ಗಿರಿಯಲ್ಲಿ ಮಿನಿ ಬಸ್‌ ಪಲ್ಟಿ: ಓರ್ವ ಬಾಲಕ ಸಾವು

| Published : Apr 29 2024, 01:31 AM IST

ಸಾರಾಂಶ

ಬಾಬಾಬುಡನ್‌ ಗಿರಿಯಿಂದ ಮಾಣಿಕ್ಯಧಾರಕ್ಕೆ ಹೋಗುವ ಮಾರ್ಗದಲ್ಲಿ ಮಿನಿ ಬಸ್‌ ಪಲ್ಟಿಯಾಗಿ ಬಿದ್ದ ಪರಿಣಾಮ ಓರ್ವ ಬಾಲಕ ಮೃತಪಟ್ಟಿದ್ದು, ಇತರೆ 30ಕ್ಕೂಹೆಚ್ಚು ಮಂದಿಗೆ ಗಾಯವಾಗಿರುವ ಘಟನೆ ಭಾನುವಾರ ಮಧ್ಯಾಹ್ನ ಸುಮಾರು 3.15ರ ವೇಳೆಗೆ ಸಂಭವಿಸಿದೆ.

30ಕ್ಕೂ ಹೆಚ್ಚು ಜನರಿಗೆ ಗಾಯ । ಖಾಸಾಗಿ ವಾಹನ ನಿಷೇಧಕ್ಕೆ ಆಗ್ರಹ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಬಾಬಾಬುಡನ್‌ ಗಿರಿಯಿಂದ ಮಾಣಿಕ್ಯಧಾರಕ್ಕೆ ಹೋಗುವ ಮಾರ್ಗದಲ್ಲಿ ಮಿನಿ ಬಸ್‌ ಪಲ್ಟಿಯಾಗಿ ಬಿದ್ದ ಪರಿಣಾಮ ಓರ್ವ ಬಾಲಕ ಮೃತಪಟ್ಟಿದ್ದು, ಇತರೆ 30ಕ್ಕೂಹೆಚ್ಚು ಮಂದಿಗೆ ಗಾಯವಾಗಿರುವ ಘಟನೆ ಭಾನುವಾರ ಮಧ್ಯಾಹ್ನ ಸುಮಾರು 3.15ರ ವೇಳೆಗೆ ಸಂಭವಿಸಿದೆ.

ತುಮಕೂರು ಜಿಲ್ಲೆಯ ಶಿರಾ ಪಟ್ಟಣದ ಶರೀಫ್‌ ಅವರ ಪುತ್ರ ನವಾಜ್‌ (6 ವರ್ಷ) ಮೃತಪಟ್ಟ ದುರ್ದೈವಿ. ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಯ ಸಂಬಂಧಿಕರು ಒಟ್ಟುಗೂಡಿ ಮಿನಿ ಬಸ್ಸಿನಲ್ಲಿ ಹಿರಿಯೂರಿನ ಆದಿವಾಲದಿಂದ ಬಾಬಾ ಬುಡನ್‌ಗಿರಿ, ಮಾಣಿಕ್ಯಧಾರಕ್ಕೆ ಭಾನುವಾರ ಪ್ರವಾಸಕ್ಕೆ ಆಗಮಿಸಿದ್ದರು. ಈ ಬಸ್ಸಿನಲ್ಲಿ 10 ಮಕ್ಕಳು ಸೇರಿದಂತೆ ಒಟ್ಟು 34 ಮಂದಿ ಇದ್ದರು. ಮಧ್ಯಾಹ್ನ ಬಾಬಾಬುಡನ್‌ ಗಿರಿ ನೋಡಿದ ಬಳಿಕ ಇದೇ ಬಸ್ಸಿನಲ್ಲಿ ಮಾಣಿಕ್ಯಾಧಾರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಝಡ್‌ ಪಾಯಿಂಟ್‌ ಬಳಿ ಇರುವ ಎರಡನೇ ತಿರುವಿನಲ್ಲಿ ಬಸ್‌ ಉರುಳಿ ಬಿದ್ದಿದೆ. ಈ ಚಿತ್ರಣವನ್ನು ಹಲವು ಮಂದಿ ಕಣ್ಣಾರೆ ಕಂಡಿದ್ದಾರೆ. ಗಾಯಾಳುಗಳನ್ನು ಕೂಡಲೇ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದ್ದು, ಬಾಲಕ ನೋರ್ವ ಹೊರತುಪಡಿಸಿ ಇನ್ನುಳಿದ ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿದ್ದವು.

ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

---ಬಾಕ್ಸ್ಸ್--ಖಾಸಗಿ ಪ್ರವಾಸಿ ವಾಹನ ನಿಷೇಧಕ್ಕೆ ಆಗ್ರಹಚಿಕ್ಕಮಗಳೂರು: ಮುಳ್ಳಯ್ಯನಗಿರಿ, ದತ್ತ ಪೀಠ ಸೇರಿದಂತೆ ಗಿರಿ ಪ್ರದೇಶದಲ್ಲಿ ಖಾಸಗಿ ಪ್ರವಾಸಿ ದೊಡ್ಡ ದೊಡ್ಡ ವಾಹನ ಗಳನ್ನು ನಿಷೇಧಿಸಬೇಕು ಎಂದು ವನ್ಯಜೀವಿ ಕಾರ್ಯಕರ್ತರ ಜಿ. ವೀರೇಶ್‌ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಬೆಟ್ಟದ ಕಡಿದಾದ ರಸ್ತೆಗಳಲ್ಲಿ ಸಾಲು ಸಾಲು ದೊಡ್ಡ ವಾಹನಗಳ ಸಂಚಾರದಿಂದ ವಾಹನ ದಟ್ಟಣೆ, ಪರಿಸರ ನಾಶ ಆಗುತ್ತಿದೆ. ಜೊತೆಗೆ ವಾಹನಗಳ ಅಪಘಾತ ಮತ್ತು ತಿರುವುಗಳಲ್ಲಿ ಆಯಾ ತಪ್ಪಿ ಬಿದ್ದ ಉದಾಹರಣೆಗಳು ಸಾಕಷ್ಟಿವೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗಿರಿ ಪ್ರದೇಶದಲ್ಲಿ ಪ್ರವಾಸಿಗರಿಗೆ ಸರ್ಕಾರದಿಂದ ಬೆಟ್ಟ ವೀಕ್ಷಣಾ ಸಫಾರಿ ವಾಹನ ವ್ಯವಸ್ಥೆ ಪ್ರಾರಂಭಿಸಬೇಕು. ಇದರಿಂದ ಪ್ರವಾಸಿ ವಾಹನ ದಟ್ಟಣೆ ಕಡಿಮೆ ಮಾಡಬಹುದು ಮತ್ತು ಸರ್ಕಾರಕ್ಕೂ ಆದಾಯ ಬರುತ್ತದೆ. ಗಿರಿ ಪ್ರದೇಶದಲ್ಲಿ ಸರಿಯಾಗಿ ವಾಹನ ಚಾಲನೆ ಮಾಡದೆ ಅಪಘಾತ ಮತ್ತು ಸಾಲು ಸಾಲು ವಾಹನಗಳ ಸಂಚಾರದಿಂದ ಟ್ರಾಫಿಕ್ ಜಾಮ್ ಸಮಸ್ಯೆ ಉಲ್ಬಣ ಗೊಂಡಿದೆ. ಇದರಿಂದ ಸ್ಥಳೀಯರಿಗೆ ಕಿರಿ ಕಿರಿ ಉಂಟಾಗಿರುವ ಜೊತೆಗೆ ವನ್ಯಜೀವಿಗಳ ಮುಕ್ತ ಸಂಚಾರಕ್ಕೆ ಧಕ್ಕೆ ಉಂಟಾಗಿದೆ ಎಂದು ಹೇಳಿದ್ದಾರೆ.

ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಂಡು ಗಿರಿಯಲ್ಲಿ ಬೃಹತ್ ವಾಹನಗಳ ಹಾಗೂ ಪ್ರವಾಸಿ ವಾಹನಗಳ ನಿಷೇಧ ಮಾಡಿ, ಸರ್ಕಾರಿ ಪ್ರಾಯೋಜಕತ್ವದ ವೀಕ್ಷಣಾ ಸಫಾರಿ ವಾಹನ ವ್ಯವಸ್ಥೆ ಮಾಡಲಿ, ಇದರಿಂದ ಗಿರಿಯಲ್ಲಿ ಒತ್ತಡ ಕಡಿಮೆ ಆಗುತ್ತದೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿರುತ್ತದೆ. ಈಗಾಗಲೇ ಈ ರೀತಿ ಯೋಜನೆ ಹಲವು ಕಡೆ ಯಶಸ್ವಿಯಾಗಿದೆ, ಇದರಿಂದ ಪರಿಸರ ಮಾಲಿನ್ಯ ನಿಯಂತ್ರಣ ಆಗುತ್ತದೆ ಎಂದಿದ್ದಾರೆ. 28 ಕೆಸಿಕೆಎಂ 2ಬಾಬಾಬುಡನ್‌ಗಿರಿ- ಮಾಣಿಕ್ಯಾಧಾರ ರಸ್ತೆಯಲ್ಲಿ ಭಾನುವಾರ ಮಧ್ಯಾಹ್ನ ಪಲ್ಟಿಯಾಗಿ ಬಿದ್ದಿರುವ ಪ್ರವಾಸಿಗರ ಮಿನಿ ಬಸ್‌.