ಸಾರಾಂಶ
ವಿಜಯನಗರ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಕೆಲಸ ಮಾಡದಿದ್ದರೆ, ನಾನು ಆಕ್ಷೇಪ ವ್ಯಕ್ತಪಡಿಸುವೆ. ಚುನಾವಣೆ ವರೆಗೆ ಅಂದರೆ ಮೇ 7ರ ವರೆಗೆ ಮಾತ್ರ ಕದನ ವಿರಾಮ ಎಂದು ಸಿರಾಜ್ ಶೇಕ್ ಹೇಳಿದರು.
ಕನ್ನಡಪ್ರಭ ವಾರ್ತೆ ಹೊಸಪೇಟೆ
ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಜೊತೆಗೆ ಕದನ ವಿರಾಮ ಘೋಷಣೆ ಮಾಡಲು ವರಿಷ್ಠರು ಒತ್ತಡ ಹೇರಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈ. ತುಕಾರಾಂಗೆ ತೊಂದರೆಯಾಗಬಾರದು ಎಂದು ಕದನ ವಿರಾಮ ಘೋಷಣೆ ಮಾಡಿರುವೆ. ಒಂದು ವೇಳೆ ಜನರ ಕೆಲಸ ಮಾಡದಿದ್ದರೆ ಮತ್ತೆ ಆಕ್ಷೇಪ ವ್ಯಕ್ತಪಡಿಸುವೆ ಎಂದು ವಿಜಯನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿರಾಜ್ ಶೇಕ್ ಹೇಳಿದರು.ನಗರದ ರೋಟರಿ ಕ್ಲಬ್‌ನಲ್ಲಿ ವಿಜಯನಗರ ಜಿಲ್ಲಾ ಪರಿಶಿಷ್ಟ ಜಾತಿ ಸಮುದಾಯಗಳ ಒಕ್ಕೂಟ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಮಂಗಳವಾರ ಆಯೋಜಿಸಿದ್ದ ಸಂವಿಧಾನ ರಕ್ಷಿಸಿ, ದೇಶ ಉಳಿಸಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಜಯನಗರ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಕೆಲಸ ಮಾಡದಿದ್ದರೆ, ನಾನು ಆಕ್ಷೇಪ ವ್ಯಕ್ತಪಡಿಸುವೆ. ಚುನಾವಣೆ ವರೆಗೆ ಅಂದರೆ ಮೇ 7ರ ವರೆಗೆ ಮಾತ್ರ ಕದನ ವಿರಾಮ. ಆನಂತರ ಇದ್ದೇ ಇದೆಯಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.ಕಾಂಗ್ರೆಸ್ ಅಭ್ಯರ್ಥಿ ಈ. ತುಕಾರಾಂ ಮಾತನಾಡಿ, ಲೋಕಸಭೆಯಲ್ಲಿ ಗೆಲುವು ಸಾಧಿಸಿದರೆ, ಕುಡುತಿನಿ ಬಳಿ ಐದು ಸಾವಿರ ಕೋಟಿ ರು. ಮೊತ್ತದ ಕಾರ್ಖಾನೆ ಸ್ಥಾಪನೆಗೆ ಆದ್ಯತೆ ನೀಡಲಾಗುವುದು. ಒಂದು ಸಾವಿರ ಯುವಕರಿಗೆ ಉದ್ಯೋಗ ದೊರೆಯುವಂತೆ ಮಾಡಲಾಗುವುದು. ಸರೋಜಿನಿ ಮಹಿಷಿ ವರದಿಯಂತೆ ಎನ್‌ಎಂಡಿಸಿಯಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗಬೇಕು ಎಂದು ಈಗಾಗಲೇ ಹೋರಾಟ ಮಾಡಿರುವೆ ಎಂದರು.
ಮುಖಂಡರಾದ ಕೆಎಸ್‌ಎಲ್ ಸ್ವಾಮಿ, ಮುಂಡ್ರಗಿ ನಾಗರಾಜ, ಎ. ಮಾನಯ್ಯ, ಕುರಿ ಶಿವಮೂರ್ತಿ, ಕೆ.ಎಂ. ಹಾಲಪ್ಪ, ಜಂಬಯ್ಯ ನಾಯಕ, ಡಿ. ವೆಂಕಟರಮಣ, ತಮಳೇನಪ್ಪ, ಸಣ್ಣಮಾರೆಪ್ಪ, ವಿನಾಯಕ ಶೆಟ್ಟರ್, ಕೆ. ಗೌಸ್, ನಿಂಬಗಲ್ ರಾಮಕೃಷ್ಣ, ಬಣ್ಣದಮನೆ ಸೋಮಶೇಖರ್, ಮಾರೆಪ್ಪ, ರಾಮಚಂದ್ರ, ಎಚ್. ಮಹೇಶ್ ಮತ್ತಿತರರಿದ್ದರು.