ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ರಾಜ್ಯದಲ್ಲಿ ಹೆಣ್ಣು ಮಕ್ಕಳ ಶಿಕ್ಷಣ, ಆರೋಗ್ಯ, ಸುರಕ್ಷತೆಗೆ ಸರ್ಕಾರ ಹೆಚ್ಚಿನ ಅದ್ಯತೆ ನೀಡಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.ಬೆಳಗಾವಿ ಜಿಲ್ಲಾಡಳಿತ, ಜಿಪಂ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ - 2024 ರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಸರ್ಕಾರ ಹೆಣ್ಣು ಮಕ್ಕಳಿಗೆ ಬಹಳ ಪ್ರೋತ್ಸಾಹ ನೀಡುತ್ತಿದೆ. ಹೆಣ್ಣುಮಕ್ಕಳ ಒಳಿತಿಗಾಗಿಯೇ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಪ್ರತಿ ಮನೆಯಲ್ಲೂ ಗೃಹಲಕ್ಷ್ಮೀಯಾದ ಹೆಣ್ಣು ಮಗಳು ಇರಬೇಕೆನ್ನುವುದು ಸರ್ಕಾರದ ಆಶಯವಾಗಿದೆ. ಇತ್ತೀಚೆಗೆ ಹೆಚ್ಚುತ್ತಿರುವ ಹೆಣ್ಣು ಭ್ರೂಣಹತ್ಯೆ ತಡೆಗೆ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ನಾವು ಕಾರ್ಯನಿರ್ವಹಿಸುತ್ತಿರುವುದು ಸಂತಸ ತಂದಿದೆ. ನಮ್ಮ ಇಲಾಖೆ ಬೇರೆಲ್ಲ ಇಲಾಖೆಗಳಿಗಿಂತ ತುಂಬಾ ಭಿನ್ನವಾದುದು. ಇದು ಮನುಷ್ಯನಿಗಾಗಿ ಮನುಷ್ಯತ್ವದಿಂದ ಕೆಲಸ ಮಾಡುವ ಇಲಾಖೆಯಾಗಿದ್ದು, ನಾನೂ ಹೆಣ್ಣಾಗಿ, ಹೆಣ್ಣು ಮಕ್ಕಳ ಭಾವನೆಗಳನ್ನು ಅರಿತು ಕೆಲಸ ಮಾಡಲು ನೆರವಾಗಿದೆ ಎಂದು ತಿಳಿಸಿದರು.ಜಗತ್ತಿನ ಮೇಲೆ 16 ಸಾವಿರ ಜೀವರಾಶಿ ಇವೆಯಂತೆ. ಈ ಜೀವರಾಶಿಗಳಲ್ಲೇ ಅತ್ಯಂತ ಶ್ರೇಷ್ಠವಾದುದು ಮನುಷ್ಯ ಜೀವರಾಶಿ. ಇದನ್ನರಿತು ಮನುಷ್ಯ ಮನುಷ್ಯತ್ವದಿಂದ ವರ್ತಿಸಬೇಕು. ಪರಸ್ಪರ ಪ್ರೀತಿ-ವಿಶ್ವಾಸ- ಭ್ರಾತೃತ್ವದಿಂದ ಬದುಕಬೇಕು. ಸಮಾಜದಲ್ಲಿ ಜನರ ಜೀವನ ಹೇಗಿದೆ? ಅವರ ದುಃಖ-ದುಮ್ಮಾನಗಳೇನು? ಜೀವನದ ಸವಾಲುಗಳೇನು? ಎನ್ನುವುದನ್ನು ಪೋಷಕರಾದ ತಂದೆ - ತಾಯಿ ಮಕ್ಕಳಿಗೆ ತಿಳಿ ಹೇಳಬೇಕು ಎಂದು ಸಲಹೆ ನೀಡಿದರು.
ಹೆಣ್ಣು ಮಕ್ಕಳು ಬದುಕಿನಲ್ಲಿ ಹಿಂಜರಿಯಬಾರದು. ಎಲ್ಲ ಕ್ಷೇತ್ರಗಳಲ್ಲೂ ದಾಪುಗಾಲು ಹಾಕಬೇಕು. ಮೊದಲಿಗೆ ಹೆತ್ತವರಿಗೆ ಒಳ್ಳೆಯ ಹೆಸರು ತರಬೇಕು. ಗುಂಪಿನಲ್ಲಿ ಗೋವಿಂದ ಆಗಬಾರದು. ಜೀವನದಲ್ಲಿ ಯಶಸ್ಸು ಸಾಧಿಸಬೇಕು. ಬದುಕಿನಲ್ಲಿ ಬರೀ ಓದು ಮುಖ್ಯವಲ್ಲ. ಬದುಕಿನ ಪಾಠ ಕಲಿಯಬೇಕು. ಎಲ್ಲರಿಗಿಂತ ಭಿನ್ನವಾಗಿ ಅಲೋಚನೆ ಮಾಡಬೇಕು. ಹಾಗಾದಾಗ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಮಹಾಂತೇಶ ಭಜಂತ್ರಿ, ಯುವರಾಜ ಕದಂ, ಬಾಳು ದೇಸೂರಕರ್ ಇನ್ನಿತರ ಅಧಿಕಾರಿಗಳು ಇದ್ದರು.ಕೋಟ್..
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಸರ್ಕಾರ ಹೆಣ್ಣು ಮಕ್ಕಳಿಗೆ ಬಹಳ ಪ್ರೋತ್ಸಾಹ ನೀಡುತ್ತಿದೆ. ಹೆಣ್ಣು ಮಕ್ಕಳ ಒಳಿತಿಗಾಗಿಯೇ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಪ್ರತಿ ಮನೆಯಲ್ಲೂ ಗೃಹಲಕ್ಷ್ಮೀಯಾದ ಹೆಣ್ಣು ಮಗಳು ಇರಬೇಕೆನ್ನುವುದು ಸರ್ಕಾರದ ಆಶಯವಾಗಿದೆ. ಈಚೆಗೆ ಹೆಚ್ಚುತ್ತಿರುವ ಹೆಣ್ಣು ಭ್ರೂಣಹತ್ಯೆ ತಡೆಗೆ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ.ಲಕ್ಷ್ಮೀ ಹೆಬ್ಬಾಳಕರ್. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))