ಸಾರಾಂಶ
- ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಪ್ರಿಯಾಂಕ ಖರ್ಗೆ ಹಠಾವೋ, ಕಲ್ಬುರ್ಗಿ ಬಚಾವೋ ಹೋರಾಟ: ಬಸವರಾಜ ನಾಯ್ಕ ಮಾಹಿತಿ - - -
ಕನ್ನಡಪ್ರಭ ವಾರ್ತೆ ದಾವಣಗೆರೆಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಮತ್ತು ಬಿಜೆಪಿ ನಾಯಕರ ಮೇಲೆ ಸಚಿವ ಪ್ರಿಯಾಂಕ್ ಖರ್ಗೆ ದ್ವೇಷ ರಾಜಕಾರಣ ಮಾಡಿದ್ದನ್ನು ಖಂಡಿಸಿ ಮೇ 24ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಪ್ರಿಯಾಂಕ್ ಖರ್ಗೆ ಹಠಾವೋ, ಕಲ್ಬುರ್ಗಿ ಬಚಾವೋ ಘೋಷಣೆಯಡಿ ಕಲಬುರಗಿ ಚಲೋಗೆ ನಡೆಯಲಿದೆ ಎಂದು ಮಾಜಿ ಶಾಸಕ ಎಂ.ಬಸವರಾಜ ನಾಯ್ಕ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯ ಚಿತ್ತಾಪುರಕ್ಕೆ ತೆರಳಿದ್ದ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಮೇಲೆ ಸಚಿವ ಪ್ರಿಯಾಂಕ್ ಖರ್ಗೆ ಕಡೆಯ ನೂರಾರು ಗೂಂಡಾಗಳು ರಾಜಕೀಯಪ್ರೇರಿತ ಹಲ್ಲೆ ಮಾಡಿ, ಕೊಲೆಗೆ ಯತ್ನಿಸಿ, ದಿಗ್ಬಂಧನ ಹಾಕಿದ್ದರು. ಆದರೂ, ಪೊಲೀಸರು ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳದೇ, ಎಫ್‌ಐಆರ್ ದಾಖಲಿಸದೇ, ಖರ್ಗೆ ಕೈಗೊಂಬೆಯಂತೆ ವರ್ತಿಸಿದ್ದಾರೆ ಎಂದು ಆರೋಪಿಸಿದರು.ಪ್ರತಿಪಕ್ಷ ನಾಯಕ ಸ್ಥಾನ ಮುಖ್ಯಮಂತ್ರಿ ಸ್ಥಾನಕ್ಕೆ ಸಮಾನವಾಗಿದೆ. ಅಂತಹ ಸ್ಥಾನಮಾನ ಹೊಂದಿರುವ ಛಲವಾದಿ ನಾರಾಯಣ ಸ್ವಾಮಿ ಮೇಲೆ ದೌರ್ಜನ್ಯ ನಡೆದರೂ ಸ್ಥಳದಲ್ಲಿದ್ದ ಪೊಲೀಸರು ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಇದರಿಂದ ಖರ್ಗೆ ಕುಟುಂಬ ಕಲಬುರಗಿಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿರುವುದು ಬಹಿರಂಗ ಸತ್ಯವಾಗಿದೆ. ನಾರಾಯಣ ಸ್ವಾಮಿ ಅವರು ಗೃಹ ಸಚಿವರು, ಎಡಿಜಿಪಿ, ಎಸ್‌ಪಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಖರ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಬಿಜೆಪಿ ಹೋರಾಟ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ದಲಿತ ನಾಯಕರೇ ಟಾರ್ಗೆಟ್ ಆಗುತ್ತಿದ್ದಾರೆ. ಅಹಿಂದ ರಾಮಯ್ಯ ಅಧಿಕಾರಕ್ಕೆ ಬಂದು 2 ವರ್ಷದಲ್ಲಿ ಪರಿಶಿಷ್ಟರಿಗೆ ಮೀಸಲಾದ ಅನುದಾನವನ್ನೇ ಬಾಚಿಕೊಂಡಿದ್ದಾರೆ. ಜೇವರ್ಗಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶಾಸಕ ಬಸವಾಜ ಮತ್ತಿಮುಡ್ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ. ದಲಿತರ ನಾಯಕರ ಮೇಲೆ ಹಲ್ಲೆ ನಡೆದರೂ ಕ್ರಮ ಕೈಗೊಂಡಿಲ್ಲ ಎಂದರು.ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ನಾಯ್ಕ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯಕ್ಕೆ ತೀವ್ರ ಆರ್ಥಿಕ ದಿವಾಳಿ ಭಾಗ್ಯ ತಂದಿದೆ. ಇದೊಂದು ವಸೂಲಿಗಾರರ ಸರ್ಕಾರವಾಗಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಚಾರ್ಜ್ ಶೀಟ್ ಬಿಡುಗಡೆ ಮಾಡಿದರು. ಮುಖಂಡರಾದ ಬಿ.ಎಂ. ಸತೀಶ ಕೊಳೇನಹಳ್ಳಿ, ಕೊಟ್ರೇಶ ಗೌಡ, ರವಿಕುಮಾರ, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ, ರಮೇಶ ನಾಯ್ಕ, ಬಸವರಾಜ ಗುಡೇಹಳ್ಳಿ ಇತರರು ಇದ್ದರು.- - -
(ಬಾಕ್ಸ್) * ಪೂರ್ವ ನಿಯೋಜಿಕ ಕೃತ್ಯ ಖರ್ಗೆ ಕುಟುಂಬದ ಅಕ್ರಮ ಆಸ್ತಿ ಸಂಪಾದನೆ ಬಗ್ಗೆ ಸದನದ ಒಳಗೆ, ಹೊರಗೆ ಛಲವಾದಿ ನಾರಾಯಣ ಸ್ವಾಮಿ ಹಿಂದಿನಿಂದಲೂ ಹೋರಾಟ ನಡೆಸಿದ್ದಾರೆ. ಅದರ ಪರಿಣಾಮ ಕೆಐಎಡಿಬಿಗೆ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ನೀಡಿದ್ದ 5 ಎಕರೆ ಭೂಮಿಯನ್ನು ಖರ್ಗೆ ಕುಟುಂಬ ಹಿಂದಿರುಗಿಸಬೇಕಾಯಿತು. ಇದೇ ಹಳೆ ದ್ವೇಷದಿಂದ ಪ್ರಿಯಾಂಕ್ ಖರ್ಗೆ ತಮ್ಮ ಬೆಂಬಲಿಗರಿಂದ ಚಿತ್ತಾಪುರದಲ್ಲಿ ಛಲವಾದಿ ನಾರಾಯಣ ಸ್ವಾಮಿ, ಬಿಜೆಪಿ ನಾಯಕರ ಮೇಲೆ ಹಲ್ಲೆ, ಕೊಲೆ ಯತ್ನ ಮಾಡಿಸಿದ್ದು, ಇದೆಲ್ಲಾ ಪ್ರಿಯಾಂಕ್ ಖರ್ಗೆ ಪೂರ್ವ ನಿಯೋಜಿಕ ಕೃತ್ಯ ಎಂದು ಎಂ.ಬಸವರಾಜ ನಾಯ್ಕ ದೂರಿದರು.- - -
-23ಕೆಡಿವಿಜಿ2, 3:ದಾವಣಗೆರೆಯಲ್ಲಿ ಗುರುವಾರ ಬಿಜೆಪಿ ಹಿರಿಯ ಮುಖಂಡ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಚಾರ್ಜ್ ಶೀಟ್ ಬಿಡುಗಡೆಗೊಳಿಸಲಾಯಿತು.