ಸಾರಾಂಶ
ಜಿಲ್ಲೆಯಲ್ಲಿ ಸತತ ಮಳೆಯಿಂದಾಗಿ ಹಾನಿಗೀಡಾಗಿರುವ ಬೆಳೆಗಳು ಮತ್ತು ಕುಸಿದಿರುವ ಸೇತುವೆ, ಹಾಳಾಗಿರುವ ರಸ್ತೆಗಳನ್ನು ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಶೀಘ್ರದಲ್ಲಿ ಪರಿಹಾರ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕನ್ನಡಪ್ರಭ ವಾರ್ತೆ, ಬೀದರ್
ಜಿಲ್ಲೆಯಲ್ಲಿ ಸತತ ಮಳೆಯಿಂದಾಗಿ ಹಾನಿಗೀಡಾಗಿರುವ ಬೆಳೆಗಳು ಮತ್ತು ಕುಸಿದಿರುವ ಸೇತುವೆ, ಹಾಳಾಗಿರುವ ರಸ್ತೆಗಳನ್ನು ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಶೀಘ್ರದಲ್ಲಿ ಪರಿಹಾರ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.ಅವರು ಬುಧವಾರ ಇಲ್ಲಿನ ಬುಧೇರಾ ಗ್ರಾಮದ ಸೇತುವೆ ಮುಳುಗಡೆ ಆಗಿರುವದು, ಸತತ ಮಳೆಯಿಂದಾಗಿ ಖಾಶೆಂಪೂರ ಗ್ರಾಮದ ಹೊಲಗದ್ದೆಗಳಲ್ಲಿ ಹಾನಿಗೀಡಾಗಿರುವ ಬೆಳೆಗಳನ್ನು ವೀಕ್ಷಿಸಿ ರೈತರಿಗೆ ಧೈರ್ಯ ಹೇಳಿದರಲ್ಲದೆ ಇತ್ತೀಚೆಗೆ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ಗಂಗಮ್ಮ ಮಚಕೂರಿ ಎಂಬುವವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ 5ಲಕ್ಷ ರು.ಗಳ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸಿ ಕುಟುಂಬದವರಿಗೆ ನಿವೇಶನ ನೀಡಲು ಪರಿಶೀಲಿಸುವಂತೆ ಪಿಡಿಒ ಅವರಿಗೆ ತಿಳಿಸಿದರು.
ಇದಕ್ಕೂ ಮುನ್ನ ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅತಿವೃಷ್ಠಿಯಿಂದಾಗಿ 1ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿರುವ ಅಂದಾಜಿದ್ದು, ಸಮೀಕ್ಷೆ ಪೂರ್ಣಗೊಂಡ 10 ದಿನಗಳ ಒಳಗಾಗಿ ಪರಿಹಾರ ಕಲ್ಪಿಸುವುದು ಅಲ್ಲದೆ, ಜಮೀನಿನಲ್ಲಿನ ಫಲವತ್ತಾದ ಮಣ್ಣು ಕೊಚ್ಚಿ ಹೋಗಿದ್ದು ಇದಕ್ಕೂ ವಿಶೇಷ ಪರಿಹಾರ ಧನ ಮಂಜೂರಿಸುವ ಜವಾಬ್ದಾರಿ ನಮ್ಮದಾಗಿದೆ. ರೈತರು ಆತಂಕಕ್ಕೊಳಗಾಗಬಾರದು, ಈಗಾಗಲೇ ಮನೆ ಹಾನಿಗಳಿಗೆ ಪರಿಹಾರ ವಿತರಿಸಲಾಗಿದ್ದು, ರಸ್ತೆ, ಸೇತುವೆಗಳ ಮರು ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.