ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ-ಧಾರವಾಡ ನಡುವೆ ನೇರ ರೈಲು ಮಾರ್ಗ ಯೋಜನೆ ವಿಳಂಬಕ್ಕೆ ರಾಜ್ಯ ಸರ್ಕಾರ ಹಾಗೂ ಸಚಿವ ಸಂತೋಷ ಲಾಡ್ ಕಾರಣ ಎಂದು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಆರೋಪಿಸಿದರು.ನಗರದಲ್ಲಿ ಸೋಮವಾರ ವಿವಿಧ ರೈಲ್ವೆ ಕಾಮಗಾರಿ ಶಂಕು ಸ್ಥಾಪನೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈಗಾಗಲೇ ಎರಡ್ಮೂರು ಬಾರಿ ಮಾತಾಡಿದ್ದೇನೆ. ನಾನು ಸಾಕಷ್ಟು ಬಾರಿ ಸಂಪರ್ಕಿಸಿದರೂ ಸಂತೋಷ್ ಲಾಡ್ ಸ್ಪಂದಿಸುತ್ತಿಲ್ಲ. ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ಕೂಡ ಮಾತನಾಡಿದ್ದಾರೆ. ನಾನೇ ಮತ್ತೊಂದು ಬಾರಿ ರಾಜ್ಯ ಸರ್ಕಾರದ ಜೊತೆ ಮಾತನಾಡುತ್ತೇನೆ ಎಂದರು.ಬೆಳಗಾವಿ ಜಿಲ್ಲೆಯಲ್ಲಿ ಈಗಾಗಲೇ ನೂರಕ್ಕೆ ನೂರರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಸಚಿವ ಸಂತೋಷ್ ಲಾಡ್ ಯಾಕೆ ಹೀಗೆ ಮಾಡುತ್ತಿದ್ದಾರೆಂದು ಗೊತ್ತಿಲ್ಲ. ಸಂತೋಷ್ ಲಾಡ್ ಸ್ಪಂದಿಸದಿದ್ದರೆ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದರು.ನೇರ ರೈಲು ಯೋಜನೆಗೆ ಈಗಾಗಲೇ ₹937 ಕೋಟಿ ಹಣ ಮೀಸಲಿಡಲಾಗಿದೆ. ಸಚಿವ ಸಂತೋಷ ಲಾಡ ಇನ್ನೂ ಬೆಳೆಯಬೇಕು. ಹೀಗೆಕೆ ಮಾಡುತ್ತಿದ್ದಾರೋ? ನಾನೇ ಸಂತೋಷ್ ಲಾಡ್ ಹುಡುಕಿಕೊಂಡು ಹೋಗಿ ಮಾತನಾಡುತ್ತೇನೆ. ಸಿಎಂ ಜೊತೆ ಮಾತಾಡಿದ್ದೇನೆ. ಜಿಲ್ಲಾಧಿಕಾರಿ ಜೊತೆ ಹತ್ತಾರು ಬಾರಿ ಮಾತನಾಡಿದ್ದೇನೆ. ಏಕೆ ಹೀಗೆ ಮಾಡುತ್ತಿದ್ದೀರಿ ಎಂದು ರಾಜ್ಯ ಸರ್ಕಾರ ತಿಳಿಸಬೇಕು. ಯಾವುದೇ ಕಾರಣಕ್ಕೂ ಬೆಳಗಾವಿ-ಧಾರವಾಡ ರೈಲು ಯೋಜನೆ ನಿಲ್ಲಿಸಲ್ಲ ಎಂದು ಸ್ಪಷ್ಟಪಡಿಸಿದರು.ಹುಬ್ಬಳ್ಳಿಯಲ್ಲಿ ಇನ್ನೂ 45 ಎಕರೆ ಜಮೀನು ಸ್ವಾದೀನ ಮಾಡಿಕೊಳ್ಳಬೇಕು. ಈಗಾಗಲೇ ಎರಡ್ಮೂರು ಬಾರಿ ನಾನು ಮಾತಾಡಿದ್ದೇನೆ. ನಾನು ಎಷ್ಟು ಸಲ ಸಂಪರ್ಕ ಮಾಡಿದರೂ ಸಂತೋಷ ಲಾಡ್ ಸ್ಪಂದನೆ ಮಾಡುತ್ತಿಲ್ಲ. ಬೆಳಗಾವಿ ಮತ್ತು ಖಾನಾಪುರ ಸೇರಿ ಹಲವು ಕಡೆ ಮೇಲ್ಸೆತುವೆ ಕಾಮಗಾರಿ ಶಂಕು ಸ್ಥಾಪನೆ ಮಾಡಲಾಗಿದೆ. ದೇಶದಲ್ಲಿ ರೈಲ್ವೆ ನಿಲ್ದಾಣಗಳ ಚಿತ್ರಣ ಬದಲಾಗುತ್ತಿದೆ. ಪ್ರಧಾನಿ ಕನಸಿನಂತೆ 2047 ವಿಕಸಿತ ಭಾರತದ ಕಡೆ ಹೆಜ್ಜೆ ಇಡುತ್ತಿದ್ದೇವೆ. ಸವದತ್ತಿ- ರಾಮದುರ್ಗ ನಡುವಿನ ಹೊಸ ರೈಲಿಗೆ ಡಿಮ್ಯಾಂಡ್ ಇದೆ. ಈ ಕುರಿತು ಪರಿಶೀಲನೆ ಮಾಡಲಾಗುವುದು. ಮರು ಸಮೀಕ್ಷೆಗೆ ಆದೇಶ ಮಾಡಲಾಗಿದೆ. ದೇಶ ಬೆಳೆಯುತ್ತಿದೆ ಸಾಕಷ್ಟು ಕಡೆಗಳಲ್ಲಿ ಡಿಮ್ಯಾಂಡ್ ಇದೆ. ಅಭಿವೃದ್ಧಿಯಾಗದ ರಾಜ್ಯಗಳಲ್ಲಿ ಅರಾಜಕತೆ ಇತ್ತು. ಈಗ ಇಡೀ ದೇಶ ಬದಲಾವಣೆ ಮಾಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕೆಲಸ ಮಾಡುತ್ತಿದ್ದಾರೆ ಎಂದರು.ಈ ಸಂದರ್ಭದಲ್ಲಿ ಸಂಸದ ಜಗದೀಶ ಶೆಟ್ಟರ್, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅಭಯ ಪಾಟೀಲ, ಮೇಯರ್ ಮಂಗೇಶ ಪವಾರ, ಡಿಆರ್‌ಎಂ ಹುಬ್ಬಳ್ಳಿ ಬೇಲಾ ಮೀನಾ, ಮುಖ್ಯ ಆಡಳಿತಾಧಿಕಾರಿ ಕನ್ಸ್ಟ್ರಕ್ಷನ್ ಅಜಯ್ ಶರ್ಮ, ಎಸ್.ಪಿ.ಶಾಸ್ತ್ರಿ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.ವಿವಿಧ ರೈಲ್ವೆ ಕಾಮಗಾರಿಗಳಿಗೆ ಚಾಲನೆ
ರೈಲ್ವೆ ಮತ್ತು ಜಲಶಕ್ತಿ ಇಲಾಖೆಯ ಕೇಂದ್ರ ರಾಜ್ಯ ಸಚಿವ ವಿ.ಸೋಮಣ್ಣ ಅವರು ಬೆಳಗಾವಿ ಮತ್ತು ಖಾನಾಪುರದಲ್ಲಿ ಎರಡು ಪ್ರಮುಖ ರಸ್ತೆ ಕೆಳ ಸೇತುವೆಗಳು ಹಾಗೂ ಖಾನಾಪುರ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಸೌಲಭ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಗಳು ಈ ಪ್ರದೇಶಗಳ ಸಂಪರ್ಕ ಪ್ರಯಾಣದ ದಕ್ಷತೆ ಮತ್ತು ಪ್ರಯಾಣಿಕರ ಸೌಕರ್ಯವನ್ನು ಹೆಚ್ಚಿಸುವ ಗುರಿ ಹೊಂದಿವೆ. ಇದೇ ಸಂದರ್ಭದಲ್ಲಿ, ಖಾನಾಪುರದಲ್ಲಿ ಹೆಚ್ಚುವರಿ ನಿಲುಗಡೆಗೆ ಅವಕಾಶ ಕಲ್ಪಿಸಿದ ಎಸ್ಎಸ್ಎಸ್ ಹುಬ್ಬಳ್ಳಿ-ದಾದರ್ ಸೆಂಟ್ರಲ್ ಎಕ್ಸ್ ಪ್ರೆಸ್ (17317) ರೈಲಿಗೆ ಅವರು ಹಸಿರು ನಿಶಾನೆ ತೋರಿದರು. ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ನಿರ್ಮಾಣ ಕಾರ್ಯವನ್ನು ನಿಗದಿತ ಸಮಯದಲ್ಲಿ ಉತ್ತಮ ಗುಣಮಟ್ಟದಿಂದ ಪೂರ್ಣಗೊಳಿಸಲು ಸೂಚನೆ ನೀಡಿದರು.ಶಂಕುಸ್ಥಾಪನೆ ಕಾರ್ಯಕ್ರಮಕ್ಕೂ ಮುನ್ನ ಸೋಮಣ್ಣ ಅವರು ಧಾರವಾಡ ಮತ್ತು ಬೆಳಗಾವಿ ನಡುವೆ ರೈಲಿನಲ್ಲಿ ಪ್ರಯಾಣಿಸಿ ಪರಿಶೀಲನೆ ನಡೆಸಿದರು. ಈ ಮಾರ್ಗದಲ್ಲಿ ಅವರು ಅಳ್ನಾವರ ಮತ್ತು ಲೋಂಡಾ ರೈಲ್ವೆ ನಿಲ್ದಾಣಗಳನ್ನು ಪರಿಶೀಲಿಸಿ, ಅಲ್ಲಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು. ಅವರ ಸಮಸ್ಯೆಗಳನ್ನು ಆಲಿಸಿದ ಅವರು, ಶೀಘ್ರವಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.