- ಜನರ ಸಮಸ್ಯೆಗೆ ಪರಿಹಾರ, ನೀರಾವರಿಗೆ ಆದ್ಯತೆ ನೀಡಲು ಶ್ರೀಗಳ ಸಲಹೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ನೂತನ ಸಚಿವರಾದ ಕೆ.ಎಸ್. ಬಸವಂತಪ್ಪ ಸಿರಿಗೆರೆಯ ಶ್ರೀ ತರಳಬಾಳು ಮಠಕ್ಕೆ ಭಾನುವಾರ ಭೇಟಿ ನೀಡಿ, ಜಗದ್ಗುರು ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಆಶೀರ್ವಾದ ಪಡೆದರು.
ತಮ್ಮ ಬೆಂಬಲಿಗರು, ಹಿರಿಯರೊಂದಿಗೆ ಮಠಕ್ಕೆ ಭೇಟಿ ನೀಡಿದ ಸಚಿವ ಕೆ.ಎಸ್.ಬಸವಂತಪ್ಪ ಅವರು, ಪೀಠಾಧಿಪತಿಗಳಾದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರೊಂದಿಗೆ ಸೌಹಾರ್ದಯುತ ಮಾತುಕತೆ ನಡೆಸಿದರು. ಶ್ರೀಗಳು ಸಚಿವರಿಗೆ ಶುಭ ಹಾರೈಸಿ, ಆಶೀರ್ವದಿಸಿದರು.ಮಾಯಕೊಂಡ ಕ್ಷೇತ್ರದ ಜನರ ಕುಂದುಕೊರತೆಗಳಿಗೆ ಸ್ಪಂದಿಸುವ ಜತೆಗೆ ದಾವಣಗೆರೆ ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ವಿಶೇಷವಾಗಿ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಿ ರೈತರು, ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು.
ಸಚಿವ ಬಸವಂತಪ್ಪ ಅವರು ಶ್ರೀಗಳ ಆಶೀರ್ವಾದ ಪಡೆದು, ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಆಶೋತ್ತರಗಳಿಗೆ ಸ್ಪಂದಿಸಲು ತಮ್ಮಿಂದ ಆದಷ್ಟು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಭರಮಸಾಗರ ಕಾಂಗ್ರೆಸ್ ಮುಖಂಡ ಎಸ್‌ಎಂಎಲ್ ತಿಪ್ಪೇಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಅಣಜಿ ಎಚ್.ಚಂದ್ರಶೇಖರ, ತಾಪಂ ಮಾಜಿ ಸದಸ್ಯ ಶಂಬಣ್ಣ, ಲೋಕೇಶ್, ಆನಗೋಡು ಕರಿಬಸಪ್ಪ, ಕಂದನಕೋವಿ ಜಗಣ್ಣ, ದ್ಯಾಮಣ್ಣ, ಕೆಂಚವೀರಪ್ಪ, ಹೊಳಲ್ಕೆರೆ ವಿಜಯಣ್ಣ ಇತರರು ಇದ್ದರು.
- - --9ಕೆಡಿವಿಜಿ48, 49:
ಸಿರಿಗೆರೆಯ ಶ್ರೀ ತರಳಬಾಳು ಮಠಕ್ಕೆ ಸಚಿವ ಕೆ.ಎಸ್. ಬಸವಂತಪ್ಪ ಭೇಟಿ ನೀಡಿ ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳ ಆಶೀರ್ವಾದ ಪಡೆದರು.