ಸಚಿವ ಮಧುಗೆ ಬಿಎಸ್‌ವೈ ಕುಟುಂಬದ ಸರ್ಟಿಫಿಕೇಟ್‌ ಬೇಕಿಲ್ಲ: ಮಯೂರ್ ದರ್ಶನ್ ಉ

| Published : Oct 08 2025, 01:01 AM IST

ಸಚಿವ ಮಧುಗೆ ಬಿಎಸ್‌ವೈ ಕುಟುಂಬದ ಸರ್ಟಿಫಿಕೇಟ್‌ ಬೇಕಿಲ್ಲ: ಮಯೂರ್ ದರ್ಶನ್ ಉ
Share this Article
  • FB
  • TW
  • Linkdin
  • Email

ಸಾರಾಂಶ

ತಂದೆಯ ಹಾದಿಯಲ್ಲಿ ಹೋರಾಟ, ಪಾದಯಾತ್ರೆ ಮೂಲಕ ತಾಲೂಕಿನ ನೀರಾವರಿ ಯೋಜನೆಗೆ ಅಡಿಗಲ್ಲು ಹಾಕಿದ ಸಚಿವ ಮಧು ಬಂಗಾರಪ್ಪನವರಿಗೆ ಯಡಿಯೂರಪ್ಪ ಕುಟುಂಬದ ಸರ್ಟಿಫಿಕೇಟ್ ಅಗತ್ಯವಿಲ್ಲ ಎಂದು ಪುರಸಭಾ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರ.ಕಾ ಮಯೂರ್ ದರ್ಶನ್ ಉಳ್ಳಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ತಂದೆಯ ಹಾದಿಯಲ್ಲಿ ಹೋರಾಟ, ಪಾದಯಾತ್ರೆ ಮೂಲಕ ತಾಲೂಕಿನ ನೀರಾವರಿ ಯೋಜನೆಗೆ ಅಡಿಗಲ್ಲು ಹಾಕಿದ ಸಚಿವ ಮಧು ಬಂಗಾರಪ್ಪನವರಿಗೆ ಯಡಿಯೂರಪ್ಪ ಕುಟುಂಬದ ಸರ್ಟಿಫಿಕೇಟ್ ಅಗತ್ಯವಿಲ್ಲ ಎಂದು ಪುರಸಭಾ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರ.ಕಾ ಮಯೂರ್ ದರ್ಶನ್ ಉಳ್ಳಿ ತಿಳಿಸಿದರು.

ಪಟ್ಟಣದ ಸುದ್ದಿಮನೆಯಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಸಂಸದ ರಾಘವೇಂದ್ರ ಅಧಿಕಾರದ ಅಮಲಿನಲ್ಲಿ ತೇಲುತ್ತಿದ್ದು, ವಿನಾಕಾರಣ ಸಚಿವ ಮಧುರವರ ತೇಜೋವಧೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಮಧು ಬಂಗಾರಪ್ಪ ಎಂದಿಗೂ ಅಹಿಂದಾ ನಾಯಕರಲ್ಲ. ಸರ್ವರೂ ಗೌರವಿಸುವ ವ್ಯಕ್ತಿತ್ವ ಹೊಂದಿದ್ದಾರೆ. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷರಾಗಿದ್ದ ಅವರು ರಾಜ್ಯದಲ್ಲಿ 5 ಗ್ಯಾರಂಟಿ ಜಾರಿಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿ ಪ್ರತಿಯೊಬ್ಬರಿಗೂ ಉಚಿತ ಯೋಜನೆಗಳ ಪ್ರಯೋಜನ ತಲುಪಿಸಿದ್ದಾರೆ ಯೋಜನೆಯಿಂದಾಗಿ ತಾಲೂಕಿನ ಎಲ್ಲ ವರ್ಗದ ಜನತೆಗೆ ಶೇ.40 ಕಮಿಷನ್ ರಹಿತವಾಗಿ ನೇರವಾಗಿ 300 ಕೋಟಿ ರು. ಮೌಲ್ಯದ ಪ್ರಯೋಜನ ದೊರೆತಿದೆ. ಕಮೀಷನ್ ದುರಾಸೆಗಾಗಿ ರಸ್ತೆ, ಚರಂಡಿ ನಿರ್ಮಾಣವಾಗಿಲ್ಲ ಎಂದು ತಿಳಿಸಿದರು.

ಪಟ್ಟಣದ ಒಳಚರಂಡಿ ಅವ್ಯವಸ್ಥೆ ಸರಿಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ 30 ಕೋಟಿ ರು. ಅನುದಾನ ನೀಡಿದ್ದಾರೆ ತಾಲೂಕಿಗೆ ಸರ್ಕಾರದ ಕೊಡುಗೆ ಕೇಳುವ ನಿಮಗೆ ನಾಚಿಕೆಯಾಗಬೇಕು. ಮಾದರಿ ತಾಲೂಕಿಗೆ ಟೋಲ್ ಗೇಟ್ ಕೊಡುಗೆ ನೀಡಿದ ಯಡಿಯೂರಪ್ಪನವರು ಇದೀಗ ಜನತೆಯ ವಿರೋಧಕ್ಕೆ ಬೆಚ್ಚಿಬಿದ್ದು ಕಾಂಗ್ರೆಸ್ ಸರ್ಕಾರದ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ ಎಂದರು.

ಗ್ರಾಮೀಣ ಭಾಗದ ಬಹುತೇಕ ಕುಟುಂಬ ಮನೆಯಲ್ಲಿ ಬಂಗಾರಪ್ಪನವರ ಬಾವಚಿತ್ರಕ್ಕೆ ನಿತ್ಯ ಪೂಜೆ ಮಾಡುತ್ತಿರುವ ರೀತಿಯಲ್ಲಿ ಯಡಿಯೂರಪ್ಪ ಹಾಗೂ ಮಕ್ಕಳು ಸಹ ಪೂಜೆ ಮಾಡಬೇಕಾಗಿದೆ. ಬಂಗಾರಪ್ಪನವರು ಬಿಜೆಪಿ ಸೇರ್ಪಡೆಯಾಗದಿದ್ದಲ್ಲಿ ಮುಖ್ಯಮಂತ್ರಿಯಾಗಲು ಸಾದ್ಯವಿಲ್ಲ ಎಂಬುದನ್ನು ಮರೆಯಬಾರದು. ಮಧು ಅಹಿಂದಾ ಕೋಟದಲ್ಲಿ ಸಚಿವರಾಗಿದ್ದಾರೆ ಎಂದು ಹೇಳುವ ಶಾಸಕ ವಿಜಯೇಂದ್ರ ಹಣ ನೀಡಿ ರಾಜ್ಯಾದ್ಯಕ್ಷರಾಗಿರುವ ಬಗ್ಗೆ ಬಿಜೆಪಿ ಮುಖಂಡರ ಪಿಸುಪಿಸುಮಾತು ಸುಳ್ಳಲ್ಲ ಎಂದರು.

ತಾಲೂಕಿನಾದ್ಯಂತ ಶೇ.75 ಜನಗಣತಿ ಪೂರ್ಣಗೊಂಡಿದ್ದು ಜನತೆ ಒಪ್ಪಿಕೊಂಡಿರುವುದಕ್ಕೆ ಸಾಕ್ಷಿಯಾಗಿದೆ. ಧೈರ್ಯವಿದ್ದಲ್ಲಿ ಅ.26 ರಿಂದ ಆರಂಭವಾಗಲಿರುವ ಕೇಂದ್ರದ ಜನಗಣತಿಯನ್ನು ವಿರೋಧಿಸಿ ಎಂದು ಸವಾಲು ಹಾಕಿದರು.

ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್ ಮಾತನಾಡಿ, ಪ್ರತಿಯೊಬ್ಬರ ಆರ್ಥಿಕ ಸ್ಥಿತಿ ಅರಿತು ಯೋಜನೆ ರೂಪಿಸಲು ಹಮ್ಮಿಕೊಳ್ಳಲಾದ ಜಾತಿಗಣತಿ ಬಗ್ಗೆ ವೃಥಾ ಟೀಕಿಸದಂತೆ ಎಚ್ಚರಿಸಿ ತಪ್ಪಿದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್ ರಾಜ್ಯ ಮಹಿಳಾ ಘಟಕದ ಪ್ರ.ಕಾ ಪುಷ್ಪಾ ಶಿವಕುಮಾರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಭಂಡಾರಿ ಮಾಲತೇಶ್, ಕಸಬಾ ಬ್ಯಾಂಕ್ ನಿರ್ದೇಶಕ ಬಡಗಿ ಪಾಲಾಕ್ಷಪ್ಪ, ಈಶಣ್ಣ ಕಲವತ್ತಿ ಮತ್ತಿತರರು ಹಾಜರಿದ್ದರು.