ರಾಜ್ಯಕ್ಕೆ ಆಗಿರುವ ಅನ್ಯಾಯ ಪ್ರಶ್ನಿಸದ ಸಚಿವ ಜೋಶಿ ಸೋಲಿಸಿ-ಸಿಎಂ ಸಿದ್ದರಾಮಯ್ಯ

| Published : Apr 26 2024, 12:50 AM IST

ರಾಜ್ಯಕ್ಕೆ ಆಗಿರುವ ಅನ್ಯಾಯ ಪ್ರಶ್ನಿಸದ ಸಚಿವ ಜೋಶಿ ಸೋಲಿಸಿ-ಸಿಎಂ ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಬರ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಕೇಂದ್ರ‌ ಸಚಿವ ಪ್ರಹ್ಲಾದ ಜೋಶಿ ಯಾವತ್ತೂ ಪ್ರಶ್ನಿಸಲಿಲ್ಲ. ೨೫ ಸಂಸದರಲ್ಲಿ ಒಬ್ಬರೂ ಕನ್ನಡಿಗರ ಹಿತ ಕಾಪಾಡುವ ಕೆಲಸ‌ ಮಾಡಿಲ್ಲ. ಒಮ್ಮೆಯೂ ಕನ್ನಡಿಗರ ಪರವಾಗಿ ಮಾತನಾಡದ ಇವರನ್ನು ಚುನಾವಣೆಯಲ್ಲಿ ಸೋಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಹಾವೇರಿ: ಬರ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಕೇಂದ್ರ‌ ಸಚಿವ ಪ್ರಹ್ಲಾದ ಜೋಶಿ ಯಾವತ್ತೂ ಪ್ರಶ್ನಿಸಲಿಲ್ಲ. ೨೫ ಸಂಸದರಲ್ಲಿ ಒಬ್ಬರೂ ಕನ್ನಡಿಗರ ಹಿತ ಕಾಪಾಡುವ ಕೆಲಸ‌ ಮಾಡಿಲ್ಲ. ಒಮ್ಮೆಯೂ ಕನ್ನಡಿಗರ ಪರವಾಗಿ ಮಾತನಾಡದ ಇವರನ್ನು ಚುನಾವಣೆಯಲ್ಲಿ ಸೋಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಿಗ್ಗಾಂವಿ ತಾಲೂಕು ತಡಸ ಕ್ರಾಸ್‌ನಲ್ಲಿ ಪ್ರಜಾಧ್ವನಿ ಸಮಾವೇಶ ಉದ್ಘಾಟಿಸಿ ಪಕ್ಷದ ಅಭ್ಯರ್ಥಿ ವಿನೋದ ಅಸೂಟಿ ಪರ ಪ್ರಚಾರ ನಡೆಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಬರಗಾಲ ಇದೆ. ಬರ ಪರಿಹಾರ ಕೊಡಿ ಎಂದು ಪ್ರಧಾನಿ ಮೋದಿ, ಅಮಿತ್‌ ಶಾ ಬಳಿ ಕೇಳಿದರೆ ಕೊಡಲಿಲ್ಲ. ೧೫೦ ದಿನ ಕೂಲಿ ಕೊಡಲಿಲ್ಲ. ಇದು ಅವರು ಮಾಡಿದ ದೊಡ್ಡ ಮೋಸ. ರಾಜ್ಯದ ಜನರ ತೆರಿಗೆ ಹಣಕ್ಕೆ ಆದ ದ್ರೋಹವನ್ನು ಸಮರ್ಥಿಸಿದ ಪ್ರಹ್ಲಾದ್ ಜೋಶಿ ಅವರನ್ನು ಈ ಬಾರಿ ಸೋಲಿಸಲೇಬೇಕು. ಶ್ರೀಮಂತ ಉದ್ಯಮಿಗಳ ₹ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಮೋದಿ ಅವರಿಂದ ಹುಬ್ಬಳ್ಳಿ-ಧಾರವಾಡ ಜನಕ್ಕೆ ಏನು ಸಿಕ್ಕಿತು ಎಂದು ಪ್ರಶ್ನಿಸಿದರು.

ನರೇಂದ್ರ ಮೋದಿ ಅವರು ರಾಜ್ಯಕ್ಕೆ ಮಾಡಿದ ಅನ್ಯಾಯವನ್ನು 10 ವರ್ಷಗಳಲ್ಲಿ ಪ್ರಹ್ಲಾದ್ ಜೋಶಿ ಅವರು ಒಂದೇ ಒಂದು ದಿನವೂ ಪ್ರಶ್ನಿಸಿಲ್ಲ. ರಾಜ್ಯಕ್ಕೆ 15ನೇ ಹಣಕಾಸು ಆಯೋಗದಲ್ಲೂ ವಂಚನೆ ಆಯಿತು. ಬರಗಾಲ ಬಂದಾಗಲೂ ಅನುದಾನ ಕೊಡದ ಕೇಂದ್ರ ಸರ್ಕಾರವನ್ನು ಪ್ರಶ್ನಿಸದ, ರಾಜ್ಯದ ಜನರ ಪರವಾಗಿ ನೆಪಕ್ಕೂ ಮಾತನಾಡದ ಪ್ರಹ್ಲಾದ್ ಜೋಶಿ ಅವರಿಂದ ನಿಮ್ಮ ಮತಕ್ಕೆ ಗೌರವ ಬಂದಿದೆಯಾ? ರಾಜ್ಯದಲ್ಲಿ ಇಷ್ಟು ಭೀಕರ ಬರಗಾಲ ಇದ್ದರೂ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯದ ಪಾಲಿನ ಒಂದೇ ಒಂದು ರುಪಾಯಿ ಬರ ಪರಿಹಾರವನ್ನು ಬಿಡುಗಡೆ ಮಾಡಲಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾಜ್ಯವನ್ನು ಪ್ರತಿನಿಧಿಸಿದ್ದರೂ ಪ್ರಯೋಜನ ಆಗಲಿಲ್ಲ. ಹೀಗಾಗಿ ಅವರನ್ನು ಸೋಲಿಸಿ ಮನೆಗೆ ಕಳುಹಿಸಿದರೆ ಮಾತ್ರ ನಿಮ್ಮ ಮತಕ್ಕೆ ಗೌರವ ಬರುತ್ತದೆ ಎಂದರು.

ಕಾಂಗ್ರೆಸ್‌ ಸೋಲಿಸಬೇಕು ಎಂಬ ಕಾರಣಕ್ಕೆ ಬಿಜೆಪಿ ಮತ್ತು ಜೆಡಿಎಸ್ ಎರಡೂ ಅಪವಿತ್ರ ಮೈತ್ರಿ ಮಾಡಿಕೊಂಡಿವೆ. ಜನತಾದಳ ಸೆಕ್ಯುಲರ್ ಪ್ರಾರಂಭ ಆದಾಗಿನಿಂದ ಈ ವರೆಗೆ ಬಿಜೆಪಿ ಕೋಮುವಾದಿ‌ ಪಕ್ಷದ ಜತೆಗೆ ಯಾವತ್ತೂ ಕೈಜೋಡಿಸಿಲ್ಲ ಎಂದು ದೇವೇಗೌಡರು ಮೋದಿ ಅವರನ್ನು ವಾಚಾಮಗೋಚರವಾಗಿ ಬಯ್ಯುತ್ತಿದ್ದರು. ದೇವೇಗೌಡರು ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಮತ್ತೆ ಪ್ರಧಾನಿಯಾದರೆ ದೇಶವನ್ನೇ ಬಿಟ್ಟು ಹೋಗುತ್ತೇನೆ ಎಂದಿದ್ದರು. ಮುಂದಿನ ಜನ್ಮ ಅಂತ ಇದ್ದರೆ ಮುಸಲ್ಮಾನ ಆಗಿ ಹುಟ್ಟುತ್ತೇನೆ ಎಂದಿದ್ದರು. ಈಗ ವರಸೆ ಬದಲಾಯಿಸಿದ್ದಾರೆ ಎಂದು ಕುಟುಕಿದ ಅವರು, ಖಾಲಿ ಚೊಂಬನ್ನು ಮೋದಿ ಕೊಟ್ಟಿಲ್ಲ. ಮನಮೋಹನ ಸಿಂಗ್ ೨೦೧೪ರಲ್ಲಿ ಖಾಲಿ ಚೊಂಬು ಕೊಟ್ಟಿದ್ದರು. ಮೋದಿ ಅದನ್ನು ಅಕ್ಷಯ ಪಾತ್ರೆ ಮಾಡಿದ್ದಾರೆ ಎಂದು ದೇವೇಗೌಡರು ಹೇಳಿದ್ದಾರೆ. ಮೋದಿ ಬಂಡವಾಳಶಾಹಿಗಳ ಪರವಾಗಿದ್ದಾರಾ ಅಥವಾ ರೈತರ ಪರವಾಗಿದ್ದಾರಾ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಅವರು ಬರೀ ಶ್ರೀಮಂತರ ಪರವಾಗಿ ‌ಕೆಲಸ ಮಾಡಿದ್ದಾರೆ. ಅಚ್ಚೇ ದಿನ ಏನಾಯ್ತು? ಎಲ್ಲ ಬೆಲೆ ಏರಿಕೆ ಆಗಿದೆ. ಈ ಎಲ್ಲ ವೈಫಲ್ಯಗಳ‌ ನಡುವೆಯೂ ಬಿಜೆಪಿ ಗೆಲ್ಲುವುದಾಗಿ ಭರವಸೆ ಇಟ್ಟುಕೊಂಡಿದ್ದಾರೆ. ಅವರಿಗೆ ಬುದ್ಧಿ ಕಲಿಸಿ ಎಂದು‌ ಕರೆ ಕೊಟ್ಟರು.

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಮಾಜಿ ಸಚಿವ ವಿನಯ್ ಕುಲಕರ್ಣಿ, ಲೋಕಸಭಾ ಅಭ್ಯರ್ಥಿ ವಿನೋದ್ ಅಸೂಟಿ, ವಿಧಾನ ಪರಿಷತ್‌ ಮುಖ್ಯ ಸಚೇತಕ ಸಲೀಂ ಅಹ್ಮದ್‌, ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಇತರರು ಮಾತನಾಡಿದರು.

ಪಕ್ಷದ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಶಾಸಕ ಬಸವರಾಜ ಶಿವಣ್ಣನವರ, ಸೋಮಣ್ಣ ಬೇವಿನಮರದ, ರಾಜೇಶ್ವರಿ ಪಾಟೀಲ ಇತರರು ಇದ್ದರು.