ಸಾರಾಂಶ
ಮೈಂಡ್ ಮಿಸ್ಟರಿ ಪ್ರದರ್ಶನದ ಪೋಸ್ಟರ್ ಅನ್ನು ನಾಡೋಜ ಡಾ. ಜಿ. ಶಂಕರ್ ಅವರು ಬಿಡುಗಡೆ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಜಾದೂ ತಂತ್ರಗಾರಿಕೆಯಿಂದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಪ್ರಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಅವರ ಹೊಸ ಪ್ರಯೋಗ ‘ಮೈಂಡ್ ಮಿಸ್ಟರಿ’ ಪ್ರದರ್ಶನದ ಪೋಸ್ಟರನ್ನು ನಾಡೋಜ ಡಾ.ಜಿ.ಶಂಕರ್ ಅವರು ಉಡುಪಿಯಲ್ಲಿ ಬಿಡುಗಡೆ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಜಾದೂ ತಂತ್ರಗಾರಿಕೆಯಿಂದ ಪೋಸ್ಟರನ್ನು ಬಿಡುಗಡೆಗೊಳಿಸಲಾಯಿತು. ಡಾ.ಜಿ.ಶಂಕರ್ ರವರು ಖಾಲಿ ಪೆಟ್ಟಿಗೆಯನ್ನು ಮಂತ್ರದಂಡದಿಂದ ತಟ್ಟಿದಾಗ ಚಿಮ್ಮಿದ ರಿಬ್ಬನ್ ರಾಶಿಯಲ್ಲಿ ಪೋಸ್ಟರ್ ಮೂಡಿಬಂತು.
ನಂತರ ಮಾತನಾಡಿದ ಡಾ.ಜಿ.ಶಂಕರ್ ಸದಾ ಹೊಸತನಗಳ ಮೂಲಕ ಜನಪ್ರಿಯರಾಗಿರುವ ಕುದ್ರೋಳಿ ಗಣೇಶ್ ಅಂತಾರಾಷ್ಟ್ರೀಯವಾಗಿ ಚರ್ಚೆಯಲ್ಲಿರುವ ಮೆಂಟಲಿಸಮ್ ಕಲೆಯನ್ನು ಕರಗತ ಮಾಡಿ ಪ್ರದರ್ಶನಕ್ಕೆ ಸಿದ್ಧರಾಗಿದ್ದಾರೆ. ಇದರ ಪ್ರಥಮ ಸಾರ್ವಜನಿಕ ಪ್ರದರ್ಶನವನ್ನು ಉಡುಪಿಯಲ್ಲಿ ಹಮ್ಮಿಕೊಂಡಿದ್ದು ಪ್ರೇಕ್ಷಕರಿಗೆ ಹೊಸ ಅನುಭವ ಸಿಗಲಿ ಎಂದು ಹಾರೈಸಿದರು.ಜಾದೂಗಾರ ಕುದ್ರೋಳಿ ಗಣೇಶ್ ಕಾರ್ಯಕ್ರಮದ ವಿಶೇಷತೆಯ ಬಗ್ಗೆ ವಿವರಿಸಿದರು. ಮೈಂಡ್ ರೀಡಿಂಗ್, ಟೆಲಿಪತಿ , ನ್ಯೂರೋ ಲಿಂಗ್ವಿಸ್ಟಿಕ್ ಪ್ರೋಗ್ರಾಮಿಂಗ್, ಸಮ್ಮೊಹಿನಿ ಮುಂತಾದ ಸುಪ್ತ ಮನಸ್ಸಿನ ಶಕ್ತಿಯ ರಂಗ ರೂಪಾತ್ಮಕ ಪ್ರಯೋಗವೇ ಮೈಂಡ್ ಮಿಸ್ಟರಿ. ಆಸ್ಟ್ರೇಲಿಯಾ, ಕೀನ್ಯಾ, ದುಬಾಯಿ, ಕತಾರ್ ಮುಂತಾದ ದೇಶಗಳಲ್ಲಿ ಈ ಪ್ರಯೋಗ ನೀಡಿದ್ದು, ಇದೇ ಮೊದಲ ಪಾಲಿಗೆ ಉಡುಪಿಯಲ್ಲಿ ಪ್ರದರ್ಶನ ನೀಡುತ್ತಿದ್ದೇನೆ ಎಂದರು, ಪತ್ರಕರ್ತರಿಗೆ ಪ್ರಾತ್ಯಕ್ಷಿಕೆಯನ್ನು ನೀಡಿದರು.
ಕಾರ್ಯಕ್ರಮದ ಸಂಯೋಜಕರಾದ ವಿಕ್ರಂ ಶೆಟ್ಟಿ ಮೈಂಡ್ ಮಿಸ್ಟರಿ ಪ್ರದರ್ಶನ ಡಿ. 21 ಸಂಜೆ 6.30ರಿಂದ ಹಾಗೂ 22 ರಂದು ಮಧ್ಯಾಹ್ನ 3.30 ಮತ್ತು ಸಂಜೆ 6.30ರಿಂದ ನಡೆಯಲಿದೆ. ಈ ಪ್ರದರ್ಶನ ವೀಕ್ಷಣೆಗೆ ಏಕಾಗ್ರತೆ ಹಾಗೂ ಗಂಭೀರತೆ ಬೇಕಾಗಿರುವುದರಿಂದ 16 ವರ್ಷ ಮೇಲ್ಪಟ್ಟವರಿಗೆ ಮಾತ್ರ ಪ್ರವೇಶಾವಕಾಶ ಇರುತ್ತದೆ ಎಂದು ತಿಳಿಸಿದರು.