ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಕಾರದಲ್ಲಿ ಅಮೃತ್-೨ ಯೋಜನೆಯ ಮೂಲಕ ₹೪೧.೬೦ ಕೋಟಿ ವೆಚ್ಚದಲ್ಲಿ ಪಟ್ಟಣದ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಸಂಗ್ರಹ ಸ್ಥಾವರ ಸ್ಥಾಪಿಸಿ, ನೀರು ಪೂರೈಸಲು ಚಿಂತನೆ ನಡೆಸಲಾಗಿದೆ.
ಕನ್ನಡಪ್ರಭ ವಾರ್ತೆ ದೇವನಹಳ್ಳಿ
ನಗರದ ಬೆಳವಣಿಗೆಗೆ ತಕ್ಕಂತೆ ಕುಡಿಯುವ ನೀರು ಸೇರಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯ ಎಂದು ಸಚಿವ ಕೆ.ಎಚ್ ಮುನಿಯಪ್ಪ ಹೇಳಿದರು.ದೇವನಹಳ್ಳಿ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಮತ್ತು ತಾಲೂಕು ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ನಡೆಸಿದ ಸಭೆ ಬಳಿಕ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ ವರ್ಷ ಎತ್ತಿನಹೊಳೆ ಯೋಜನೆ ಪೂರ್ಣಗೊಂಡು ಈ ಭಾಗಕ್ಕೆ ನೀರು ಬರುವುದು ಖಚಿತವಾಗಿದ್ದು, ಜೊತೆಗೆ ಕಾವೇರಿ ಆರನೇ ಹಂತದ ಯೋಜನೆಯ ಮೂಲಕ ದೇವನಹಳ್ಳಿ ಮತ್ತು ವಿಜಯಪುರ ಪಟ್ಟಣಗಳಿಗೆ ನೀರು ತರುವ ಪ್ರಯತ್ನ ನಡೆದಿದ್ದು, ಈ ದಿಸೆಯಲ್ಲಿ ಕುಡಿಯುವ ನೀರು ಶುದ್ಧೀಕರಣ ಸ್ಥಾವರಗಳು ಮತ್ತು ನೀರು ಸಂಗ್ರಹಗಾರಗಳ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದೇವೆ, ಇದರ ಭಾಗವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಕಾರದಲ್ಲಿ ಅಮೃತ್-೨ ಯೋಜನೆಯ ಮೂಲಕ ₹೪೧.೬೦ ಕೋಟಿ ವೆಚ್ಚದಲ್ಲಿ ಪಟ್ಟಣದ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಸಂಗ್ರಹ ಸ್ಥಾವರ ಸ್ಥಾಪಿಸಿ, ನೀರು ಪೂರೈಸಲು ಚಿಂತನೆ ನಡೆಸಲಾಗಿದೆ. ಇದಕ್ಕಾಗಿ ಪಟ್ಟಣದ ಹೊರವಲಯ ಪಾರ್ವಟಗುಡ್ಡದ ಸರ್ವೇ ೯ರಲ್ಲಿ ಗುರುತಿಸಲಾದ ೩ ಎಕರೆ ಜಮೀನನ್ನು ಪುರಸಭೆಗೆ ಹಸ್ತಾಂತರಿಸುವಂತೆ ತಹಸೀಲ್ದಾರರಿಗೆ ಸೂಚನೆ ನೀಡಲಾಗಿದೆ ಎಂದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆಟದ ಮೈದಾನವನ್ನು ಮತ್ತಷ್ಟು ಅಬಿವೃದ್ಧಿಪಡಿಸಲು ಮುಂದಾಗುವಂತೆ ನಿರ್ಮಿತಿ ಕೇಂದ್ರಕ್ಕೆ ನಿರ್ದೇಶನ ನೀಡಲಾಗಿದೆ ಎಂದರು.ಶಿಢ್ಲಘಟ್ಟ ಘಟನೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ರಾಜೀವ್ ಗೌಡ ಎಂದೂ ಆತುರ ಪಟ್ಟವರಲ್ಲ, ಸಮಾಜ ಸೇವೆ ಹಾಗೂ ಶಿಡ್ಲಘಟ್ಟ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ನೆರವು ನೀಡಿದ್ದಾರೆ. ಆದರೂ ಸಹ ಒಂದು ಫ್ಲೆಕ್ಸ್ ವಿಚಾರವಾಗಿ ಸರ್ಕಾರಿ ಅಧಿಕಾರಿ, ಅದರಲ್ಲೂ ಮಹಿಳಾ ಅಧಿಕಾರಿಗೆ ಅವಾಚ್ಯವಾಗಿ ಮಾತನಾಡಿರುವುದು ತಪ್ಪು. ಈಗಾಗಲೇ ಅವರಿಗೆ ಅವರ ತಪ್ಪಿನ ಅರಿವಾಗಿದೆ, ಆದರೂ ಸಹ ಕೆಪಿಸಿಸಿ ಯಿಂದ ಅವರಿಗೆ ನೋಟಿಸ್ ನೀಡಲಾಗಿದೆ. ಜನಪ್ರತಿನಿಧಿಗಳಾದವರು ತಮ್ಮ ಮಾತಿನ ಬಗ್ಗೆ ಹಿಡಿತ ಇಟ್ಟುಕೊಳ್ಳಬೇಕು. ಆದಷ್ಟು ಎಲ್ಲರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದರು.
ತಾಲೂಕು ಗ್ಯಾರಂಟಿ ಅಧ್ಯಕ್ಷ ಸಿ.ಜಗನ್ನಾಥ್ , ಬಯಪ ನಿರ್ದೇಶಕ ಪ್ರಸನ್ನಕುಮಾರ್, ನಗರಾಭಿವೃದ್ಧಿ ಕೋಶದ ಗ್ರಾಮಾಂತರ ಜಿಲ್ಲಾ ಯೋಜನಾ ನಿರ್ದೇಶಕ ರಮೇಶ್ , ಕೆಡಬ್ಲ್ಯೂಎಸ್ ಮತ್ತು ಡಿಬಿ ಎಇಇ ನಾಗರತ್ನ, ತಹಸೀಲ್ದಾರ್ ಎಂ. ಅನಿಲ್, ಪುರಸಭಾ ಮುಖ್ಯಾಧಿಕಾರಿ ಎ.ಶಿವಮೂರ್ತಿ, ಇಂಜಿನಿಯರ್ ಗಜೇಂದ್ರ, ಸಮುದಾಯ ಸಂಘಟನಾ ಅಧಿಕಾರಿ ಬೈರಪ್ಪ, ಪುರಸಭಾ ಮಾಜಿ ಅಧ್ಯಕ್ಷ ಡಿ.ಎಂ. ಮುನಿಕೃಷ್ಣ, ಪುರಸಭಾ ಮಾಜಿ ಸದಸ್ಯರಾದ ಎನ್. ರಘು, ಬಿ.ಎಲ್.ಶ್ರೀಧರಮೂರ್ತಿ, ಮುಂತಾದವರಿದ್ದರು.೨೦ ದೇವನಹಳ್ಳಿ ಚಿತ್ರಸುದ್ದಿ ೦೨: ಸಚಿವ ಕೆಎಚ್. ಮುನಿಯಪ್ಪ.