ವಹಣೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು ಸಭೆಯನ್ನುನಡೆಸಿದರು.---