ಕರ್ನಾಟಕಾಂಧ್ರ ಗಡಿಯಲ್ಲಿ ಡ್ರೋನ್‌ಗಳ ಮೂಲಕ ಮೈನಿಂಗ್ ಸರ್ವೆ ಆರಂಭ

| Published : Nov 05 2025, 02:30 AM IST

ಕರ್ನಾಟಕಾಂಧ್ರ ಗಡಿಯಲ್ಲಿ ಡ್ರೋನ್‌ಗಳ ಮೂಲಕ ಮೈನಿಂಗ್ ಸರ್ವೆ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಾಧೀಶ ಪ್ರಶಾಂತ್‌ ದುಲಿಯಾ ನೇತೃತ್ವದಲ್ಲಿ ಕರ್ನಾಟಕ-ಆಂಧ್ರ ಗಡಿಭಾಗದಲ್ಲಿ ಆರು ಜನರ ತಂಡ ಸರ್ವೇ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ಬಳ್ಳಾರಿ: ಸುಪ್ರೀಂಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಕರ್ನಾಟಕ-ಆಂಧ್ರ ಗಡಿಭಾಗದಲ್ಲಿನ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಅಧಿಕಾರಿಗಳು ಆಂಧ್ರದ ಗಡಿಯಲ್ಲಿರುವ ಒಎಂಸಿ ಸೇರಿದಂತೆ ಆರು ಮೈನಿಂಗ್ ಕಂಪನಿಗಳ ಲೀಜ್ ಬೌಂಡರಿ ಸರ್ವೆ ಕಾರ್ಯ ಆರಂಭಿಸಿದ್ದು ಡ್ರೋನ್‌ಗಳ ಮೂಲಕ ಸರ್ವೆ ಕಾರ್ಯ ಚುರುಕಿನಿಂದ ನಡೆದಿದೆ.

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಾಧೀಶ ಪ್ರಶಾಂತ್‌ ದುಲಿಯಾ ನೇತೃತ್ವದಲ್ಲಿ ಆರು ಜನರ ತಂಡ ಸರ್ವೇ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ಡಿ.ಹಿರೇಹಾಳ್‌ ಮಂಡಲದಲ್ಲಿನ ಅಂತರಗಂಗಮ್ಮ ಬೆಟ್ಟದಲ್ಲಿ ಡ್ರೋನ್‌ ಕ್ಯಾಮೆರಾ ಮೂಲಕ ಗಡಿಭಾಗದ ಸರ್ವೇ ಮಾಡಲಾಗುತ್ತಿದೆ. ಸಾಮಾಜಿಕ ಅರಣ್ಯ ಇಲಾಖೆ ಡಿಎಫ್‌ಒ ಗುರುಪ್ರಭಾಕರ್‌, ಗಣಿ ಮತ್ತು ಭೂ ವಿಜ್ಞಾನಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್‌ ಚೌದರಿ, ಭೂ ದಾಖಲೆ ಅಧಿಕಾರಿ ಜಂಟಿ ನಿರ್ದೇಶಕ ವೆಂಕಟೇಶ್ವರ ರಾವ್‌ ನೇತೃತ್ವದಲ್ಲಿ ಆಂಧ್ರ ಪ್ರದೇಶದ ಮಲಪನಗುಡಿ ಗ್ರಾಮ ವ್ಯಾಪ್ತಿಯ ಅಂತರಗಂಗಮ್ಮ ಬೆಟ್ಟದಲ್ಲಿನ 68.50 ಹೆಕ್ಟೇರ್‌, ಸಿದ್ದಾಪುರಂ ಗ್ರಾಮದ ಬಿಐಒಪಿ 27.12 ಹೆಕ್ಟೇರ್‌, ವೈ. ಮಹಾಬಲೇಶ್ವರಪ್ಪ 20.24 ಹೆಕ್ಟೇರ್‌, ಓಬಳಾಪುರ ವ್ಯಾಪ್ತಿಯ ಓಎಂಸಿ-1ರಲ್ಲಿನ 25.98 ಹೆಕ್ಟೇರ್‌ ಹಾಗೂ ಓಎಂಸಿ 2ರ 39.50 ಹೆಕ್ಟೇರ್‌ ಸೇರಿ 187.84 ಹೆಕ್ಟೇರ್‌ ಪ್ರದೇಶದಲ್ಲಿ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ಈ ಸರ್ವೇ ಕಾರ್ಯ ಇನ್ನೂ ಒಂದು ತಿಂಗಳಕಾಲ ನಿರಂತರವಾಗಿ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ಖಚಿತಪಡಿಸಿವೆ.

ಆಂಧ್ರ ಪ್ರದೇಶದ ಗಡಿಭಾಗದ ಓಎಂಸಿ ಕಂಪನಿಗೆ ನೀಡಿದ ಲೀಜ್‌ಗೆ ಸಂಬಂಧಿಸಿದ ವಿವಾದದ ಹಿನ್ನೆಲೆ ಒಟ್ಟು ಆರು ಮೈನಿಂಗ್‌ ಕಂಪನಿಗಳಿಗೆ ನೀಡಿದ ಲೀಜ್‌ ಬೌಂಡರಿಗಳನ್ನು, ಎಷ್ಟು ಪ್ರಮಾಣದಲ್ಲಿ ಗಣಿಗಾರಿಕೆ ನಡೆಸಲಾಗಿದೆ ಎಂಬ ಮಾಹಿತಿಯ ಜೊತೆಗೆ ಬೌಂಡರಿ ಲೈನ್‌ ನಿಗದಿಗೆ ಸಂಬಂಧಿಸಿದಂತೆ ಸರ್ವೆ ಕಾರ್ಯವನ್ನು ಕೈಗೊಂಡಿರುವುದು ಗಮನಾರ್ಹವಾಗಿದೆ.

ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಾಜ್ಯಗಳ ನಡುವಿನ ಗಡಿಭಾಗದಲ್ಲಿ ನಡೆದ ಅಕ್ರಮ ಗಣಿಗಾರಿಕೆಯಿಂದ ಎರಡು ರಾಜ್ಯಗಳ ಗಡಿಭಾಗ ನಾಶದ ಆರೋಪ ನಿರಂತರವಾಗಿ ಕೇಳಿ ಬಂದಿತ್ತು. ಸರ್ವೆ ಆಫ್ ಇಂಡಿಯಾದಿಂದ ಮೂರು ಬಾರಿ ಈ ಭಾಗದಲ್ಲಿ ಸರ್ವೆ ಕಾರ್ಯ ನಡೆದಿತ್ತು. ಇದೀಗ ಡ್ರೋನ್‌ಗಳ ಮೂಲಕ ಸರ್ವೆ ಶುರುಗೊಂಡಿದೆ. ಸುಪ್ರೀಂಕೋರ್ಟ್ ಸೂಚನೆ ಹಿನ್ನಲೆಯಲ್ಲಿ ಸರ್ವೆ ನಡೆಯುತ್ತಿರುವುದರಿಂದ ಹೆಚ್ಚಿನ ಮಹತ್ವ ಬಂದಿದೆ.