ಸಾರಾಂಶ
ಸಾಗರ : ತಾಲ್ಲೂಕಿನ ತಾಳಗುಪ್ಪ ಹೋಬಳಿಯ ಸೈದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನೆರೆಪೀಡಿತ ಪ್ರದೇಶಕ್ಕೆ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಾವಿನಹೊಳೆ ಮತ್ತು ವರದಾನದಿಗಳ ಪ್ರವಾಹದಿಂದಾಗಿ ಶುಂಠಿಕೊಪ್ಪ, ತಟ್ಟೆಗುಂಡಿ, ಬೀಸನಗದ್ದೆ ಗ್ರಾಮಗಳಿಗೆ ನೀರು ನುಗ್ಗಿದೆ. ಬೀಸನಗದ್ದೆ ಗ್ರಾಮ ಜಲಾವೃತವಾಗಿದೆ. ಈ ಕುರಿತು ಮಾತನಾಡಿದ ಸಚಿವ ಮಧು ಬಂಗಾರಪ್ಪ, ವಿಪರೀತ ಮಳೆಯಿಂದಾಗಿ ಈ ಭಾಗದಲ್ಲಿ ಸಾಕಷ್ಟು ಹಾನಿಯಾಗಿದೆ.
ಮಾವಿನಹಳೆ, ಕನ್ನಹೊಳೆ ಮತ್ತು ವರದಾ ನದಿ ಪ್ರವಾಹದಿಂದ ಸಾವಿರಾರು ಎಕರೆ ಕೃಷಿ ಜಮೀನು ಜಲಾವೃತವಾಗಿದ್ದು, ಗ್ರಾಮದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಸೇತುವೆ ಜಲಾವೃತವಾಗಿದೆ. ಪ್ರತಿವರ್ಷ ಮಳೆಗಾಲದಲ್ಲಿ ಇಂತಹದ್ದೆ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು ನಾನು 2013ರಲ್ಲಿ ಶಾಸಕನಾಗಿದ್ದಾಗ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಚಿಂತನೆ ನಡೆಸಿದ್ದೆನು. ಆಗ ನಾನು ವಿರೋಧ ಪಕ್ಷದಲ್ಲಿ ಇದ್ದುದ್ದರಿಂದ ಸಾಧ್ಯವಾಗಿರಲಿಲ್ಲ ಎಂದರು.ನೆರೆಯನ್ನು ನಿಯಂತ್ರಿಸಲು ವರದಾನದಿಗೆ ವರದಾಮೂಲದಿಂದ ಸೊರಬವರೆಗೆ ೬ ಕಡೆ ಸುಮಾರು 53 ಕೋಟಿ ರೂ. ವೆಚ್ಚದಲ್ಲಿ ಬ್ಯಾರೇಜ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.
ಮುಂದಿನ ಎರಡು ಮೂರು ತಿಂಗಳಿನಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿ ಪ್ರಾರಂಭಿಸಲಾಗುತ್ತದೆ. ಬ್ಯಾರೇಜ್ ನಿರ್ಮಾಣ ಮಾಡಿದರೆ ನೀರನ್ನು ಸಂಗ್ರಹಿಸುವ ಮೂಲಕ ಮಳೆಗಾಲದಲ್ಲಿ ಜಲಾವೃತವಾಗುವುದುನ್ನು ತಡೆಯಬಹುದು. ಜೊತೆಗೆ ನೀರನ್ನು ಕೃಷಿಗೆ ಬಳಕೆ ಮಾಡಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಉಪವಿಭಾಗಾಧಿಕಾರಿ ಯತೀಶ್ ಆರ್., ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಅಶೋಕ ಬರದವಳ್ಳಿ, ಲೋಕೇಶ ಗಾಳಿಪುರ ಇನ್ನಿತರರು ಹಾಜರಿದ್ದರು.