ಗುಜರಿ ಅಂಗಡಿಯಾದ ಮಿನಿ ಬಸ್ ನಿಲ್ದಾಣಗಳು!

| Published : May 20 2025, 01:07 AM IST

ಸಾರಾಂಶ

ಹಾಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಮ್ಮ 2ನೇ ಅವಧಿಯಲ್ಲಿ ಶಾಸಕ ಹಾಗೂ ಸಂಸದರ ವಿಶೇಷ ಅಭಿವೃದ್ಧಿ ಯೋಜನೆಯಡಿ ಈ ಮಿನಿ ಬಸ್ ನಿಲ್ದಾಣಗಳ ನಿರ್ಮಾಣಗೊಂಡಿದ್ದವು. ಪ್ರಯಾಣಿಕರ ಅನುಕೂಲಕ್ಕಾಗಿ ಗಂಗಾವತಿ-ಲಿಂಗಸೂಗುರು ರಾಜ್ಯ ಹೆದ್ದಾರಿಯಲ್ಲಿ ಈ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ.

ಎಂ. ಪ್ರಹ್ಲಾದ

ಕನಕಗಿರಿ:

ಪಟ್ಟಣದ ಗಂಗಾವತಿ-ಲಿಂಗಸೂಗುರು ರಾಜ್ಯ ಹೆದ್ದಾರಿಯಲ್ಲಿನ ಮಿನಿ ಬಸ್ ನಿಲ್ದಾಣಗಳು ಗುಜರಿ ಸಾಮಾಗ್ರಿ ಹಾಕುವ ಅಂಗಡಿಗಳಾಗಿ ಮಾರ್ಪಟ್ಟಿವೆ. ಹಾಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಮ್ಮ 2ನೇ ಅವಧಿಯಲ್ಲಿ ಶಾಸಕ ಹಾಗೂ ಸಂಸದರ ವಿಶೇಷ ಅಭಿವೃದ್ಧಿ ಯೋಜನೆಯಡಿ ಈ ಮಿನಿ ಬಸ್ ನಿಲ್ದಾಣಗಳ ನಿರ್ಮಾಣಗೊಂಡಿದ್ದವು. ಪ್ರಯಾಣಿಕರ ಅನುಕೂಲಕ್ಕಾಗಿ ಗಂಗಾವತಿ-ಲಿಂಗಸೂಗುರು ರಾಜ್ಯ ಹೆದ್ದಾರಿಯಲ್ಲಿ ಈ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಆದರೆ, ಸದ್ಯ ಎಡ ಮತ್ತು ಬಲದಲ್ಲಿರುವ ಈ ನಿಲ್ದಾಣಗಳು ಗುಜರಿ ಅಂಗಡಿಗಳಾಗಿ ಕಂಡು ಬರುತ್ತಿವೆ.

ಈ ಮೊದಲು ಐತಿಹಾಸಿಕ ಪ್ರಸಿದ್ಧ ಇಲ್ಲಿನ ಕನಕಾಚಲಪತಿ, ವೆಂಕಟಾಪತಿ ಬಾವಿ ಸೇರಿದಂತೆ ಜಿಲ್ಲೆಯ ಪ್ರಮುಖ ಐತಿಹ್ಯ ಸ್ಥಳಗಳ ಭಾವಚಿತ್ರವನ್ನು ಅಳವಡಿಸಿ ಈ ನಿಲ್ದಾಣಗಳಿಗೆ ಹೊಸ ರೂಪ ನೀಡಲಾಗಿತ್ತು. ಆದರೆ, ಇದೀಗ ಈ ನಿಲ್ದಾಣಗಳು ಗುಜರಿ ಅಂಗಡಿಗಳಾಗಿ ಮಾರ್ಪಟ್ಟಿರುವುದರಿಂದ ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮದ ಅಧಿಕಾರಿಗಳ ಮೇಲೆ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ.

ಕಾಲಕಾಲಕ್ಕೆ ಈ ನಿಲ್ದಾಣಗಳ ನಿರ್ವಹಣೆ ಇಲ್ಲವಾಗಿದ್ದರಿಂದ ಗುಜರಿ ಅಂಗಡಿಗಳಾಗಿ ಪರಿಣಮಿಸಿವೆಯಾದರೂ ಜಿಲ್ಲಾಡಳಿತ ಇವುಗಳ ಅಭಿವೃದ್ಧಿಗೆ ಮನಸ್ಸು ಮಾಡುತ್ತಿಲ್ಲ. ಇಲ್ಲಿ ಮದ್ಯದ ಪೌಚ್, ಬಾಟಲಿ ಸೇರಿದಂತೆ ತ್ಯಾಜ್ಯ ಬಿದ್ದಿದ್ದರಿಂದ ದುರ್ವಾಸನೆ ಬೀರುತ್ತಿದೆ. ಸದ್ಯ ನಿಲ್ದಾಣಗಳಲ್ಲಿ ಪ್ರಯಾಣಿಕರು ಹೋಗಿ ಕುಳಿತುಕೊಳ್ಳದಂತಾಗಿದೆ. ಇತ್ತ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಸ್ವಕ್ಷೇತ್ರದಲ್ಲೇ ಮಿನಿ ಬಸ್ ನಿಲ್ದಾಣಗಳ ಪರಿಸ್ಥಿತಿ ಹೀಗಿರಬೇಕಾದರೆ ಜಿಲ್ಲೆಯ ವಿವಿಧ ತಾಲೂಕಿನಲ್ಲಿರುವ ನಿಲ್ದಾಣಗಳು ಹೇಗಿರಬೇಡ ಎನ್ನುವುದು ಸ್ಥಳೀಯರ ಆರೋಪವಾಗಿದೆ.

ಎಚ್ಚೆತ್ತುಕೊಳ್ಳುತ್ತಾ ಜಿಲ್ಲಾಡಳಿತ:

ಬೇಸಿಗೆ ದಿನಗಳಲ್ಲಿ ಹಾಗೂ ಮಳೆಗಾಲದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಿದ್ದ ಮಿನಿ ಬಸ್ ನಿಲ್ದಾಣಗಳು ಈಗ ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ. ಪಟ್ಟಣದ ವಾಲ್ಮೀಕಿ ವೃತ್ತದ ಪ್ರದೇಶದಲ್ಲಿರುವ ಇವುಗಳಿಗೆ ಜಿಲ್ಲಾಡಳಿತ ಹೊಸ ರೂಪ ನೀಡಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುತ್ತಾ? ಕಾದು ನೋಡಬೇಕು.

ಮಿನಿ ಬಸ್ ನಿಲ್ದಾಣಗಳು ಪ್ರಯಾಣೀಕರಿಗೆ ಅನುಕೂಲವಾಗಿವೆ. ಆದರೆ, ಇವುಗಳ ನಿರ್ವಹಣೆ ಸಮಸ್ಯೆಯಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗಿದೆ. ನಮ್ಮದೇ ಕ್ಷೇತ್ರದ ಶಾಸಕರು ಜಿಲ್ಲೆಯ ಉಸ್ತುವಾರಿ ಮಂತ್ರಿಗಳಾಗಿದ್ದಾರೆ. ಸಚಿವರು ಈ ಬಗ್ಗೆ ಗಮನಕ್ಕೆ ತೆಗೆದುಕೊಂಡು ನಿಲ್ದಾಣಗಳ ಅಭಿವೃದ್ಧಿಪಡಿಸಬೇಕು.

ದುರ್ಗಾದಾಸ ಯಾದವ, ಸಾಮಾಜಿಕ ಹೋರಾಟಗಾರಈ ನಿಲ್ದಾಣಗಳು ಸಚಿವ ಶಿವರಾಜ ತಂಗಡಗಿ ಹಾಗೂ ಮಾಜಿ ಸಂಸದ ಶಿವರಾಮೇಗೌಡ ಅವಧಿಯಲ್ಲಿ ನಿರ್ಮಾಣಗೊಂಡಿದ್ದು, ಇವು ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮದ ವ್ಯಾಪ್ತಿಯಲ್ಲಿವೆ. ಹೆದ್ದಾರಿಯವರು ಈ ನಿಲ್ದಾಣಗಳನ್ನು ಪಪಂ ವ್ಯಾಪ್ತಿಗೆ ಹಸ್ತಾಂತರಿಸಿದರೆ ಅಭಿವೃದ್ಧಿಪಡಿಸುತ್ತೇವೆ.

ಅನಿಲ ಬಿಜ್ಜಳ, ಪಪಂ ಸದಸ್ಯ