ತೆಂಕಮಿಜಾರಿನಲ್ಲಿ ಗಣಿಗಾರಿಕೆ: 21ರಂದು ಪ್ರತಿಭಟನೆ

| Published : Jul 20 2025, 01:18 AM IST

ಸಾರಾಂಶ

ಬಡಗಮಿಜಾರು ಗ್ರಾಮದ ಸ.ನಂ.154/2 ಹಾಗೂ 154 ರಲ್ಲಿ ನಡೆಸುತ್ತಿರುವ ಈ ಬಾಕ್ಸೈಟ್ ಗಣಿಗಾರಿಕೆ ಈ ಭಾಗದ ಜನರನ್ನು ಕಂಗೆಡಿಸಿದೆ. ಪರಿಸರ ಹಾಳಾಗುತ್ತಿದೆ, ಜನರ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ. 20 ಚಕ್ರಗಳ ಘನವಾಹನಗಳು ದೊಡ್ಡ ಸಂಖ್ಯೆಯಲ್ಲಿ ಸಂಚರಿಸುತ್ತಿರುವುದರಿಂದ ರಸ್ತೆಗಳೂ ಮೂಲಸ್ವರೂಪವನ್ನು ಕಳೆದುಕೊಂಡಿದೆ. ಜನರ ಬದುಕುವ ಹಕ್ಕನ್ನು ಈ ಗಣಿಗಾರಿಕೆ ಕಸಿದುಕೊಳ್ಳುತ್ತಿದೆ ಎಂದು ಜಿ.ಪಂ. ಮಾಜಿ ಸದಸ್ಯ ಜನಾರ್ದನ ಗೌಡ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ತೆಂಕಮಿಜಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಗಮಿಜಾರು ಗ್ರಾಮದಲ್ಲಿ ರಾಜಕಾರಣಿಯೋರ್ವರ ಸಂಬಂಧಿಕರು ಸೇರಿಕೊಂಡು ನಡೆಸುತ್ತಿರುವ ಬಾಕ್ಸೈಟ್ ಗಣಿಗಾರಿಕೆಯಿಂದ ಬಲುದೊಡ್ಡ ಪ್ರಾಕೃತಿಕ ವಿಕೋಪದ ಸಂಭವವಿದ್ದು, ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಹೈಟೆಕ್ ಗಣಿಗಾರಿಕೆ ನಡೆಯುತ್ತಿದೆ. ಈ ಬಗ್ಗೆ ಯಾವೊಬ್ಬ ಅಧಿಕಾರಿ ಕೂಡ ಕ್ರಮ ತೆಗೆದುಕೊಳ್ಳುತ್ತಿಲ್ಲ. ಈ ಬೃಹತ್ ಗಣಿಗಾರಿಕೆ ವಿರುದ್ಧ ಜುಲೈ 21ರಂದು ನಿಡ್ಡೋಡಿ ಪೇಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಜಿ.ಪಂ. ಮಾಜಿ ಸದಸ್ಯ ಜನಾರ್ದನ ಗೌಡ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡಗಮಿಜಾರು ಗ್ರಾಮದ ಸ.ನಂ.154/2 ಹಾಗೂ 154 ರಲ್ಲಿ ನಡೆಸುತ್ತಿರುವ ಈ ಬಾಕ್ಸೈಟ್ ಗಣಿಗಾರಿಕೆ ಈ ಭಾಗದ ಜನರನ್ನು ಕಂಗೆಡಿಸಿದೆ. ಪರಿಸರ ಹಾಳಾಗುತ್ತಿದೆ, ಜನರ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ. 20 ಚಕ್ರಗಳ ಘನವಾಹನಗಳು ದೊಡ್ಡ ಸಂಖ್ಯೆಯಲ್ಲಿ ಸಂಚರಿಸುತ್ತಿರುವುದರಿಂದ ರಸ್ತೆಗಳೂ ಮೂಲಸ್ವರೂಪವನ್ನು ಕಳೆದುಕೊಂಡಿದೆ. ಜನರ ಬದುಕುವ ಹಕ್ಕನ್ನು ಈ ಗಣಿಗಾರಿಕೆ ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಗಣಿಗಾರಿಕೆಗೆ ಪಂಚಾಯಿತಿಯಿಂದ ಯಾವುದೇ ಪರವಾನಗಿ ಪಡೆದುಕೊಂಡಿಲ್ಲ. ಈ ಬಗ್ಗೆ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳಲ್ಲಿ ತಮ್ಮ ಸಂಕಷ್ಟವನ್ನು ದೂರಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದವರು ಹೇಳಿದರು.

ಈ ಗಣಿಗಾರಿಕೆ ನಡೆಸುತ್ತಿರುವ ಭೂಮಿಯು ಹಿಂದೆ ನಿವೃತ್ತ ಸೈನಿಕರಿಗೆ ಮಂಜೂರಾತಿಯಾಗಿದ್ದು, ಮಂಜೂರಾತಿ ಷರತ್ತುಗಳನ್ನು ಮೀರಿ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಅಲ್ಲದೆ ಅದಿರು ಸಾಗಿಸುವ ಭೂಮಿಯು ಪರಿಶಿಷ್ಟ ಜಾತಿಯವರಿಗೆ ಸೇರಿದ್ದಾಗಿದ್ದು ಅವರ ಒಪ್ಪಿಗೆ ಪಡೆಯದೇ ದೌರ್ಜನ್ಯ ಎಸಗಲಾಗುತ್ತಿದೆ. ಇದರಲ್ಲಿ ಇಲಾಖಾಧಿಕಾರಿಗಳು ಶಾಮೀಲಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದರು.

ಜಿ.ಪಂ. ಮಾಜಿ ಸದಸ್ಯ ಈಶ್ವರ್ ಕಟೀಲ್ ಮಾತನಾಡಿ, ಕಾನೂನು ಪ್ರಕಾರವಾಗಿ ಏನು ಬೇಕಾದರೂ ಮಾಡಲಿ. ಯಾವುದೇ ಪರವಾನಗಿ ಇಲ್ಲದೆ, ಸ್ಥಳೀಯ ಪಂಚಾಯಿತಿ ಅನುಮತಿಯಿಲ್ಲದೆ ರಾಜಾರೋಷವಾಗಿ ನಡೆಯುತ್ತಿರುವ ಈ ಗಣಿಗಾರಿಕೆ ನಿಲ್ಲಬೇಕು ಎಂದು ಆಗ್ರಹಿಸಿದರು.

ಸಾಮಾಜಿಕ ಹೋರಾಟಗಾರ, ಪಂಚಾಯಿತಿ ಮಾಜಿ ಸದಸ್ಯ ಸತೀಶ್ ಅಮೀನ್ ಕಲ್ಲಮುಂಡ್ಕೂರು, ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುಂದರ ಪೂಜಾರಿ ನಿಡ್ಡೋಡಿ, ತೆಂಕಮಿಜಾರು ಗ್ರಾ.ಪಂ. ಅಧ್ಯಕ್ಷೆ ಶಾಲಿನಿ, ಸದಸ್ಯ ಜನಾರ್ದನ ಗೌಡ, ದಿವ್ಯೇಶ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.