ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲೆಯ ಜೀವನಾಡಿಯಾದ ಹೇಮಾವತಿ ಜಲಾಶಯದ ನೀರಿನ ಸಮೃದ್ಧಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡರ ನೇತೃತ್ವದಲ್ಲಿ ಶನಿವಾರ ಬಾಗಿನ ಅರ್ಪಣೆ ನೆರವೇರಿಸಿದರು.ಜಿಲ್ಲಾ ಸಚಿವರು ನದಿ ದೇವತೆಯ ಆರಾಧನೆ ಮಾಡಿ ಬಾಗಿನ ಅರ್ಪಣೆ ಮಾಡುವ ಮೂಲಕ ಜಿಲ್ಲೆಯ ಕೃಷಿ, ಕುಡಿಯುವ ನೀರು ಹಾಗೂ ಪರಿಸರದ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಅವರು ಮಾತನಾಡಿ, ಹೇಮಾವತಿ ನದಿ ಹಾಸನ ಜಿಲ್ಲೆಯ ಜೀವನಧಾರೆ. ಈ ನದಿಯ ಆಶೀರ್ವಾದದಿಂದ ಲಕ್ಷಾಂತರ ರೈತರು ಬದುಕು ಕಟ್ಟಿಕೊಂಡಿದ್ದಾರೆ. ಸರ್ಕಾರ ನದಿ ನೀರಿನ ನಿರ್ವಹಣೆಯಲ್ಲಿ ಹಾಗೂ ಜಲ ಸಂಪನ್ಮೂಲ ಸಂರಕ್ಷಣೆಯಲ್ಲಿ ತೀವ್ರ ಬದ್ಧವಾಗಿದೆ ಎಂದು ಹೇಳಿದರು.ಬಾಗಿನ ಅರ್ಪಣೆ ಸಂದರ್ಭದಲ್ಲಿ ದೇವರ ನಾಮಸ್ಮರಣೆ, ಪೂಜೆ ಹಾಗೂ ಸಾಂಪ್ರದಾಯಿಕ ವಿಧಿವಿಧಾನಗಳು ನೆರವೇರಿಸಲಾಯಿತು. ಜನಸಾಮಾನ್ಯರ ಉತ್ಸಾಹಪೂರ್ಣ ಹಾಜರಾತಿಯಿಂದ ಕಾರ್ಯಕ್ರಮಕ್ಕೆ ಧಾರ್ಮಿಕ ಭಾವನಾತ್ಮಕ ವಾತಾವರಣ ನಿರ್ಮಾಣಗೊಂಡಿತು. ಸಚಿವ ಬೈರೇಗೌಡ ಅವರು ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿ, ನೀರಿನ ಸಮರ್ಪಕ ಬಳಕೆ ಹಾಗೂ ಮುಂದಿನ ಹಂಗಾಮಿಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.ಕಾರ್ಯಕ್ರಮದಲ್ಲಿ ಸಂಸದ ಶ್ರೇಯಸ್ ಪಟೇಲ್, ರಾಜ್ಯ ಗೃಹಮಂಡಳಿ ಅಧ್ಯಕ್ಷ ಹಾಗೂ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಶಾಸಕರಾದ ಸಿ.ಎನ್. ಬಾಲಕೃಷ್ಣ, ಸಿಮೆಂಟ್ ಮಂಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟೇಲ್ ಶಿವಪ್ಪ, ಜಿಲ್ಲಾಧಿಕಾರಿ ಲತಾ ಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ ಸೇರಿದಂತೆ ಅನೇಕ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸ್ಥಳೀಯರು ಭಾಗವಹಿಸಿದ್ದರು.
;Resize=(128,128))
;Resize=(128,128))