ಆನೆ ಹಾವಳಿ ನಿಯಂತ್ರಣಕ್ಕೆ ಕ್ರಮ: ಸಚಿವ ಜಾರ್ಜ್‌ ಸೂಚನೆ

| Published : Sep 13 2025, 02:04 AM IST

ಆನೆ ಹಾವಳಿ ನಿಯಂತ್ರಣಕ್ಕೆ ಕ್ರಮ: ಸಚಿವ ಜಾರ್ಜ್‌ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಜನ ಜೀವ ಭಯದಲ್ಲಿಯೇ ಓಡಾಡು ವಂತಾಗಿದೆ. ಸಣ್ಣ ಬೆಳೆಗಾರರು ಬೆಳೆಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಕಾಡಾನೆಗಳನ್ನು ಓಡಿಸಲು ಅಥವಾ ಸೆರೆ ಹಿಡಿಯಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರು ಕೊಪ್ಪ ಡಿಎಫ್‌ಒಶಿವಶಂಕರ್ಗೆ ಸೂಚನೆ ನೀಡಿದರು.

- ಶೃಂಗೇರಿ, ಬಾಳೆಹೊನ್ನೂರು ಸುತ್ತಮತ್ತ ಕಾಡಾನೆ ಹಾವಳಿ, ಆನೆ ಸಾಪ್ಟ್‌ ಕ್ಯಾಂಪ್ ಆರಂಭಿಸಲು ಜನಪ್ರತಿನಿಧಿಗಳ ಸಲಹೆ, ಜಿಪಂನಲ್ಲಿ ನಡೆದ ಕೆಡಿಪಿ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಜನ ಜೀವ ಭಯದಲ್ಲಿಯೇ ಓಡಾಡು ವಂತಾಗಿದೆ. ಸಣ್ಣ ಬೆಳೆಗಾರರು ಬೆಳೆಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಕಾಡಾನೆಗಳನ್ನು ಓಡಿಸಲು ಅಥವಾ ಸೆರೆ ಹಿಡಿಯಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರು ಕೊಪ್ಪ ಡಿಎಫ್‌ಒಶಿವಶಂಕರ್ಗೆ ಸೂಚನೆ ನೀಡಿದರು.

ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆನೆ ಹಾವಳಿ ಬಗ್ಗೆ ವಿಷಯ ಪ್ರಸ್ತಾಪಿಸಿದ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಶೃಂಗೇರಿ, ಬಾಳೆ ಹೊನ್ನೂರು ಭಾಗದಲ್ಲಿ ಐದು ಆನೆಗಳು ನಿರಂತರವಾಗಿ ಬೆಳೆ ನಾಶ ಮಾಡುತ್ತಿದ್ದವು. ಜೊತೆಗೆ ಈಗಾಗಲೇ ಕಾಡಾನೆ ದಾಳಿಗೆ ನಾಲ್ವರು ಮೃತಪಟ್ಟಿದ್ದಾರೆ. ಹೀಗಾಗಿ 2 ಅನೆಗಳನ್ನು ಸೆರೆ ಹಿಡಿಯಲಾಗಿದೆ. ಇನ್ನು 3 ಆನೆಗಳು ನಿರಂತರವಾಗಿ ದಾಳಿ ನಡೆಸುತ್ತಿವೆ. ಹೀಗಾಗಿ ಉಳಿದಿರುವ ಆನೆಗಳನ್ನು ಸೆರೆ ಹಿಡಿಯಬೇಕು ಎಂದು ಒತ್ತಾಯಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಕಾಡಾನೆ ದಾಳಿಗೆ ಸಂಬಂಧಪಟ್ಟಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಪ್ರಾಣ ಹಾನಿ ಪ್ರಕರಣ ಹೆಚ್ಚಾಗಲಿವೆ ಎಂದರು‌.

ಮೂಡಿಗೆರೆ ಶಾಸಕಿ ನಯನಾ ಮೊಟಮ್ಮ ಮಾತನಾಡಿ, ಭದ್ರ ಅಭಯಾರಣ್ಯ ವ್ಯಾಪ್ತಿಯ 200 ಹೆಕ್ಟರ್ ಪ್ರದೇಶದಲ್ಲಿ ಭದ್ರಾ ಸಾಫ್ಟ್ ರಿಲೀಸ್ ಕೇಂದ್ರ ಆರಂಭಿಸಿದಲ್ಲಿ ಪುಂಡಾಟ ನಡೆಸುವ ಆನೆಗಳನ್ನು ಅಲ್ಲಿಗೆ ಸ್ಥಳಾಂತರಿಸಬಹುದು. ಶೃಂಗೇರಿ ಅಥವಾ ಮೂಡಿಗೆರೆ ಭಾಗದಲ್ಲಿ ಆನೆ ಕ್ಯಾಂಪ್ ಆರಂಭಿಸಿದಾಗ ಮಾತ್ರ ಸ್ಥಳೀಯವಾಗಿ ಪುಂಡಾಟ ನಡೆಸುವ ಆನೆಗಳನ್ನು ಶೀಘ್ರವೇ ಸೆರೆ ಹಿಡಿದು ಸಾಫ್ಟ್ ರಿಲೀಸ್ ಕೇಂದ್ರಕ್ಕೆ ಬಿಡಲು ಸಹಾಯಕವಾಗಲಿದೆ ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಭದ್ರಾ ಹುಲಿ ಯೋಜನೆ ನಿರ್ದೇಶಕ ಪುಲ್ಕೆತ್‌ ಮೀಣಾ , ಭದ್ರಾ ಹುಲಿ ಸಂರಕ್ಷಿತ ಅಭಯಾರಣ್ಯ ವ್ಯಾಪ್ತಿ ಯಲ್ಲಿ ಆನೆಗಳ ಸಾಫ್ಟ್ ರಿಲೀಸ್ ಕೇಂದ್ರ ಆರಂಭಕ್ಕೆ ಭೂಮಿ ನೀಡಲು ಕೇಂದ್ರ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕಾಗುತ್ತದೆ ಎಂದು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಂಧನ ಸಚಿವ ಕೆ.ಜೆ.ಜಾರ್ಜ್ ಈ ಕುರಿತು ಕೇಂದ್ರ ಅರಣ್ಯ ಸಚಿವರೊಂದಿಗೆ ಮಾತನಾಡುವ ಭರವಸೆ ನೀಡಿದರು.

ಸಿ.ಟಿ.ರವಿ ಮಾತನಾಡಿ, ಜಿಲ್ಲೆಯಲ್ಲಿ ನಮೂನೆ 57ರ ಅಡಿ ಭೂ ಮಂಜೂರಾತಿಗೆ ರೈತರು ಸಲ್ಲಿಸಿದ್ದ ಅರ್ಜಿಗಳನ್ನು ಸಣ್ಣಪುಟ್ಟ ಕಾರಣ ನೀಡಿ ವಜಾ ಮಾಡಲಾಗುತ್ತಿದೆ. ಹೀಗೆ ರೈತರ ಅರ್ಜಿ ವಜಾ ಮಾಡುವ ಸಂದರ್ಭದಲ್ಲಿ ಕನಿಷ್ಠ ಪಕ್ಷ ರೈತರಿಗೆ ನೋಟಿಸ್ ಸಹ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ, ನಮೂನೆ 57ರ ಅಡಿ ಕಾಫಿ ಭೂಮಿ, ಕುಮ್ಕಿ, ಸೊಪ್ಪಿನ ಬೆಟ್ಟಗಳನ್ನು ಮಂಜೂರು ಮಾಡಲು ಬರುವುದಿಲ್ಲ. ಯಾವ ಕಾರಣಕ್ಕೆ ರೈತರ ಅರ್ಜಿ ವಜಾಗೊಳಿಸಲಾಗುತ್ತದೆ ಎಂಬ ಮಾಹಿತಿ ಪಡೆಯುತ್ತೇನೆ. ಅರಣ್ಯ ಹಾಗೂ ಕಂದಾಯ ಇಲಾಖೆಗಳು ಜಂಟಿ ಸರ್ವೆ ನಡೆಸಿ ದಾಗ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ಉಪಸ್ಥಿತರಿದ್ದರು.

--- ಬಾಕ್ಸ್‌ --ನೀರಿನ ಮೂಲ ಗುರುತಿಸದೆ ಕಾಮಗಾರಿಜಿಲ್ಲೆಯಲ್ಲಿ ಜಲಜೀವನ್‌ ಮಿಷನ್‌ ಹಾಗೂ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳಡಿ ನೀರಿನ ಮೂಲವನ್ನು ಮೊದಲು ಹುಡುಕಿ ಬಳಿಕ ಕಾಮಗಾರಿ ನಡೆಸಬೇಕು. ಆದರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ನೀರಿನ ಮೂಲ ಗುರುತಿಸದೆ ಕಾಮಗಾರಿ ನಡೆಸಲಾಗಿದೆ. ಹೀಗಾಗಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಸಿ.ಟಿ.ರವಿ ಹಾಗೂ ಎಚ್.ಡಿ.ತಮ್ಮಯ್ಯ ಸಭೆಯನ್ನು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಡಿಸಿ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದ ಸಮಗ್ರ ವರದಿ ತರಿಸಿಕೊಳ್ಳಲಾಗುವುದು‌. ನೀರಿನ ಮೂಲ ಗುರುತಿಸುವ ಮುನ್ನ ಕಾಮಗಾರಿ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.

- ಅತಿವೃಷ್ಟಿಯಿಂದ ಬಾರಿ ಹಾನಿ-ಜಿಲ್ಲೆಯಲ್ಲಿ ಈ ಬಾರಿ ಸುರಿದ ಧಾರಾಕಾರ ಮಳೆಗೆ ಜೀವ ಹಾನಿ ಸೇರಿದಂತೆ ಸಾಕಷ್ಟು ಹಾನಿ ಸಂಭವಿಸಿದೆ. ಆರು ಜಾನುವಾರುಗಳು ಮೃತಪಟ್ಟಿವೆ ಎಂದು ಡಿಸಿ ಮೀನಾ ನಾಗರಾಜ್ ಸಭೆಗೆ ಮಾಹಿತಿ ನೀಡಿದರು.

ಭಾರಿ ಮಳೆಯಿಂದ ಜಿಲ್ಲೆಯಲ್ಲಿ 150 ಮನೆಗಳಿಗೆ ಹಾನಿಯಾಗಿತ್ತು. ಇದರಲ್ಲಿ 146 ಮನೆಗಳಿಗೆ ಈಗಾಗಲೇ ಪರಿಹಾರ ನೀಡ ಲಾಗಿದೆ. ಇನ್ನುಳಿದ 4 ಮನೆಗಳಿಗೆ ಶೀಘ್ರ ಪರಿಹಾರ ವಿತರಣೆ ಮಾಡುತ್ತೇವೆ. ಜಿಲ್ಲೆಯಲ್ಲಿ 100 ಕಿ.ಮೀ. ಮುಖ್ಯರಸ್ತೆಗೆ ಮಳೆ ಯಿಂದ ಹಾನಿಯಾಗಿದೆ. ಇದಲ್ಲದೆ ಪಿಆರ್ ಇಡಿಗೆ ಸೇರಿದ 500 ಕಿಮೀ ರಸ್ತೆ ಹಾನಿಯಾಗಿದೆ. 148 ಶಾಲಾ ಕಟ್ಟಡಗಳಿಗೆ ಹಾನಿಯಾಗಿದೆ. ಭಾರಿ ಮಳೆಯಿಂದಾಗಿ ಕಾಫಿ, ಅಡಕೆ ಬೆಳೆಗೆ ಕೊಳೆ ರೋಗ ಹೆಚ್ಚಾಗಿದೆ. ಕಾಳುಮೆಣಸಿಗೆ ಸೊರಗು ರೋಗ ಬಂದಿದೆ ಎಂದು ವಿವರಿಸಿದರು.

12 ಕೆಸಿಕೆಎಂ 1ಚಿಕ್ಕಮಗಳೂರಿನ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಅಧ್ಯಕ್ಷತೆಯಲ್ಲಿ ಶುಕ್ರವಾರ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು. ಶಾಸಕರಾದ ನಯನಾ ಮೋಟಮ್ಮ, ಎಚ್‌.ಡಿ. ತಮ್ಮಯ್ಯ, ಟಿ.ಡಿ. ರಾಜೇಗೌಡ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಟಾರಿಯಾ, ಡಿಸಿ ಮೀನಾ ನಾಗರಾಜ್‌ ಇದ್ದರು.