ಗಣಿಗಾರಿಕೆ ಪರವಾನಗಿ ನವೀಕರಣ ಸ್ಥಗಿತ: ಸುನಿಲ್‌ಕುಮಾರ್‌ ಆಕ್ಷೇಪ

| Published : May 13 2025, 01:10 AM IST

ಸಾರಾಂಶ

ರಾಜ್ಯ ಸರ್ಕಾರ ಕಲ್ಲು ಗಣಿಗಾರಿಕೆ ಪರವಾನಗಿ ನವೀಕರಣ ಹಾಗೂ ಹೊಸ ಪರ್ಮಿಟ್ ಸ್ಥಗಿತಗೊಳಿಸಿರುವುದರಿಂದ ಕರಾವಳಿ ಜಿಲ್ಲೆಯಲ್ಲಿ‌‌ ನಿರ್ಮಾಣ ಚಟುವಟಿಕೆ ಅಸ್ತವ್ಯಸ್ತಗೊಂಡಿದ್ದು, ಸರ್ಕಾರ ಜನರ ಉದ್ಯೋಗದ ಹಕ್ಕನ್ನು ಕಸಿದುಕೊಂಡಿದೆ ಎಂದು ಮಾಜಿ ಸಚಿವ ವಿ.ಸುನೀಲ್ ಕುಮಾರ್ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರ್ಕಳರಾಜ್ಯ ಸರ್ಕಾರ ಕಲ್ಲು ಗಣಿಗಾರಿಕೆ ಪರವಾನಗಿ ನವೀಕರಣ ಹಾಗೂ ಹೊಸ ಪರ್ಮಿಟ್ ಸ್ಥಗಿತಗೊಳಿಸಿರುವುದರಿಂದ ಕರಾವಳಿ ಜಿಲ್ಲೆಯಲ್ಲಿ‌‌ ನಿರ್ಮಾಣ ಚಟುವಟಿಕೆ ಅಸ್ತವ್ಯಸ್ತಗೊಂಡಿದ್ದು, ಸರ್ಕಾರ ಜನರ ಉದ್ಯೋಗದ ಹಕ್ಕನ್ನು ಕಸಿದುಕೊಂಡಿದೆ ಎಂದು ಮಾಜಿ ಸಚಿವ ವಿ.ಸುನೀಲ್ ಕುಮಾರ್ ಆರೋಪಿಸಿದ್ದಾರೆ.ಉಡುಪಿ ಜಿಲ್ಲೆಯಲ್ಲಿ ಗಣಿಗಾರಿಕೆ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದೆ. ಜಲ್ಲಿ, ಕಲ್ಲು, ಶಿಲೆ, ಕೆತ್ತನೆ ಕಲ್ಲು, ಕೆಂಪು ಕಲ್ಲು, ಮರಳು ಸಹಿತ ಎಲ್ಲ ಗಣಿ ಉತ್ಪಾದಕ ಸಾಮಗ್ರಿಗಳು ಸಿಗದೆ ನಿರ್ಮಾಣ ವಲಯದಲ್ಲಿ ಭಾರಿ ಏರುಪೇರಾಗಿದೆ. ಕಾನೂನು ಸುವ್ಯವಸ್ಥೆ ಪಾಲಿಸಬೇಕಾದ ಪೊಲೀಸರು ಕೊಲೆಗಡುಕರು, ಕಾನೂನು ಬಾಹಿರ ಚಟುವಟಿಕೆ ನಡೆಸುವವರ ಕೈಗೆ ಕೋಳ ಹಾಕುವ ಬದಲು ನಿರ್ಮಾಣ ವಲಯದ ಕುಶಲ ಕಾರ್ಮಿಕರನ್ನು ಠಾಣೆಯಲ್ಲಿ ಕುಳ್ಳಿರಿಸಿಕೊಳ್ಳತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪರವಾನಗಿ ನೆಪದಲ್ಲಿ ಕಾರ್ಮಿಕರ ಲಾರಿ, ಟಿಪ್ಪರ್ , ಪಿಕಪ್ ಇನ್ನಿತರ ವಾಹನ, ಕತ್ತಿ, ಪಿಕ್ಕಾಸು, ಸುತ್ತಿಗೆಗಳನ್ನು ವಶ ಪಡಿಸಿಕೊಂಡು ದುಡಿಯದಂತೆ ಮಾಡಿ ಅನ್ನ ಕಿತ್ತುಕೊಳ್ಳುವ ಕೆಲಸವನ್ನು ಸರ್ಕಾರ ಪೊಲೀಸರ ಮೂಲಕ ಮಾಡಿಸುತ್ತಿದೆ. ಮಟ್ಕಾ, ಜುಗಾರಿ ಇತ್ಯಾದಿ ಕಾನೂನು ಬಾಹಿರ ಕೃತ್ಯ ನಡೆಸುವವರು ಸಾರ್ವಜನಿಕವಾಗಿ ರಾಜಾರೋಷವಾಗಿ ಓಡಾಡುತ್ತಿದ್ದಾರೆ.ಆದರೆ ಶ್ರಮಿಕ ವರ್ಗವನ್ನು ಸಲ್ಲದ ನೆಪವೊಡ್ಡಿ ಠಾಣೆಗೆ ಕರೆಸಿಕೊಳ್ಳಲಾಗುತ್ತಿದೆ ಎಂದು ಟೀಕಿಸಿದ್ದಾರೆ.ಈ ಎಲ್ಲ ಸಮಸ್ಯೆಗಳಿಗೆ ಧ್ವನಿಯಾಗಬೇಕಿದ್ದ ಉಡುಪಿ ಜಿಲ್ಲೆ ಉಸ್ತುವಾರಿ ಸಚಿವರು ಈಗ ಅಪರೂಪದ ಅತಿಥಿಗಳಾಗಿದ್ದಾರೆ. ಕಾಟಾಚಾರಕ್ಕೆ ಉಸ್ತುವಾರಿ ಕೆಲಸ ಮಾಡುತ್ತಿದ್ದಾರೆ. ಯಾವ ಸಮಸ್ಯೆಗಳಿಗೂ ಅವರಿಂದ ಪರಿಹಾರ ದೊರೆತಿಲ್ಲ ಎಂದು ಟೀಕಿಸಿದ್ದಾರೆ.

ಗಣಿಗಾರಿಕೆ, ಪರವಾನಗಿ ನವೀಕರಣ ಸಂಬಂಧ ಈ ಹಿಂದೆ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದೆ. ಸರ್ವಾಂಗ ಸಮಸ್ಯೆಯಿಂದ ಬಳಲುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಜನರ ಸಮಸ್ಯೆ ಅರ್ಥವಾಗುತ್ತಿಲ್ಲ ಎಂದು ಟೀಕಿಸಿದ್ದಾರೆ.