ಸ್ವಾಮಿಮಲೈ ಪ್ರದೇಶದಲ್ಲಿ ಗಣಿಗಾರಿಕೆ ಪರಿಸರ ಪ್ರಿಯರ ಆಕ್ರೋಶ

| Published : Jun 15 2024, 01:03 AM IST

ಸಾರಾಂಶ

ಸುಂದರ ಪರಿಸರದ ಸಂರಕ್ಷಣೆಗಾಗಿ ಜನ ಜಾಗೃತಿ ಮೂಡಿಸಲು ಮತ್ತು ಸರ್ಕಾರದ ಗಮನ ಸೆಳೆಯಲು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಗಿದೆ.

ಸಂಡೂರು: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀಕುಮಾರಸ್ವಾಮಿ ದೇವಸ್ಥಾನವಿರುವ ಸ್ವಾಮಿಮಲೈ ಅರಣ್ಯ ಪ್ರದೇಶದಲ್ಲಿ ಕುದುರೆಮುಖ ಕಬ್ಬಿಣ ಅದಿರು ಕಂಪನಿಗೆ (ಕೆಐಒಸಿಎಲ್) ೩೮೮ ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ಪ್ರಸ್ತಾವನೆಗೆ ಕೇಂದ್ರ ಉಕ್ಕು, ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಸಹಿ ಹಾಕಿರುವುದು ಇಲ್ಲಿನ ಪರಿಸರ ಪ್ರಿಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಶ್ರೀಕುಮಾರಸ್ವಾಮಿ ದೇವಸ್ಥಾನವಿರುವ ಸ್ವಾಮಿಮಲೈ ಅರಣ್ಯ ಪ್ರದೇಶದಲ್ಲಿ ಹೊಸದಾಗಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಮತ್ತು ಇಲ್ಲಿನ ಜೀವವೈವಿದ್ಯ, ಅರಣ್ಯ ಸಂಪತ್ತು ಮತ್ತು ಸುಂದರ ಪರಿಸರದ ಸಂರಕ್ಷಣೆಗಾಗಿ ಜನ ಜಾಗೃತಿ ಮೂಡಿಸಲು ಮತ್ತು ಸರ್ಕಾರದ ಗಮನ ಸೆಳೆಯಲು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಗಿದೆ.

ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಈ ಕುರಿತ ಒಪ್ಪಂದಕ್ಕೆ ಸಹಿ ಹಾಕಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಪರಿಸರ ಪ್ರಿಯರು, ಈ ಹಿಂದೆ ವಿರೋಧ ಪಕ್ಷದಲ್ಲಿದ್ದ ಸಂದರ್ಭದಲ್ಲಿ ಅವರು ಗಣಿಗಾರಿಕೆ ವಿರೋಧಿಸಿದ್ದರು. ತಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ದೇವಸ್ಥಾನದ ಸುತ್ತ ೨-೩ ಕಿ.ಮೀ. ವಿಸ್ತೀರ್ಣದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೆ ಅದನ್ನು ಪಾಲಿಸಲಿಲ್ಲ ಎಂದಿದ್ದಾರೆ.ಸ್ವಾಮಿಮಲೈ ಅರಣ್ಯ ಪ್ರದೇಶದಲ್ಲಿ ಹೊಸದಾಗಿ ಗಣಿಗಾರಿಕೆಗೆ ಅವಕಾಶ ಕಲ್ಪಿಸಿದರೆ, ಇಲ್ಲಿನ ಹಲವು ಜಲಪಾತಗಳು, ಜಲ ಮೂಲಗಳು, ಕುಮಾರಸ್ವಾಮಿ ಸಂರಕ್ಷಿತ ದೇವಸ್ಥಾನ, ಔಷಧೀಯ ಸಸ್ಯ, ಜೀವ ವೈವಿಧ್ಯದ ಅಸ್ತಿತ್ವಕ್ಕೆ ಕುತ್ತು ಬರುತ್ತದೆ. ಹೊಸದಾಗಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎನ್ನುತ್ತಾರೆ ಸಂಡೂರು ಪರಿಸರವಾದಿ ಮೂಲೆಮನೆ ಈರಣ್ಣ.

ಸ್ವಾಮಿಮಲೈ ಅರಣ್ಯ ಪ್ರದೇಶದಲ್ಲಿ ಹೊಸದಾಗಿ ಗಣಿಗಾರಿಕೆಗೆ ಅನುಮತಿ ನೀಡಲು ನಮ್ಮ ವಿರೋಧವಿದೆ. ಇದರಿಂದ ಇಲ್ಲಿನ ಪರಿಸರ, ಜನಜೀವನ, ಜೀವ ವೈವಿಧ್ಯ, ಜಲಮೂಲಗಳಿಗೆ ಕಂಟಕ ಎದುರಾಗಲಿದೆ ಎನ್ನುತ್ತಾರೆ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಲ್.ಕೆ. ನಾಯ್ಡು.