ಶಿರಾಡಿ ಘಾಟ್‌ಗೆ ಸಚಿವ ಕೃಷ್ಣಭೈರೇಗೌಡ ಭೇಟಿ

| Published : Aug 01 2024, 12:17 AM IST

ಸಾರಾಂಶ

ಸಕಲೇಶಪುರ ತಾಲೂಕಿನ ಮಳೆಹಾನಿ ಪ್ರದೇಶಗಳನ್ನು ಕಂದಾಯ ಸಚಿವ ಕೃಷ್ಣ ಭೈರೇಗೌಡ ವೀಕ್ಷಣೆ ಮಾಡಿದರು. ನಂತರ ಮಾತನಾಡಿ ಕೇರಳದಲ್ಲಿ ಆದ ಘಟನೆಯಂತೆ ನಮ್ಮಲ್ಲೂ ಕೂಡ ಆಗಬಾರದು ಎಂದು ಹಲವಾರು ಮುನ್ನೆಚ್ಚರಿಕೆ ವಹಿಸಿದ್ದೇವೆ ಎಂದು ಹೇಳಿದರು. ಶಿರಾಡಿ ಬಳಿ ತಡೆಗೋಡೆಗಳನ್ನು ಎತ್ತರದಲ್ಲಿ ಕಟ್ಟಬೇಕಿತ್ತು ಆದರೆ ಕಟ್ಟಿಲ್ಲ. ಮತ್ತೆ ಕೆಲವು ಕಡೆ ರಸ್ತೆಗಳನ್ನು ಎತ್ತರ ಮಾಡಲಾಗಿದ್ದು ಇಂತಹ ಕಡೆ ರಸ್ತೆ ಬದಿಯಲ್ಲಿ ಆರ್‌.ಸಿ.ಸಿ ಹಾಕುವ ಬದಲು ಕಲ್ಲಿನಿಂದ ತಡೆಗೋಡೆ ಕಟ್ಟಿದ್ದಾರೆ, ಇದು ತಡೆಯುವುದಿಲ್ಲ. ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಸಂಸ್ಥೆಗೆ ರಾಜ್ಯದ ಕೆಲವು ಹೆದ್ದಾರಿಗಳಲ್ಲಿ ಸರ್ವೆ ಮಾಡಲು ಹೇಳಿದ್ದೇನೆ. ಏಕೆಂದರೆ ರಸ್ತೆ ಡಿಸೈನ್‌ನಲ್ಲಿ ಬದಲಾವಣೆ ಬೇಕಾಗಿದೆ. ಭವಿಷ್ಯದಲ್ಲಿ ಯಾವುದೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು ಎಂದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಕೇರಳದಲ್ಲಿ ಆದ ಘಟನೆಯಂತೆ ನಮ್ಮಲ್ಲೂ ಕೂಡ ಆಗಬಾರದು ಎಂದು ಹಲವಾರು ಮುನ್ನೆಚ್ಚರಿಕೆ ವಹಿಸಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ತಾಲೂಕಿನ ಮಳೆಹಾನಿ ಪ್ರದೇಶಗಳನ್ನು ಬುಧವಾರ ವೀಕ್ಷಿಸಿದ ನಂತರ ಮಾತನಾಡಿ, ಶಿರಾಡಿ ಘಾಟ್ ಸಮಸ್ಯೆ ಇವತ್ತು ನಿನ್ನೆಯದಲ್ಲ, ಕಳೆದ ಹಲವಾರು ವರ್ಷಗಳಿಂದ ಏನಾದರೂ ಒಂದು ಸಮಸ್ಯೆ ಬರುತ್ತಲೇ ಇರುತ್ತದೆ. ಅದೃಷ್ಟ ಚೆನ್ನಾಗಿತ್ತು ಪೊಲೀಸ್, ಕಂದಾಯ ಇಲಾಖೆ ಹಾಗೂ ಎನ್.ಎಚ್.ಎ.ಐನವರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಭೂಕುಸಿತದಿಂದ ಯಾವುದೆ ಜೀವ ಹಾನಿಯಾಗದಂತೆ ಎಚ್ಚರ ವಹಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯವರು ದೊಡ್ಡ ಎಂಜಿನಿಯರಿಂಗ್ ಚಾಲೆಂಜ್ ನಡುವೆ ಕೆಲಸ ಮಾಡುತ್ತಿದ್ದಾರೆ. ಕೇರಳ, ಉತ್ತರಾಖಂಡ್‌ನಂತೆ ಕರ್ನಾಟಕದಲ್ಲೂ ಅಲ್ಲಲ್ಲಿ ಭೂಕುಸಿತವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಡಿಸೈನ್ ಪುನರ್ ಪರಿಶೀಲಿಸಬೇಕು. ಶಿರಾಡಿ ಘಾಟ್ ಕಾಮಗಾರಿಯಲ್ಲಿ ಎರಡು ಸಮಸ್ಯೆಗಳು ಎದ್ದು ಕಂಡಿದೆ. ಮೊದಲನೆಯದಾಗಿ ೭೦ರಿಂದ ೧೦೦ಅಡಿ ಎತ್ತರದ ಗುಡ್ಡಗಳನ್ನು ನೇರವಾಗಿ ಕಡಿಯಲಾಗಿದೆ. ಅದು ತಪ್ಪು. ಅಷ್ಟು ಎತ್ತರದ ಗುಡ್ಡಗಳನ್ನು ಸ್ಲೋಪ್‌ನಲ್ಲಿ ಕಡಿಯುವುದು ಕಷ್ಟ, ಏಕೆಂದರೆ ಈ ಭೂಮಿಯ ಪಕ್ಕದಲ್ಲಿ ಅರಣ್ಯ ಇಲಾಖೆ ಭೂಮಿ ಬರುತ್ತದೆಂದು ಗುತ್ತಿಗೆದಾರರು ಹೇಳುತ್ತಿದ್ದಾರೆ ಮತ್ತು ತಡೆಗೋಡೆಗಳನ್ನು ಎತ್ತರದಲ್ಲಿ ಕಟ್ಟಬೇಕಿತ್ತು ಆದರೆ ಕಟ್ಟಿಲ್ಲ. ಮತ್ತೆ ಕೆಲವು ಕಡೆ ರಸ್ತೆಗಳನ್ನು ಎತ್ತರ ಮಾಡಲಾಗಿದ್ದು ಇಂತಹ ಕಡೆ ರಸ್ತೆ ಬದಿಯಲ್ಲಿ ಆರ್‌.ಸಿ.ಸಿ ಹಾಕುವ ಬದಲು ಕಲ್ಲಿನಿಂದ ತಡೆಗೋಡೆ ಕಟ್ಟಿದ್ದಾರೆ, ಇದು ತಡೆಯುವುದಿಲ್ಲ. ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಸಂಸ್ಥೆಗೆ ರಾಜ್ಯದ ಕೆಲವು ಹೆದ್ದಾರಿಗಳಲ್ಲಿ ಸರ್ವೆ ಮಾಡಲು ಹೇಳಿದ್ದೇನೆ. ಏಕೆಂದರೆ ರಸ್ತೆ ಡಿಸೈನ್‌ನಲ್ಲಿ ಬದಲಾವಣೆ ಬೇಕಾಗಿದೆ. ಭವಿಷ್ಯದಲ್ಲಿ ಯಾವುದೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು ಎಂದರು.

ಹವಾಮಾನ ಬದಲಾವಣೆ ಮುಂದಿನ ದಿನಗಳಲ್ಲಿ ಸಾಮಾನ್ಯವಾಗಿದ್ದು ರಾಷ್ಟ್ರೀಯ ಹೆದ್ದಾರಿಗಳ ಜೊತೆಗೆ ರಾಜ್ಯ ಹೆದ್ದಾರಿಗಳಿಗೂ ಹಲವೆಡೆ ಹಾನಿಯಾಗಿದ್ದು ಈ ಹಿನ್ನೆಲೆಯಲ್ಲಿ ರಾಜ್ಯ ಹೆದ್ದಾರಿಗಳಲ್ಲೂ ಡಿಸೈನ್‌ ಬದಲಾವಣೆಗೆ ಮುಖ್ಯಮಂತ್ರಿಗಳು ಈ ವರ್ಷ ೧೦೦ಕೋಟಿ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಎನ್.ಎಚ್.ಎ.ಐ ವಿರುದ್ಧ ಬೈದರೆ ಸರಿಯಾಗಿ ಯಾವುದೇ ಪರಿಹಾರ ಸಿಗುವುದಿಲ್ಲ. ಅತ್ಯಂತ ಜಟಿಲವಾದ ಸಮಸ್ಯೆ ಇಲ್ಲಿದ್ದು ಎಲ್ಲರೂ ಒಟ್ಟುಗೂಡಿ ಕೆಲಸ ಮಾಡಬೇಕು. ಅವರ ಸಹಕಾರ ತೆಗೆದುಕೊಂಡು ಈ ರೀತಿಯಾಗದಂತೆ ನೋಡಿಕೊಳ್ಳುತ್ತೇನೆ. ಇದನ್ನು ಬಂದ್‌ ಮಾಡಿದರೆ ಆರ್ಥಿಕತೆಗೆ ತೀವ್ರ ಪೆಟ್ಟು ಬೀಳುತ್ತದೆ. ಮಂಗಳೂರು ಹಾಗೂ ಹಾಸನ ಜಿಲ್ಲಾಧಿಕಾರಿಗಳ ಜೊತೆಗೆ ಏನು ಮಾಡಿದರೂ ಇದನ್ನು ತೆರೆದಿಡಬೇಕು. ಈ ರಸ್ತೆ ತುಂಬಾ ಅವಶ್ಯಕತೆಯಿದೆ. ಹೆಚ್ಚಿನ ಮಾನವ ಸಂಪನ್ಮೂಲವನ್ನು ಸುರಕ್ಷತೆಗೆ ಹಾಕಬೇಕಾಗಿದೆ. ಗುಡ್ಡ ಕುಸಿತವಾದಾಗ ಬಂದ್ ಮಾಡಿ ಸಣ್ಣಪುಟ್ಟ ತೊಂದರೆಯಾದಾಗ ಬಂದ್ ಮಾಡುವುದು ಬೇಡ, ಬಂದ್ ಮಾಡುವುದರಿಂದ ಯಾವುದೇ ಪರಿಹಾರ ಸಿಗುವುದಿಲ್ಲ. ಕಷ್ಟದ ಪರಿಸ್ಥಿತಿಯಲ್ಲಿ ಇದು ತೆರೆದಿರಬೇಕು ಎಲ್ಲಾ ರೀತಿ ನೆರವನ್ನು ರಾಜ್ಯ ಸರ್ಕಾರದಿಂದ ನಾವು ಎನ್.ಎಚ್.ಎ.ಐಗೆ ನೀಡುತ್ತೇವೆ ಎಂದರು.

ಕೇರಳಕ್ಕೆ ನಮ್ಮ ರಾಜ್ಯದ ಇಬ್ಬರು ಅಧಿಕಾರಿಗಳನ್ನು ನೇಮಕ ಮಾಡಿದ್ದೇವೆ. ಕೇರಳ ಸರ್ಕಾರದ ಜೊತೆ ನಾವು ಕೈಜೋಡಿಸುತ್ತೇವೆ ಎಲ್ಲಾ ನೆರವು ನೀಡುತ್ತೇವೆ. ಮಾನವೀಯ ದುರಂತದ ಸಂದರ್ಭದಲ್ಲಿ ಗಡಿಭಾಗದಲ್ಲಿ ಹೆಚ್ಚಿನ ನೆರವು ನೀಡಬೇಕು. ಅವರ ಜಾಗದಲ್ಲಿ ಪರ್ಯಾಯವಾಗಿ ರಸ್ತೆ ಕೊಡಲು ಎಸ್ಟೇಟ್ ಮಾಲೀಕರು ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲು ಮುಂದಾಗುತ್ತೇವೆ. ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಕಂದಾಯ ಇಲಾಖೆಯ ಜಾಗ ಬೇಕಿದಲ್ಲಿ ನಾವು ಕೊಡಲು ಕ್ರಮ ಕೈಗೊಳ್ಳುತ್ತೇವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಂಸ್ಥೆಗೆ ಸಿಎಂ ಮೂಲಕ ಪತ್ರ ಬರೆಯುತ್ತೇವೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸತ್ಯಭಾಮ, ಹೆಚ್ಚುವರಿ ಜಿಲ್ಲಾಧಿಕಾರಿ ಶಾಂತಲಾ, ಜಿಲ್ಲಾ ಪಂಚಾಯತ್ ಸಿ.ಇ.ಒ ಪೂರ್ಣಿಮಾ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕ ಪ್ರವೀಣ್, ಉಪವಿಭಾಗಾಧಿಕಾರಿ ಡಾ.ಶ್ರುತಿ ಸೇರಿದಂತೆ ಇತರರು ಹಾಜರಿದ್ದರು೩೧ಎಸ್.ಕೆ.ಪಿ.ಪಿ೧,೧-೧,೧-೨ ಸಕಲೇಶಪುರ ತಾಲೂಕಿನ ಶಿರಾಡಿಘಾಟ್ ರಾಷ್ಟ್ರೀಯ ಹೆದ್ದಾರಿ ೭೫ ದೊಡ್ಡತಪ್ಪಲೆ ಸಮೀಪ ಗುಡ್ಡ ಕುಸಿತವನ್ನು ಕಂದಾಯ ಸಚಿವ ಕೃಷ್ಣ ಭೈರೇಗೌಡ ವೀಕ್ಷಿಸಿದರು. ಈ ಸಂದರ್ಭದಲ್ಲಿ ಶಾಸಕ ಸಿಮೆಂಟ್ ಮಂಜು ಹಾಗೂ ಇತರರು ಹಾಜರಿದ್ದರು. ಹೇಳಿಕೆ-1ಎತ್ತಿನಹೊಳೆ ಹಾಗೂ ಚತುಷ್ಫಥ ರಸ್ತೆ ಅವೈಜ್ಞಾನಿಕ ಕಾಮಗಾರಿಯಿಂದ ಈ ರೀತಿಯ ಘಟನೆಯಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಿ ಇಲ್ಲಿ ಆಗಿರುವ ಹಾನಿಗೆ ಹೆಚ್ಚಿನ ಪರಿಹಾರ ಪ್ಯಾಕೇಜ್ ನೀಡಬೇಕು. - ಸಿಮೆಂಟ್ ಮಂಜುನಾಥ್‌ ಶಾಸಕ