ಸಚಿವ ಎಸ್ಸೆಸ್ಸೆಂ ಅಭಿವೃದ್ಧಿ ಮರೆತಿಲ್ಲ: ಮೇಯರ್

| Published : Dec 22 2024, 01:32 AM IST

ಸಚಿವ ಎಸ್ಸೆಸ್ಸೆಂ ಅಭಿವೃದ್ಧಿ ಮರೆತಿಲ್ಲ: ಮೇಯರ್
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ: ಕಾಂಗ್ರೆಸ್ಸಿನ ಹಿರಿಯ ನಾಯಕ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ ಅವರ ಬಗ್ಗೆ ಹಗುರ ಹೇಳಿಕೆ ನೀಡಿದ ಚನ್ನಗಿರಿ ಶಾಸಕ ಶಿವಗಂಗಾ ವಿ.ಬಸವರಾಜ ತಕ್ಷಣ ಬಹಿರಂಗವಾಗಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಮೇಯರ್ ಕೆ.ಚಮನ್ ಸಾಬ್ ತಾಕೀತು ಮಾಡಿದರು.

ದಾವಣಗೆರೆ: ಕಾಂಗ್ರೆಸ್ಸಿನ ಹಿರಿಯ ನಾಯಕ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ ಅವರ ಬಗ್ಗೆ ಹಗುರ ಹೇಳಿಕೆ ನೀಡಿದ ಚನ್ನಗಿರಿ ಶಾಸಕ ಶಿವಗಂಗಾ ವಿ.ಬಸವರಾಜ ತಕ್ಷಣ ಬಹಿರಂಗವಾಗಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಮೇಯರ್ ಕೆ.ಚಮನ್ ಸಾಬ್ ತಾಕೀತು ಮಾಡಿದರು. ನಗರದ ಪಾಲಿಕೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ನಗರ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡುತ್ತಾ ಬಂದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಬಗ್ಗೆ ಶಿವಗಂಗಾ ಬಸವರಾಜ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು, ಇಂತಹ ಹೇಳಿಕೆ, ಟೀಕೆಗಳನ್ನು ನಾವ್ಯಾರೂ ಸಹಿಸುವುದಿಲ್ಲ ಎಂದರು.

ದಾವಣಗೆರೆ ಲೋಕಸಭಾ ಕ್ಷೇತ್ರ ಮತ್ತೆ ಕಾಂಗ್ರೆಸ್ ವಶವಾಗುವಲ್ಲಿ ಸಚಿವ ಎಸ್ಸೆಸ್ ಮಲ್ಲಿಕಾರ್ಜುನರ ಪರಿಶ್ರಮವಿದೆ. ಜಿಲ್ಲೆಯಲ್ಲಿ ಮತ್ತೆ ಕಾಂಗ್ರೆಸ್ ಪ್ರಾಬಲ್ಯ ಸಾಧಿಸುವಲ್ಲಿ ಶಾಮನೂರು ಕುಟುಂಬದ ಪಾಲು ಸಾಕಷ್ಟಿದೆ. ಹಿಂದೆ ಎಸ್ಸೆಸ್ ಮಲ್ಲಿಕಾರ್ಜುನರಿಗೆ ಸಾಕಷ್ಟು ಒಳ್ಳೆಯ ಸ್ಥಾನಮಾನ ನೀಡುವುದಾಗಿ ಇತರೆ ಪಕ್ಷಗಳು ಆಮಿಷವೊಡ್ಡಿದಾಗಲೂ ಕಾಂಗ್ರೆಸ್ ತೊರೆಯದ ನಿಷ್ಠಾವಂತ ನಾಯಕನ ಬಗ್ಗೆ ಹಗುರ ಹೇಳಿಕೆ ನೀಡಬಾರದು ಎಂದು ಶಿವಗಂಗಾ ಬಸವರಾಜಗೆ ಕಿವಿಮಾತು ಹೇಳಿದರು. ಶಿವಗಂಗಾ ಬಸವರಾಜ ಪಾಲಿಕೆ ಸದಸ್ಯನಾಗಿದ್ದಾಗಲೇ ಸರಿಯಾಗಿ ಅದರ ಕರ್ತವ್ಯ ನಿರ್ವಹಿಸಲಿಲ್ಲ. ಈಗ ಶಾಸಕರಾದ ಬಳಿಕ ತಮ್ಮ ಕ್ಷೇತ್ರದ ಬಗ್ಗೆಯೂ ಯೋಚಿಸದೇ, ಬೆಂಗಳೂರಿನಲ್ಲೇ ನೆಲೆಯೂರಿರುವ ಬಸವರಾಜ ಬಗ್ಗೆ ಸಾಕಷ್ಟು ದೂರು ಬರುತ್ತಿವೆ. ದಾವಣಗೆರೆ ಅಭಿವೃದ್ಧಿಪಡಿಸಿದ ಮಲ್ಲಿಕಾರ್ಜುನ ರ ಕಾಲಿನ ಧೂಳಿಗೂ ಸಮವಲ್ಲದವರು ಆರೋಪ ಮಾಡುವುದು ತರವಲ್ಲ. ತಕ್ಷಣವೇ ಎಸ್ಸೆಸ್ಸೆಂಗೆ ಬಹಿರಂಗ ಕ್ಷಮೆ ಕೇಳದಿದ್ದರೆ ಮುಂದಿನ ದಿನಗಳಲ್ಲಿ ಪಕ್ಷದಿಂದಲೇ ವಜಾಗೊಳಿಸಿ, ಸದಸ್ಯತ್ವ ಸ್ಥಾನದಿಂದಲೂ ರದ್ದುಗೊಳಿಸಲು ವರಿಷ್ಠರಿಗೆ ಒತ್ತಾಯಿಸಬೇಕಾದೀತು ಎಂದು ಎಚ್ಚರಿಸಿದರು.

ರಾಜಕೀಯವಾಗಿ ಬೆಳೆಯಲು ತಮಗೆ ಅವಕಾಶ ನೀಡಿದ್ದೇ ಮಲ್ಲಿಕಾರ್ಜುನ ಅಂತಾ ಇದೇ ಶಿವಗಂಗಾ ಬಸವರಾಜ ಈ ಹಿಂದೆ ಹೇಳಿದ್ದರು. ಹೀಗೆ ಹೇಳಿಕೆ ನೀಡಿದ ನಾಲ್ಕೇ ದಿನದಲ್ಲಿ ಜಿಲ್ಲಾ ಸಚಿವರ ಸ್ಥಾನ ಬದಲಿಸುವಂತೆ ಹೇಳಿಕೆ ನೀಡಿರುವುದು ಖಂಡನೀಯ. ತಕ್ಷಣವೇ ಶಿವಗಂಗಾ ಬಸವರಾಜ ಸಚಿವ ಎಸ್ಸೆಸ್ ಮಲ್ಲಿಕಾರ್ಜುನರ ಕ್ಷಮೆ ಕೇಳಬೇಕು. ಇನ್ನು ಮುಂದೆ ಎಸ್ಸೆಸ್ ಮಲ್ಲಿಕಾರ್ಜುನರ ಬಗ್ಗೆ ಮಾತನಾಡುವ ಮುನ್ನ ಹತ್ತಾರು ಸಲ ಯೋಚಿಸಬೇಕು ಎಂದು ಹೇಳಿದರು.

ದೇಶಕ್ಕೆ ಸಂವಿಧಾನ ಕೊಟ್ಟ ಬಾಬಾ ಸಾಹೇಬ್ ಅಂಬೇಡ್ಕರ್ ವಿರುದ್ಧ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ದೇಶ ವಾಸಿಗಳ ಬಳಿ ಕ್ಷಮೆ ಕೇಳಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ದೇಶದ ಧರ್ಮಗ್ರಂಥವೆಂದೇ ಕರೆಯಲ್ಪಡುವ ಸಂವಿಧಾನ ರಚಿಸಿದ ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿದ ಅಮಿತ್ ಶಾ ಕೇಂದ್ರ ಸಚಿವ ಹುದ್ದೆಯಲ್ಲಿ ಮುಂದುವರಿಯಲು ಅರ್ಹರಲ್ಲ ಎಂದರು.

ಉಪ ಮೇಯರ್ ಸೋಗಿ ಶಾಂತಕುಮಾರ ಮಾತನಾಡಿ, ಸುವರ್ಣ ಸೌಧದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಅಸಂವಿಧಾನಿಕ ಪದ ಬಳಸಿರುವ ಬಿಜೆಪಿ ವಿಪ ಸದಸ್ಯ ಸಿ.ಟಿ.ರವಿ ಗೂಂಡಾ ವರ್ತನೆಗೆ ಹಿಡಿದ ಕೈಗನ್ನಡಿಯಾಗಿದೆ. ಹೆಬ್ಬಾಳ್ಕರ್‌ ಬೆನ್ನಿಗೆ ಇಡೀ ಪಂಚಮಸಾಲಿ ಸಮಾಜವೇ ನಿಂತಿದೆ. ಈ ಬಗ್ಗೆ ಕನಿಷ್ಠ ಎಚ್ಚರಿಕೆ ಸಿ.ಟಿ.ರವಿಗೆ ಇರಬೇಕು. ಬಿಜೆಪಿ ನಾಯಕರು ಸಹ ಇಂತಹ ಎಂಎಲ್‌ಸಿ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಹೆಣ್ಣು ಮಕ್ಕಳನ್ನು ಗೌರವಿಸುವುದನ್ನು ಕಲಿಸಲಿ ಎಂದರು.

ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಗಣೇಶ ಹುಲ್ಮನಿ, ಸುಧಾ ಮಂಜುನಾಥ ಇಟ್ಟಿಗುಡಿ, ಆಶಾ ಉಮೇಶ್, ಸದಸ್ಯರಾದ ಎ.ನಾಗರಾಜ, ಜಿ.ಎಸ್.ಮಂಜುನಾಥ ಗಡಿಗುಡಾಳ್, ಕೆಪಿಸಿಸಿ ವಕ್ತಾರ ಡಿ.ಬಸವರಾಜ, ಪಂಚಮಸಾಲಿ ಸಮಾಜದ ಅಧ್ಯಕ್ಷ ಅಶೋಕ್ ಗೋಪನಾಳ್ ಮತ್ತಿತರರು ಇದ್ದರು.

ಮಹಾಭಾರತದಲ್ಲಿ ತುಂಬಿದ ಸಭೆಯಲ್ಲಿ ದುಶ್ಯಾಸನ ದ್ರೌಪದಿಯ ಸೀರೆ ಎಳೆದು ಒಬ್ಬ ಮಹಿಳೆಯನ್ನು ಅಪಮಾನಿಸಿದಂತೆ ಒಬ್ಬ ಮಹಿಳೆ ದಿಟ್ಟವಾಗಿ ರಾಜಕೀಯವಾಗಿ ಬೆಳೆದಿರುವುದನ್ನು ಸಹಿಸಲಾಗದ ಬಿಜೆಪಿ ಎಂಎಲ್ಸಿ ಸಿ.ಟಿ.ರವಿಯಂತಹವರು ಅಸಂವಿಧಾನಿಕ ಪದ ಬಳಕೆ ಮಾಡಿ, ಮಹಿಳಾ ನಾಯಕಿಯ ಆತ್ಮವಿಶ್ವಾಸ, ಆತ್ಮಸ್ಥೈರ್ಯವನ್ನೇ ಕುಗ್ಗಿಸಲು ಹೊರಟಿದ್ದಾರೆ. ಕೂಡಲೇ ಸಿ.ಟಿ.ರವಿ ಅವರು ಲಕ್ಷ್ಮೀ ಹೆಬ್ಬಾಳ್ಕರ್ ಗೆ ಕ್ಷಮೆ ಕೇಳಬೇಕು.

- ವಾಣಿ ಬಕ್ಕೇಶ್, ದೂಡಾ ಸದಸ್ಯೆ

ಮೇಯರ್ ಆದ ಎರಡು ತಿಂಗಳಲ್ಲಿ ಇ-ಸ್ವತ್ತು ಪ್ರಾರಂಭವಾಯಿತು. ಇದರ ಜೊತೆಗೆ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಿದ್ದು, ಕಸ ವಿಲೇವಾರಿಗಾಗಿ 18 ಟ್ರ್ಯಾಕ್ಟರ್, 2 ಜೆಸಿಬಿ ಖರೀದಿಸಲಾಗಿದೆ. ಶೀಘ್ರವೇ ಖಾಲಿ ನಿವೇಶನಗಳಲ್ಲಿ ಬಿದ್ದಿರುವ ಕಸ ವಿಲೇವಾರಿ ಮಾಡಿಸಲಾಗುವುದು. ಬೇಸಿಗೆ ವೇಳೆ ವಾಹನ ಸವಾರರಿಗೆ, ಪಾದಚಾರಿಗಳಿಗೆ ತೊಂದರೆಯಾಗಬಾರದೆಂದು ಸ್ಪ್ರಿಂಕ್ಲರ್ ತರಿಸಿಕೊಳ್ಳಲಾಗಿದ್ದು, ರಸ್ತೆಗೆ ಸ್ಪ್ರಿಂಕ್ಲರ್ ಮೂಲಕ ನೀರು ಹಾಯಿಸಲಾಗುವುದು.

- ಕೆ.ಚಮನ್ ಸಾಬ್, ಮೇಯರ್, ದಾವಣಗೆರೆ,