ಸಚಿವ ದರ್ಶನಾಪುರ ಹಿಂದೂ ವಿರೋಧಿ: ಪ್ರತಾಪಸಿಂಹ

| Published : Sep 23 2024, 01:16 AM IST

ಸಚಿವ ದರ್ಶನಾಪುರ ಹಿಂದೂ ವಿರೋಧಿ: ಪ್ರತಾಪಸಿಂಹ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೂ ಮಹಾಗಣಪತಿ ವಿಸರ್ಜನೆ ಅಂಗವಾಗಿ ಬೃಹತ್ ಶೋಭಾಯಾತ್ರೆ । ಹಲವು ಬಿಜೆಪಿ ಮುಖಂಡರು ಭಾಗಿ

ಕನ್ನಡಪ್ರಭ ವಾರ್ತೆ ಶಹಾಪುರ

ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ಗಣೇಶ ಹಬ್ಬದ ಆಚರಣೆಗೆ ತೊಂದರೆ ಉಂಟುಮಾಡುವ ಮನಸ್ಥಿತಿಯುಳ್ಳ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕ್ಷೇತ್ರದ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ಗಣೇಶ ವಿಸರ್ಜನೆ ನಡೆಯಬಾರದು ಎನ್ನುವ ದುರುದ್ದೇಶದಿಂದ ಶನಿವಾರ ಇಡೀ ದಿನ ವಿದ್ಯುತ್ ಸಂಪರ್ಕ ಕಟ್ ಮಾಡಿದ್ದಾರೆ. ಅಂದೋಲಾ ಶ್ರೀಗಳು ಶಹಾಪುರಕ್ಕೆ ಬರಬಾರದು ಎಂಬ ಭೀತಿಯಿಂದ ತಾಲೂಕು ಪ್ರವೇಶ ಮಾಡುವುದನ್ನು ನಿರ್ಬಂಧಿಸುವುದರ ಮೂಲಕ ತಮ್ಮ ಹೇಡಿತನ ಪ್ರದರ್ಶಿಸಿದ್ದಾರೆ. ಹಿಂದೂ ವಿರೋಧಿಯಾಗಿರುವ ದರ್ಶನಾಪುರ ಅವರಿಗೆ ಹಿಂದೂಗಳು ತಕ್ಕ ಪಾಠ ಕಲಿಸಬೇಕು ಎಂದು ಮೈಸೂರಿನ ಮಾಜಿ ಸಂಸದ ಹಾಗೂ ಫೈರ್ ಬ್ರಾಂಡ್ ಪ್ರತಾಪ ಸಿಂಹ ಕರೆ ನೀಡಿದರು.

ನಗರದಲ್ಲಿ ಹಿಂದೂ ಮಹಾಗಣಪತಿ ಮಹಾಮಂಡಳಿ ವತಿಯಿಂದ ಶನಿವಾರ ಸಂಜೆ ಹಿಂದೂ ಮಹಾಗಣಪತಿ ವಿಸರ್ಜನೆ ನಿಮಿತ್ತ ಬೃಹತ್ ಶೋಭಾಯಾತ್ರೆ ಅಂಗವಾಗಿ ನಗರದ ಬಸವೇಶ್ವರ ವೃತ್ತದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಈದ್ ಮೆರವಣಿಗೆಯಲ್ಲಿ ಹಸಿರು ಧ್ವಜ ಬ್ಯಾನರ್ ಹಾಗೂ ರಸ್ತೆಗಳಲ್ಲಿ ಪರಪರಿ ಕಟ್ಟಲು ಪರವಾನಿಗೆ ಬೇಕಿಲ್ಲ. ಆದರೆ ಗಣೇಶ ಉತ್ಸವ ನಡೆಸಲು ನಗರಸಭೆ ಪರವಾನಿಗೆ ನೀಡಬೇಕು. ಇದು ನಾಚಿಗೇಡು ಸಂಗತಿಯಾಗಿದೆ ಎಂದು ದೂರಿದರು.

ಶೇ.80ರಷ್ಟು ಹಿಂದೂಗಳಿರುವ ನಾವು ದರ್ಶನಾಪೂರ ಅವರಿಗೆ ಮತ ಹಾಕಿಲ್ಲವೇ, ಆದರೆ ಕೇವಲ ಶೇ.20ರಷ್ಟು ಇರುವ ಮುಸ್ಲಿಂರ ಓಲೈಕೆಗೆ ದರ್ಶನಾಪುರ ಇಂತಹ ಕೀಳು ಮಟ್ಟದ ರಾಜಕೀಯ ಮಾಡಬಾರದಾಗಿತ್ತು. ಇಂತಹ ಹಿಂದೂ ವಿರೋಧ ಶಾಸಕನಿಗೆ 2028ರಲ್ಲಿ ಈ ಕ್ಷೇತ್ರದ ಜನ ತಕ್ಕ ಉತ್ತರ ನೀಡಬೇಕಾಗಿದೆ ಎಂದರು.

ಮುಸ್ಲಿಮರು ಪೆಟ್ರೋಲ್ ಬಾಂಬ್, ತಲ್ವಾರ, ಕಲ್ಲು ಹಿಡಿದರೆ ನಾವು ಹೆದರುತ್ತೀವಾ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಾಪಸಿಂಹ, ನೂಕ್ಲಿಯರ್ ಬಾಂಬ್ ಸಿದ್ಧಪಡಿಸಿದವರು ಹಾಗೂ ಕ್ಷಿಪಣಿ ಸನ್ನದ್ಧ ಮಾಡಿದವರು ನಾವು ಎಂಬುವುದನ್ನು ಮತಾಂಧರು ತಿಳಿದುಕೊಳ್ಳಲಿ ಎಂದರು. ನಾವು ನಮ್ಮ ಜಾತಿಯನ್ನು ತೊರೆದು ಹಿಂದೂಗಳು ಎಂಬ ಭಾವನೆ ಬರಬೇಕು. ಒಗ್ಗಟ್ಟಿನಿಂದ ನಾವೆಲ್ಲರೂ ಹೋರಾಟ ಮಾಡಬೇಕು. 2028ರಲ್ಲಿ ಹಿಂದೂ ಯುವಕ ಕ್ಷೇತ್ರದ ಶಾಸಕ ಆಗಲು ನಾವೆಲ್ಲರೂ ಪಣ ತೊಡಬೇಕು ಎಂದು ಹೇಳಿದರು. ಬಿಗಿ ಪೊಲೀಸ್ ಬಂದೋಬಸ್ತ್: ಹಿಂದೂ ಮಹಾಗಣಪತಿ ವಿಸರ್ಜನೆಯ ಬೃಹತ್ ಶೋಭಾಯಾತ್ರೆಗೆ, ಒಬ್ಬರು ಎಸ್‌ಪಿ, ಮೂವರು ಡಿವೈಎಸ್‌ಪಿ, 10 ಜನ ಸಿಪಿಐ, 15 ಪಿಎಸ್ಐ, 27 ಎಎಸ್‌ಐ, 145 ಜನ ಪೊಲೀಸ್, ಕೆಎಸ್ಆರ್‌ಪಿ 3, ಡಿಎಆರ್ 7, ಹೋಂ ಗಾರ್ಡ್ 200 ಸೇರಿ 600 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಮೆರವಣಿಗೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅಮೀನ್ ರೆಡ್ಡಿ ಪಾಟೀಲ್ ಯಾಳಗಿ, ಬಿಜೆಪಿಯ ಹಿರಿಯ ಮುಖಂಡರಾದ ಡಾ. ಚಂದ್ರಶೇಖರ ಸುಬೇದಾರ, ಯುವ ಮುಖಂಡ ಕರಣ ಸುಬೇದಾರ, ಶಿವರಾಜ ದೇಶಮುಖ, ರಾಜಶೇಖರ ಗೂಗಲ್, ಬಸವರಾಜ ವಿಭೂತಿಹಳ್ಳಿ, ಅಡಿವೆಪ್ಪ ಜಾಕಾ, ಶ್ರೀಕಾಂತ್ ಸುಬೇದಾರ್, ಶ್ರೀರಾಮ ಸೇನೆಯ ತಾಲೂಕಾಧ್ಯಕ್ಷ ಶಿವಕುಮಾರ್ ಶಿರವಾಳ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗವಹಿಸಿದ್ದರು.

ನಾಗಮಂಗಲದ ಘಟನೆ ಪೂರ್ವ ನಿಯೋಜಿತ: ಗೃಹ ಸಚಿವರು ನಾಗಮಂಗಲದಲ್ಲಿ ನಡೆದ ಗಲಾಟೆ ಸಣ್ಣದು ಎಂಬ ಹೇಳಿಕೆ ಕೊಟ್ಟಿದ್ದಾರೆ. ಆದರೆ, ಗೃಹ ಸಚಿವರು ರಾಷ್ಟ್ರದ್ರೋಹಿ ಮುಸ್ಲಿಂ ಗೂಂಡಾಗಳ ವಿರುದ್ಧ ಕ್ರಮಕೈಗೊಳ್ಳತ್ತೇವೆ ಎಂಬ ಹೇಳಿಕೆ ಕೊಡಬೇಕಿತ್ತು. ಅದು ಬಿಟ್ಟು ಅಮಾಯಕ ಜನರನ್ನು ಭಯಬೀಳುವಂತೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯಾದ್ಯಂತ ಮತಾಂಧ ಶಕ್ತಿಗಳ ಅಟ್ಟಹಾಸ ಮಿತಿಮೀರಿದೆ. ಇದಕ್ಕೆ ಕಡಿವಾಣ ಹಾಕಲು ಹಿಂದೂಗಳು ಒಗ್ಗಟ್ಟಾಗುವ ಮೂಲಕ ಸರ್ಕಾರಕ್ಕೂ ಮತ್ತು ಮತಿಗೇಡಿಗಳಿಗೆ ಬುದ್ಧಿ ಕಲಿಸಬೇಕಾಗಿದೆ ಎಂದು ಪ್ರತಾಪ ಸಿಂಹ ತಿಳಿಸಿದರು.