ಕನ್ನಡಪ್ರಭ ವಾರ್ತೆ ವಿಜಯಪುರ
ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಿಂದ ಸಿಹಿಸುದ್ದಿ ಬಂದಿದ್ದು, ಮುಂದಿನ ಮೂರು ತಿಂಗಳಲ್ಲಿ ವಿಜಯಪುರದಲ್ಲಿ ವಿಮಾನ ನಿಲ್ದಾಣ ಕಾರ್ಯಾರಂಭಗೊಳ್ಳಲಿದೆ ಎಂದು ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ತಿಳಿಸಿದ್ದಾರೆ. ಇದು ಸಾಧ್ಯವಾದರೆ, ನಮ್ಮ ಜಿಲ್ಲೆಯ ಭವಿಷ್ಯದ ದಿಕ್ಕೇ ಬದಲಾಗಲಿದೆ. ಇದಕ್ಕೆ ಕಾರಣರಾಗಿರುವ ನಮ್ಮೆಲ್ಲರ ನೆಚ್ಚಿನ ನಾಯಕರು, ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲರ ಹೆಸರು ಚರಿತ್ರೆಯಲ್ಲಿ ಚಿರಸ್ಥಾಯಿ ಆಗಲಿದೆ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ತಿಳಿಸಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಎಂ.ಬಿ. ಪಾಟೀಲರ ಪ್ರಯತ್ನದಿಂದಾಗಿ ನೀರಾವರಿಯಲ್ಲಿ ಕ್ರಾಂತಿಯಾಗಿದೆ. ಇದೀಗ ಏರ್‌ಪೋರ್ಟ್ ಬಂದರೆ ವಿಜಯಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಕೃಷಿ, ಶಿಕ್ಷಣ, ಪ್ರವಾಸೋದ್ಯಮ ಮತ್ತು ಆರ್ಥಿಕ ಬೆಳವಣಿಗೆ ಎಲ್ಲದಕ್ಕೂ ದೊಡ್ಡ ನೆರವು ಸಿಗಲಿದೆ. ಹಿಂದಿನ ಸರ್ಕಾರ ಕೈಗೆತ್ತಿಕೊಂಡಿದ್ದ ವಿಮಾನ ನಿಲ್ದಾಣ ಯೋಜನೆ ಚಿಕ್ಕದಾಗಿತ್ತು. ಆದರೆ ಎಂ.ಬಿ. ಪಾಟೀಲರು ವಿಜಯಪುರಕ್ಕೆ ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣವೇ ಆಗಬೇಕೆಂದು, ಪಟ್ಟುಹಿಡಿದು, ಈ ಯೋಜನೆಗೆ ಇದುವರೆಗೂ ₹614.76 ಕೋಟಿ ವಿನಿಯೋಗಿಸುವ ಮೂಲಕ ಬೃಹತ್ ಸಾಧನೆಗೈದಿದ್ದಾರೆ. ವಿಜಯಪುರಕ್ಕೆ ದೊಡ್ಡ ವಿಮಾನಗಳು ಕೂಡ ಬಂದಿಳಿಯಬೇಕು ಎನ್ನುವುದು ಎಂ.ಬಿ. ಪಾಟೀಲರ ಕನಸಾಗಿದೆ. ಇದಕ್ಕಾಗಿ ನಾವೆಲ್ಲರೂ ಅವರ ಪ್ರಯತ್ನಗಳಿಗೆ ಬೆಂಬಲಿಸಬೇಕೆಂದರು..
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿರುವ ಹತ್ತಾರು ಪ್ರವಾಸಿ ತಾಣಗಳಿಗೆ ಪ್ರಾಮುಖ್ಯತೆ ಸಿಗಲಿದೆ. ಬಿಜೆಪಿಯ ಅಪ್ಪಾಸಾಹೇಬ ಪಟ್ಟಣಶೆಟ್ಟಿಯವರು ಸಚಿವರಿದ್ದಾಗ ಇದಕ್ಕೆ ಜಾಗೆ ಪಡೆಯಲಾಗಿದ್ದು, ಅಂದಿನ ಸಿಎಂ ಯಡಿಯೂರಪ್ಪನವರು ಭೂಮಿಪೂಜೆ ಮಾಡಿದ್ದರು. ಬಳಿಕ ಸಂಸದ ರಮೇಶ ಜಿಗಜಿಣಗಿಯವರು ಹಾಗೂ ಅಂದಿನ ಸಚಿವ ಗೋವಿಂದ ಕಾರಜೋಳರು ಅಲ್ಪಸಲ್ಪ ಕೆಲಸ ಮಾಡಿದ್ದಾರೆ. ಆದರೆ ತಾಂತ್ರಿಕ ಕಾರಣಗಳಿಂದಾಗಿ ಸಂಪೂರ್ಣವಾಗಿ ರದ್ದಾಗಲಿದ್ದ ವಿಜಯಪುರ ವಿಮಾನ ನಿಲ್ದಾಣವನ್ನು ಉಳಿಸಿದ್ದು ಸಚಿವ ಎಂ.ಬಿ. ಪಾಟೀಲರು. ಎಂ.ಬಿ.ಪಾಟೀಲರ ಪ್ರಯತ್ನದಿಂದ ವಿಮಾನ ನಿಲ್ದಾಣವಾಗಿದ್ದು, ಜಿಲ್ಲೆಯ ಜನರ ಕನಸು ನನಸಾಗಿದೆ. ಈ ವಿಮಾನ ನಿಲ್ದಾಣ ರಾಜ್ಯ ಸರ್ಕಾರದ ಕೊಡುಗೆ ಎಂದರು.ಶ್ರದ್ಧಾಂಜಲಿ: ಸಿಂದಗಿಯ ಶಿಕ್ಷಕ ಎಚ್.ಟಿ.ಕುಲಕರ್ಣಿ ಅವರು ನಮ್ಮನ್ನಗಲಿದ್ದಾರೆ. ಅವರ ಅಗಲಿಕೆ ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಶಿಕ್ಷಕ ಕುಲಕರ್ಣಿಯವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ಅವರ ಕುಟುಂಬದವರಿಗೆ ನೀಡಲಿ ಎಂದು ಸಂತಾಪ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ನೂತನ ಜಿಲ್ಲಾಧ್ಯಕ್ಷ ವಸಂತ ಹೊನಮೊಡೆ, ಕಾಂಗ್ರೆಸ್ ಮುಖಂಡರಾದ ನಾಗರಾಜ ಲಂಬು, ಫಯಾಜ್ ಕಲಾದಗಿ ಇದ್ದರು.