- ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರೈತರ ಜಮೀನುಗಳಿಗೆ ಖುದ್ದು ಭೇಟಿ ।

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆನಗೋಡು ಹೋಬಳಿಯ ರುದ್ರನಕಟ್ಟೆ, ಅಗಸನಕಟ್ಟೆ, ಗುಡಾಳು ಹಾಗೂ ಗುಮ್ಮನೂರು ಗ್ರಾಮಗಳ ವಿವಿಧ ರೈತರ ಜಮೀನುಗಳಿಗೆ ನೂತನ ಸಚಿವ ಕೆ.ಎಸ್. ಬಸವಂತಪ್ಪ ಭಾನುವಾರ ಭೇಟಿ ನೀಡಿ, ಮಳೆಯ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಯನ್ನು ಖುದ್ದಾಗಿ ಪರಿಶೀಲಿಸಿದರು.

ಈ ವೇಳೆ ರಾಜಪ್ಪ, ಬಸವರಾಜಪ್ಪ, ಮಂಜಪ್ಪ, ಹಾಲಪ್ಪ ಸೇರಿದಂತೆ ಹಲವು ರೈತರೊಂದಿಗೆ ನೇರವಾಗಿ ಮಾತುಕತೆ ನಡೆಸಿದ ಸಚಿವರು, ಮಳೆ ಕೊರತೆಯಿಂದ ಉಂಟಾಗಿರುವ ಸಮಸ್ಯೆಗಳು, ಬೆಳೆ ನಷ್ಟ ಹಾಗೂ ರೈತರ ಸಂಕಷ್ಟಗಳ ಕುರಿತು ಮಾಹಿತಿ ಪಡೆದರು.


ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಮಳೆಯ ತೀವ್ರ ಕೊರತೆಯಿಂದ ಮೆಕ್ಕೆಜೋಳ, ರಾಗಿ, ಅಡಿಕೆ ಸೇರಿದಂತೆ ವಿವಿಧ ಬೆಳೆಗಳು ಒಣಗುತ್ತಿವೆ. ಹಲವೆಡೆ ಬಿತ್ತನೆ ಕಾರ್ಯವೂ ಪೂರ್ಣಗೊಳ್ಳದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಸಚಿವರು ತಿಳಿಸಿದರು.

ವಾಸ್ತವ ವರದಿ ಸಲ್ಲಿಸಲು ಸೂಚನೆ:

ಬರ ಪರಿಸ್ಥಿತಿಯಿಂದ ರೈತರು ಎದುರಿಸುತ್ತಿರುವ ಸಂಕಷ್ಟದ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸಮಗ್ರ ವಾಸ್ತವ ವರದಿ ಸಿದ್ಧಪಡಿಸಿ, ತುರ್ತಾಗಿ ಸರ್ಕಾರದ ಗಮನಕ್ಕೆ ತರಬೇಕು ಎಂದು ಸಚಿವ ಬಸವಂತಪ್ಪ ಸೂಚಿಸಿದರು. ಬರದಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ಅಗತ್ಯ ಪರಿಹಾರ ಹಾಗೂ ಸೂಕ್ತ ನೆರವು ದೊರಕಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ರೈತರ ಸಂಕಷ್ಟಕ್ಕೆ ಸರ್ಕಾರ ಸದಾ ಸ್ಪಂದಿಸಲಿದೆ. ರೈತರ ಹಿತಾಸಕ್ತಿಯೇ ನಮ್ಮ ಮೊದಲ ಆದ್ಯತೆ. ಬೆಳೆಹಾನಿ ಹಾಗೂ ಬರ ಪರಿಸ್ಥಿತಿಯ ವಾಸ್ತವ ಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತಂದು ರೈತರಿಗೆ ನೆರವು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್, ಕೃಷಿ ಜಂಟಿ ನಿರ್ದೇಶಕ ಜಿಯಾವುಲ್ಲಾ, ಸಹಾಯಕ ಕೃಷಿ ನಿರ್ದೇಶಕ ಶ್ರೀಧರ್, ತೋಟಗಾರಿಕೆ ಸಹಾಯಕ ನಿರ್ದೇಶಕಿ ರೇಷ್ಮಾ ಪರ್ವೀನ್ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

- - -

-9ಕೆಡಿವಿಜಿ35, 36: ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೆಳೆ ಹಾನಿ ಪ್ರದೇಶಗಳಿಗೆ ನೂತನ ಸಚಿವ ಕೆ.ಎಸ್‌.ಬಸವಂತಪ್ಪ ಭೇಟಿ ನೀಡಿ ಪರಿಶೀಲಿಸಿದರು. -9ಕೆಡಿವಿಜಿ37: ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಬೆಳೆ ಹಾನಿಯಾಗಿರುವುದು.