ವಿದ್ಯುತ್‌ ಸರಬರಾಜು ಸಮರ್ಪಕವಾಗಿ ನಿರ್ವಹಿಸಲು ಸಚಿವ ಎಚ್‌ಕೆಪಿ ಸೂಚನೆ

| Published : Oct 11 2023, 12:45 AM IST

ವಿದ್ಯುತ್‌ ಸರಬರಾಜು ಸಮರ್ಪಕವಾಗಿ ನಿರ್ವಹಿಸಲು ಸಚಿವ ಎಚ್‌ಕೆಪಿ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಗದಗ ಜಿಲ್ಲೆಯಲ್ಲಿ ನಾಲ್ಕೈದು ದಿನಗಳಿಂದ ವಿದ್ಯುತ್‌ ವ್ಯತ್ಯಯವಾಗುತ್ತಿರುವ ಹಿನ್ನೆಲೆಯಲ್ಲಿ ಪಂಪ್‌ಸೆಟ್‌ ರೈತರು ಹೋರಾಟದ ಹಾದಿ ತುಳಿದಿದ್ದಾರೆ. ಹೀಗಾಗಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲರು ಹೆಸ್ಕಾಂ ಹಾಗೂ ಜಿಲ್ಲಾ ಮಟ್ಟದ ಪ್ರಮುಖ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದರು.

ಗದಗ: ಕಳೆದ ನಾಲ್ಕೈದು ದಿನಗಳಿಂದ ವಿದ್ಯುತ್‌ ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಜಿಲ್ಲೆಯ ಪ್ರತಿ ಗ್ರಾಮಕ್ಕೂ ಸಮರ್ಪಕವಾಗಿ ವಿದ್ಯುತ್‌ ಸರಬರಾಜು ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಹೆಸ್ಕಾಂ ಹಾಗೂ ಜಿಲ್ಲಾ ಮಟ್ಟದ ಪ್ರಮುಖ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಗದಗ ಜಿಲ್ಲೆಯ ಗ್ರಾಮೀಣ ಹಾಗೂ ನಗರದ ಪ್ರದೇಶದ ವಾಸಿಗಳಿಗೆ ಸಮರ್ಪಕ ವಿದ್ಯುತ್‌ ಪೂರೈಸಲು ಆಯಾ ವ್ಯಾಪ್ತಿಯ ಹೆಸ್ಕಾಂ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು. ಅಲ್ಲದೇ ರೈತರ ಬೆಳೆಗೆ ನೀರು ಪೂರೈಸಲು ನಿರಂತರ ೭ ಗಂಟೆ ಕಾಲ ತ್ರಿಫೇಸ್ ವಿದ್ಯುತ್‌ ಪೂರೈಕೆ ಮಾಡಬೇಕು. ಈ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಕಂಡು ಬಂದಲ್ಲಿ ತಕ್ಷಣ ಆಯಾ ವ್ಯಾಪ್ತಿಯ ಅಧಿಕಾರಿಗಳು ವಿದ್ಯುತ್‌ ವ್ಯತ್ಯಯದ ಕುರಿತು ರೈತರಿಗೆ ಮಾಹಿತಿ ಒದಗಿಸಬೇಕು ಎಂದರು.

ಮಳೆಯ ಕೊರತೆಯಿಂದಾಗಿ ರಾಜ್ಯದಲ್ಲಿ ಬರಗಾಲ ಘೋಷಣೆಯಾಗಿದೆ. ವಿದ್ಯುತ್‌ ಉತ್ಪಾದನೆಯಲ್ಲಿಯೂ ಸಹ ಕೊರತೆ ಎದುರಾಗಿದ್ದು, ಸಮರ್ಪಕ ವಿದ್ಯುತ್‌ ಪೂರೈಕೆ ಮಾಡಲು ಸರ್ಕಾರದ ಹಂತದಲ್ಲಿ ಪ್ರಯತ್ನ ನಿರಂತರವಾಗಿ ನಡೆದಿದೆ. ಸದ್ಯದಲ್ಲೇ ವಿದ್ಯುತ್‌ ಖರೀದಿಸಿ ಸಮರ್ಪಕ ಪೂರೈಕೆ ಮಾಡಲಾಗುವುದು. ಈ ಪ್ರಕ್ರಿಯೆ ಕೈಗೊಳ್ಳಲು ಅಲ್ಪ ಸಮಯ ಅಗತ್ಯವಾಗಿದೆ. ಅಲ್ಲಿಯವರೆಗೂ ಸಾರ್ವಜನಿಕರು, ರೈತ ಸಮುದಾಯ ಸಹನೆಯಿಂದ ಇರುವಂತೆ ಅಧಿಕಾರಿಗಳು ಮನವರಿಕೆ ಮಾಡಿಕೊಡುವಂತೆ ತಿಳಿಸಿದರು.

ರೋಣ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಈ ಹಿಂದೆ ದಿನದ ೨೪ ಗಂಟೆಯೂ ನಿರಂತರ ವಿದ್ಯುತ್‌ ಪೂರೈಕೆಯಾಗುತ್ತಿತ್ತು. ಸದ್ಯ ವಿದ್ಯುತ್‌ ವ್ಯತ್ಯಯದಿಂದಾಗಿ ಸಾರ್ವಜನಿಕರು ಹಾಗೂ ರೈತರು ತೊಂದರೆಗೊಳಗಾಗಿದ್ದು, ಕೂಡಲೇ ಸಮರ್ಪಕ ವಿದ್ಯುತ್‌ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಕೋರಿದರು. ಇದೇ ಸಂದರ್ಭದಲ್ಲಿ ರೋಣ ಕ್ಷೇತ್ರದಿಂದ ಆಗಮಿಸಿದ ರೈತರು ಸಭೆಯಲ್ಲಿ ಸಮರ್ಪಕವಾಗಿ ವಿದ್ಯುತ್‌ ಪೂರೈಕೆ ಮಾಡುವ ಮೂಲಕ ರೈತರ ಬೆಳೆಗೆ ನೀರು ನೀಡಲು ಸಹಕರಿಸುವಂತೆ ಕೋರಿದರು.

ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಅಸಮರ್ಪಕ ವಿದ್ಯುತ ಪೂರೈಕೆಯಿಂದ ರೈತರು ಪದೆ ಪದೆ ಪ್ರತಿಭಟನೆ ಮಾಡಿ ವಿದ್ಯುತ್‌ ಸರಬರಾಜು ಕೇಂದ್ರಗಳಿಗೆ ತೆರಳಿ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಅಧಿಕಾರಿಗಳು ವಿದ್ಯುತ್‌ ಪೂರೈಕೆ ಕುರಿತು ನಿಯಮಿತವಾಗಿ ರೈತರಿಗೆ ಮಾಹಿತಿ ನೀಡುವಂತೆ ತಿಳಿಸಿ ಸಮರ್ಪಕ ವಿದ್ಯುತ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ ರೋಶನ ಮಾತನಾಡಿ, ಗದಗ ಜಿಲ್ಲೆಗೆ ಪ್ರತಿದಿನ ೧೬೦ ಮೆಗಾ ವ್ಯಾಟ್ ವಿದ್ಯುತ್‌ ಅಗತ್ಯವಿದೆ. ತಿಂಗಳಿಗೆ ೫೦ ಮಿಲಿಯನ್ ಯುನಿಟ್ ಪೂರೈಕೆ ಮಾಡಬೇಕಿದೆ. ಸದ್ಯ ಮಳೆ ಅಭಾವದಿಂದಾಗಿ ವಿದ್ಯುತ್‌ ಉತ್ಪಾದನೆ ಕುಂಠಿತವಾಗಿದೆ. ಇದರಿಂದಾಗಿ ಜಿಲ್ಲೆಗೆ ಪ್ರತಿದಿನ ೬೦-೭೦ ಮೆಗಾವ್ಯಾಟ್‌ ವಿದ್ಯುತ್‌ ಪೂರೈಸಲಾಗುತ್ತಿದೆ ಎಂದರು. ಉಡುಪಿಯ ವಿದ್ಯುತ್‌ ಉತ್ಪಾದನಾ ಘಟಕದಲ್ಲಿ ೧೭೦೦ ಮೆಗಾ ವ್ಯಾಟ್ ವಿದ್ಯುತ್‌ ಉತ್ಪಾದನೆಯಾಗಬೇಕಿತ್ತು. ಸದ್ಯ ಪ್ರತಿದಿನ ೭೦೦ ಮೆಗಾವ್ಯಾಟ್‌ ಮಾತ್ರವೇ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ಅಲ್ಲದೇ ಆರ್.ಟಿ.ಪಿ.ಎಸ್ ಮೂಲಕ ಮಾಡುವ ವಿದ್ಯುತ್‌ ಉತ್ಪಾದನೆಯ ೮ ಘಟಕಗಳಲ್ಲಿ ಮೂರು ಘಟಕಗಳು ತಾಂತ್ರಿಕ ತೊಂದರೆಯಿಂದಾಗಿ ಸ್ಥಗಿತಗೊಂಡಿವೆ. ಇದರಿಂದಾಗಿ ಶೇ. ೫೦ಕ್ಕೂ ಅಧಿಕ ವಿದ್ಯುತ್‌ ಉತ್ಪಾದನೆ ಕಡಿಮೆಯಾಗಿದೆ ಎಂದರು.

ಗದಗ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ರಾಜೇಶ ಕಲ್ಯಾಣಶೆಟ್ಟರ ಮಾತನಾಡಿ, ಜಿಲ್ಲೆಯಲ್ಲಿನ ಪವನ ವಿದ್ಯುತ್‌ ಸ್ಥಾವರಗಳಿಂದ ಪ್ರತಿದಿನ ೭೩೫ ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗಬೇಕಿತ್ತು. ವಾತಾವರಣದಲ್ಲಿನ ಬದಲಾವಣೆಯಿಂದಾಗಿ ಗಾಳಿಯ ವೇಗ ಕುಂಠಿತಗೊಂಡಿರುವುದರಿಂದ ಪ್ರತಿದಿನ ೨೫ ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾತ್ರವೇ ಆಗುತ್ತಿದೆ. ಆದಗ್ಯೂ ಸಹ ವಿದ್ಯುತ್‌ ಸರಬರಾಜು ಸಮರ್ಪಕವಾಗಿ ಮಾಡಲು ಅಧಿಕಾರಿ ವರ್ಗ ಶ್ರಮಿಸುತ್ತಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಡಿ.ವಾಯ್.ಎಸ್ಪಿ ಸಂಕದ, ಕೆ.ಪಿ.ಟಿ.ಸಿ.ಎಲ್ ಕಾರ್ಯಪಾಲಕ ಅಭಿಯಂತರ ರಮೇಶ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.