ಸರ್ವಧರ್ಮ ಪ್ರಾರ್ಥನಾ ಮಂದಿರಗಳಿಗೆ ಸಚಿವ ಜಾರ್ಜ್ ಭೇಟಿ

| Published : Feb 07 2024, 01:49 AM IST

ಸರ್ವಧರ್ಮ ಪ್ರಾರ್ಥನಾ ಮಂದಿರಗಳಿಗೆ ಸಚಿವ ಜಾರ್ಜ್ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿಯ ಶ್ರೀ ಕೃಷ್ಣ ಮಠ, ಜಾಮಿಯಾ ಮಸೀದಿ, ಶೋಕ ಮಾತಾ ಚರ್ಚ್‌ಗೆ ತೆರಳಿದ ಜಾರ್ಜ್, ಅಲ್ಲಿ ಧರ್ಮಗುರುಗಳನ್ನು ಭೇಟಿಯಾಗಿ, ಗೌರವವನ್ನು ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಇಲಾಖೆಯ ಯೋಜನೆಗಳ ನಿಮಿತ್ತ ಉಡುಪಿಗೆ ಆಗಮಿಸಿದ್ದ ರಾಜ್ಯ ಇಂಧನ ಸಟಿವ ಕೆ.ಜೆ.ಜಾರ್ಜ್ ಅವರು ಮಂಗಳವಾರ ಸರ್ವಧರ್ಮ ಪ್ರಾರ್ಥನಾ ಮಂದಿರಗಳಿಗೆ ಭೇಟಿ ನೀಡಿದರು.

ಉಡುಪಿಯ ಶ್ರೀ ಕೃಷ್ಣ ಮಠ, ಜಾಮಿಯಾ ಮಸೀದಿ, ಶೋಕ ಮಾತಾ ಚರ್ಚ್‌ಗೆ ತೆರಳಿದ ಜಾರ್ಜ್, ಅಲ್ಲಿ ಧರ್ಮಗುರುಗಳನ್ನು ಭೇಟಿಯಾಗಿ, ಗೌರವವನ್ನು ಸ್ವೀಕರಿಸಿದರು.

ರೇಶ್ಮೆ ಪಂಚೆಯುಟ್ಟು, ಶರ್ಟು ಕಳಚಿಟ್ಟು ಕೃಷ್ಣಮಠಕ್ಕೆ ಬಂದ ಸಚಿವರು, ನವದ್ವಾರ ಕಿಂಡಿಯಿಂದ ಕೃಷ್ಣನ ದರ್ಶನ ಪಡೆದರು. ನಂತರ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು ಮತ್ತು ಕಿರಿಯ ಶ್ರೀಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಶ್ರೀಗಳು ಸಚಿವರಿಗೆ ತಾವು ಸಂಕಲ್ಪಿಸಿರುವ ಕೋಟಿ ಗೀತಾ ಲೇಖನ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು ಮತ್ತು ಭಗವದ್ಗೀತೆಯ ಪ್ರತಿಯೊಂದನ್ನು ನೀಡಿ ಗೌರವಿಸಿದರು.

ನಗರದ ಜಾಮಿಯಾ ಮಸೀದಿಗೆ ಭೇಟಿ ನೀಡಿದ ಸಚಿವರು, ಮಸೀದಿಯ ಖತೀಬ್ ವೌಲಾನ ಅಬ್ದುರ್ರಶೀದ್ ನದ್ವಿ ಅವರು ನಡೆಸಿಕೊಟ್ಟ ಪ್ರಾರ್ಥನೆಯಲ್ಲಿ ಭಾಗವಹಿಸಿದರು ಮತ್ತು ಮುಸ್ಲೀಂ ವೆಲ್‌ಫೇರ್ ಅಸೋಸಿಯೇಶನ್‌ನಿಂದ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು.

ನಂತರ ನಗರದ ಶೋಕ ಮಾತಾ ದೇವಾಲಯಕ್ಕೆ ಭೇಟಿ ನೀಡಿ ಮೊಂಬತ್ತಿ ಹಚ್ಚಿ ಪ್ರಾರ್ಥನೆ ಸಲ್ಲಿಸಿದರು. ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಸಚಿವರನ್ನು ಧರ್ಮಪ್ರಾಂತ್ಯದ ಪರವಾಗಿ ಗೌರವಿಸಿದರು. ಈ ವೇಳೆ ಸಚಿವರು ಧರ್ಮಪ್ರಾಂತ್ಯ ಯೋಜನೆಗಳ ಮಾಹಿತಿಯನ್ನು ಪಡೆದುಕೊಂಡರಲ್ಲದೆ ಹಾಗೂ ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ಸರ್ಕಾರದ ಯೋಜನೆಗಳನ್ನು ಉಪಯೋಗಿಸಿಕೊಳ್ಳುವಂತೆ ಸೂಚಿಸಿದರು.

ಸಚಿವರೊಂದಿಗೆ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರ್ ಮತ್ತಿತರ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.