ಯುವಶಕ್ತಿಗೆ ಸಚಿವ ಲಾಡ್‌ ಉದ್ಯೋಗದ ಭರವಸೆ

| Published : Jan 19 2025, 02:16 AM IST

ಸಾರಾಂಶ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶಕ್ಕೆ ರಾಜಕಾರಣ ಅನಿವಾರ್ಯ. ರಾಜಕಾರಣ, ರಾಜಕಾರಣಿ, ಸರ್ಕಾರವನ್ನು ಯುವಕರು ಹತ್ತಿರದಿಂದ ಗಮನಿಸಬೇಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳು ಎಲ್ಲವೂ ಸತ್ಯಾಸತ್ಯತೆಯಿಂದ ಕೂಡಿರುವುದಿಲ್ಲ.

ಕಲಘಟಗಿ:

ಗ್ರಾಮೀಣ ಪ್ರದೇಶದ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ದೊರಕಿಸುವ ನಿಟ್ಟಿನಲ್ಲಿ ಲಾಡ್ ಫೌಂಡೇಶನ್ ವತಿಯಿಂದ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಪಟ್ಟಣದ ಜನತಾ ಇಂಗ್ಲಿಷ್ ಸ್ಕೂಲಿನಲ್ಲಿ ಶನಿವಾರ ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಫೌಂಡೇಶನ್‌ ವತಿಯಿಂದ ಜಿಲ್ಲೆಯ ಎಲ್ಲ ತಾಲೂಕಿನಲ್ಲೂ ಉದ್ಯೋಗ ಮೇಳ ಆಯೋಜಿಸುವ ಗುರಿ ಹೊಂದಲಾಗಿದೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶಕ್ಕೆ ರಾಜಕಾರಣ ಅನಿವಾರ್ಯ. ರಾಜಕಾರಣ, ರಾಜಕಾರಣಿ, ಸರ್ಕಾರವನ್ನು ಯುವಕರು ಹತ್ತಿರದಿಂದ ಗಮನಿಸಬೇಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳು ಎಲ್ಲವೂ ಸತ್ಯಾಸತ್ಯತೆಯಿಂದ ಕೂಡಿರುವುದಿಲ್ಲ. ಯಾವ ಸರ್ಕಾರ ಹೆಚ್ಚು ಜನಪರ ಕೆಲಸ ಮಾಡುತ್ತದೆ ಎಂದು ಗುರುತಿಸಿದರೆ ಅಂದು ಒಳ್ಳೇಯ ಸರ್ಕಾರ ಆಡಳಿತಕ್ಕೆ ಬರುತ್ತದೆ ಎಂದರು.

ಯುವಕರು ದೇಶದ ಭವಿಷ್ಯದ ಹರಿಕಾರರು. ತಂದೆ-ತಾಯಿಂದರು ಕಷ್ಟಪಟ್ಟು ಮಕ್ಕಳಿಗೆ ಓದಿಸುತ್ತಾರೆ. ಉನ್ನತ ವ್ಯಾಸಂಗ ಮಾಡಿಯೂ ಸ್ಥಳೀಯವಾಗಿಯೇ ಕೆಲಸ ಮಾಡಬೇಕು ಎಂಬುದನ್ನು ಬಿಟ್ಟು ರಾಜ್ಯ, ಹೊರ ರಾಜ್ಯದಲ್ಲಿ ಕೆಲಸ ಸಿಕ್ಕರೆ ಖಂಡಿತವಾಗಿಯೂ ಹೋಗಿ. ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿದೆ ಎಂದು ಹೇಳಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜಿಲ್ಲಾಧ್ಯಕ್ಷ ಎಸ್.ಆರ್. ಪಾಟೀಲ, ಸಚಿವರ ಆಪ್ತ ಕಾರ್ಯದರ್ಶಿ ಹರಿಶಂಕರ ಮಠದ, ಮುಖಂಡರಾದ ವೃಷಬೇಂದ್ರ ಪಟ್ಟಣಶೆಟ್ಟಿ, ಬಾಬು ಅಂಚಟಗೇರಿ, ನರೇಶ ಮಲೆನಾಡು, ಶ್ರೀಧರ ಪಾಟೀಲ ಕುಲಕರ್ಣಿ, ಸಹದೇವ ಚಲೋಜಿ, ಗಿರೀಶ ಅಂಗಡಿ, ಸಾದಿಕ್ ಲತ್ತೆಮ್ಮನವರ ಇತರರಿದ್ದರು.