ಸಾರಾಂಶ
ಶಿಗ್ಗಾಂವಿ: ನವ ಭಾರತ ನಿರ್ಮಾಣ ಮಾಡಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ಬಿಜೆಪಿ ಸಮಾಜ ಒಡೆಯುವ ಪಕ್ಷ, ಜನರನ್ನು ಭಾವನಾತ್ಮಕವಾಗ ಕೆರಳಿಸಿ ದ್ವೇಷ ಬಿತ್ತುವ ಕೆಲಸ ಮಾಡುತ್ತಿದೆ. ಕ್ಷೇತ್ರದ ಅಭಿವೃದ್ಧಿ ಆಗಬೇಕೆಂದರೆ ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ಬಿಜೆಪಿ ಕುತಂತ್ರಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.ತಾಲೂಕಿನ ದುಂಡಶಿಯಲ್ಲಿ ಗುರುವಾರ ಯಾಸೀರ್ ಖಾನ್ ಪಠಾಣ ಪರ ಪ್ರಚಾರಸಭೆಯಲ್ಲಿ ಅವರು ಮಾತನಾಡಿ, ಶಿಗ್ಗಾಂವಿ ಅಭಿವೃದ್ಧಿಯಲ್ಲಿ ಬೊಮ್ಮಾಯಿ ಕೊಡುಗೆ ಶೂನ್ಯವಾಗಿದ್ದು, ಬಿಜೆಪಿ ಜನರ ಕಣ್ಣಿಗೆ ಮಣ್ಣು ಎರಚುವ ಪಕ್ಷವಾಗಿದೆ. ಕಾಂಗ್ರೆಸ್ ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡ ಪಕ್ಷವಾಗಿದ್ದು, ಗ್ಯಾರಂಟಿ ಅನುಷ್ಠಾನ ಮಾಡಿ ಬಡವರ ಮನೆಗೆ ಯೋಜನೆಗಳನ್ನು ತಂದಿದ್ದೇವೆ. ಗ್ಯಾರಂಟಿ ಯೋಜನೆಗಳು ಮುಂದುವರಿಯಬೇಕು ಎಂದರು.ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಶಿಗ್ಗಾಂವಿ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿ, ಸಚಿವರಾಗಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಕ್ಷೇತ್ರದ ಜನರು ಅವರನ್ನು ಪ್ರಶ್ನಿಸಬೇಕು. ಬೊಮ್ಮಾಯಿ ಪುತ್ರ ಭರತ್ ಕ್ಷೇತ್ರದ ಯಾವ ಹಳ್ಳಿಗಳನ್ನು ಸುತ್ತಾಡಿಲ್ಲ, ಅದರಲ್ಲೂ ರೈತರ ಬಗ್ಗೆ ಏನು ಗೊತ್ತಿಲ್ಲ. ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಠಾಣ ಅವರಿಗೆ ಗೆಲುವು ಕಟ್ಟಿಟ್ಟ ಬುತ್ತಿ. ರೈತರು ಬೆಳೆದ ಗೋವಿನಜೋಳದಿಂದ ಎಥನಾಲ್ ಉತ್ಪಾದಿಸಿ ಆಯಿಲ್ ಕಂಪನಿಗಳು ಲಾಭ ಮಾಡಿಕೊಳ್ಳುತ್ತಿವೆ. ಕೇಂದ್ರ ಸರ್ಕಾರದ ನೀತಿಗಳು ಸರಿಯಾಗಿ ಜನರಿಗೆ ಮುಟ್ಟುತ್ತಿಲ್ಲ ಎಂಬ ಸಂದೇಶ ರವಾನಿಸುವ ಅಗತ್ಯವಿದ್ದು, ಅದು ಈ ಚುನಾವಣೆ ಮೂಲಕ ಆಗಬೇಕು ಎಂದರು. ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಯಾಸೀರ್‌ಖಾನ್ ಪಠಾಣ ಕ್ಷೇತ್ರದಲ್ಲಿ ಚುನಾವಣೆಗಾಗಿ ಅಡ್ಡಾಡಿದವರಲ್ಲ, ಜನರಿಗೆ ಸೇವೆ ಸಲ್ಲಿಸಬೇಕು ಎಂದು ಅಡ್ಡಾಡಿದವರು. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕು ಎಂಬುದೊಂದೇ ಬಿಜೆಪಿ ಸ್ಲೋಗನ್ ಆಗಿದೆ. ಕಾಂಗ್ರೆಸ್ ಸರ್ಕಾರ ಬಡವರ ಕುಟುಂಬಗಳಿಗೆ ಸಹಾಯ ಆಗುವಂತಹ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಇಂತಹ ಕ್ರಾಂತಿಕಾರಕ ಕಾರ್ಯಕ್ರಮ ನೀಡಿದ ಕೀರ್ತಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಅವರಿಗೆ ಸಲ್ಲಬೇಕು ಎಂದರು. ಮನಸಾಕ್ಷಿಗಾಗಿ ಕೆಲಸ ಮಾಡಬೇಕು. ಚುನಾವಣೆಯಯಲ್ಲಿ ದುಡ್ಡುಕೊಟ್ಟರೆ ತಗೊಳ್ಳಿ, ಆದರೆ ಮತವನ್ನು ಮಾತ್ರ ತಮ್ಮ ಮನಸಾಕ್ಷಿಗೆ ತಕ್ಕಂತೆ ಹಾಕಿ. ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿರುವ ಸರ್ಕಾರ ಅಧಿಕಾರದಲ್ಲಿ ಇದ್ದು, ಇದರ ಸದುಪಯೋಗ ಪಡೆಯಬೇಕಾದರೆ ಈ ಚುಣಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿ ಎಂದು ಚಿತ್ರನಟ ಸಾಧು ಕೋಕಿಲ ಹೇಳಿದರು.ಬಡವನ ಮಗ ಕೂಡ ರಾಜ ಆಗುವ ಅವಕಾಶ ಕಾಂಗ್ರೆಸ್ ಕಲ್ಪಿಸಿದೆ. ಕಳೆದ ಚುನಾವಣೆಯಲ್ಲಿ ಯಾಸೀರ್‌ಖಾನ್ ಪಠಾಣ ಅವರಿಗೆ ೬೫ ಸಾವಿರ ಮತ ನೀಡಿದ್ದೀರಿ, ಈ ಬಾರಿ ೧.೩೦ ಲಕ್ಷ ಮತ ನೀಡುತ್ತೀರಿ ಎಂಬ ಭರವಸೆ ಇದೆ. ಬಸವರಾಜ ಬೊಮ್ಮಾಯಿ ಅವರು ಮಾತು ಕೊಟ್ಟಂತೆ ಯಾವ ಕೆಲಸವನ್ನು ಕ್ಷೇತ್ರದಲ್ಲಿ ಕಾರ್ಯಗತ ಮಾಡಿಲ್ಲ. ಮುಖ್ಯಮಂತ್ರಿ ಆಗಿದ್ದರೂ ಜಿಲ್ಲಾ ಕೇಂದ್ರಕ್ಕೆ ಸಮರ್ಪಕವಾಗಿ ನೀರು ಕೊಡಲು ಆಗಿಲ್ಲ. ಒಗ್ಗಟ್ಟಾಗಿ ಶ್ರಮಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್‌ಖಾನ್ ಪಠಾಣ ಗೆಲ್ಲಿಸುವ ಶಪಥ ಮಾಡಬೇಕು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.