ಜನರ ಅಹವಾಲು ಆಲಿಸಿದ ಸಚಿವ ಮಂಕಾಳ ವೈದ್ಯ

| Published : Feb 27 2024, 01:33 AM IST

ಸಾರಾಂಶ

ಮಹಿಳೆಯರು ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಸಚಿವರ ಗಮನಕ್ಕೆ ತಂದರು. ಜೆ.ಜೆ.ಎಂ‌ ಕಾಮಗಾರಿ ಪೂರ್ಣಗೊಳ್ಳದ ಕಾಮಗಾರಿ ಕಾರಣ ಕುಡಿಯುವ ನೀರು ಸಿಗುತ್ತಿಲ್ಲ.ಇದರಿಂದ ನೀರಿಗಾಗಿ ಅಲೆದಾಡಬೇಕಾದ ಸ್ಥಿತಿ ಇದೆ ಎಂದು ಸಚಿವರ ಗಮನಕ್ಕೆ ತಂದರು.‌

ಭಟ್ಕಳ:

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಭಾನುವಾರ ತಮ್ಮ ಕಚೇರಿಯಲ್ಲಿ ಜನರ ಸಮಸ್ಯೆ ಆಲಿಸಿ ಕೆಲವೊಂದಕ್ಕೆ ಸ್ಥಳದಲ್ಲೇ ಪರಿಹಾರ ದೊರಕಿಸಿಕೊಟ್ಟರು.

ಭಾನುವಾರ ಬೆಳಗ್ಗೆ ಪಟ್ಟಣದ ಕಚೇರಿಯಲ್ಲಿ ಸಚಿವರು ಲಭ್ಯ ಇರುತ್ತಾರೆಂಬ ಮಾಹಿತಿ ಪಡೆದ ತಾಲೂಕಿನ ವಿವಿಧ ಪ್ರದೇಶದ ನೂರಾರು ಜನರು ಜಮಾಯಿಸಿ ಸಚಿವರಿಗೆ ತಮ್ಮ ಸಮಸ್ಯೆಯ ಪರಿಹಾರಕ್ಕೆ ಮನವಿ ಸಲ್ಲಿಸಿದರು.

ಅನಾರೋಗ್ಯ, ಬಾವಿ ನಿರ್ಮಾಣ, ಮುಖ್ಯಮಂತ್ರಿ ಪರಿಹಾರ ನಿಧಿ, ಮೀನುಗಾರ ಮೃತ ಪರಿಹಾರ, ರಸ್ತೆ, ಸೇತುವೆ, ವಾಸ್ತವ್ಯದ ಮನೆ, ಗೃಹಲಕ್ಷ್ಮೀ ಯೋಜನೆ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಮನವಿ ಸಲ್ಲಿಸಿದರು.

ಮಹಿಳೆಯರು ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಸಚಿವರ ಗಮನಕ್ಕೆ ತಂದರು. ಜೆ.ಜೆ.ಎಂ‌ ಕಾಮಗಾರಿ ಪೂರ್ಣಗೊಳ್ಳದ ಕಾಮಗಾರಿ ಕಾರಣ ಕುಡಿಯುವ ನೀರು ಸಿಗುತ್ತಿಲ್ಲ.ಇದರಿಂದ ನೀರಿಗಾಗಿ ಅಲೆದಾಡಬೇಕಾದ ಸ್ಥಿತಿ ಇದೆ ಎಂದು ಸಚಿವರ ಗಮನಕ್ಕೆ ತಂದರು.‌ ಸಮಸ್ಯೆ ಆಲಿಸಿದ ಸಚಿವರು ಶೀಘ್ರವೇ ಭಟ್ಕಳಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಮಹಿಳೆಯೊಬ್ಬರು ತಮ್ಮ ಮಗಳ ಕಾಲೇಜು ಶಿಕ್ಷಣ ಮುಂದುವರಿಸಲು ಹಣ ಇಲ್ಲ‌ ಎಂದು ಸಚಿವರ ಮುಂದೆ ನಿವೇದಿಸಿಕೊಂಡಾಗ ತಕ್ಷಣ ಸ್ಪಂದಿಸಿದ ಸಚಿವರು, ಅಗತ್ಯ ಇರುವ ಶುಲ್ಕವನ್ನು ತಾವೇ ಭರಿಸುವುದಾಗಿ ತಿಳಿಸಿದರು. ಗಂಭೀರ‌ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಧನ‌ಸಹಾಯ ಕೋರಿ ಬಂದ‌ವರಿಗೆ ವೈಯಕ್ತಿಕವಾಗಿ ಧನಸಹಾಯ ಮಾಡಿದ ಸಚಿವರು, ಮುಖ್ಯಮಂತ್ರಿ ಪರಿಹಾರ ನಿಧಿಯಡಿಯಲ್ಲೂ ಪರಿಹಾರ ಮಂಜೂರಿಸುವ ಭರವಸೆ ನೀಡಿದರು.

ಮುಂಡಳ್ಳಿ ಹಾಗೂ ಕುಗ್ರಾಮ ಹೆಂಜಲೆ ಭಾಗಕ್ಕೆ ಬಸ್ ಬೀಡುವಂತೆ ಸಾರ್ವಜನಿಕರು ಆಗ್ರಹಿಸಿದರು. ಸಾರ್ವಜನಿಕರ ಸಮಸ್ಯೆಯನ್ನು ಶಾಂತಚಿತ್ತದಿಂದ ಆಲಿಸಿದ ಸಚಿವರು, ಕೆಲವೊಂದಕ್ಕೆ ಸ್ಥಳದಲ್ಲೇ ಪರಿಹಾರ ದೊರಕಿಸಿಕೊಟ್ಟರು. ಇನ್ನೂ ಕೆಲವು ಸಮಸ್ಯೆಗಳಿಗೆ ತಮ್ಮ ಆಪ್ತ ಸಹಾಯಕ ನಾಗರಾಜ ನಾಯ್ಕ, ನಾಗೇಂದ್ರ ನಾಯ್ಕ ಬಳಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಜತೆ ಮಾತನಾಡಿ ಶೀಘ್ರ ಪರಿಹಾರ ದೊರಕಿಸಿಕೊಡಲು ಸೂಚಿಸಿದರು. ಸಚಿವರ ಭೇಟಿಗೆ ವಿವಿಧ ಕಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದು ವಿಶೇಷವಾಗಿತ್ತು. ಬೆಳಗ್ಗೆ 10.30ಕ್ಕೆ ಕಚೇರಿಗೆ ಆಗಮಿಸಿದ ಸಚಿವರು ಮಧ್ಯಾಹ್ನದ ವರೆಗೂ ಸಾರ್ವಜನಿಕರ ಸಮಸ್ಯೆ ಆಲಿಸಿದರು. ಇದರ ಜತೆಗೆ ತಾಲೂಕಿನಿಂದ ಹೊರತುಪಡಿಸಿ ಬೇರೆ ತಾಲೂಕಿನಿಂದ ಬಂದ ಮುಖಂಡರ ಮತ್ತು ಸಾರ್ವಜನಿಕರ ಅಹವಾಲು ಕೂಡ ಕೇಳಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ, ಎಪಿಎಂಸಿ ಮಾಜಿ ಅಧ್ಯಕ್ಷ ಗೋಪಾಲ ನಾಯ್ಕ, ನಾರಾಯಣ ನಾಯ್ಕ ಯಲ್ವಡಿಕವೂರ ಮುಂತಾದವರಿದ್ದರು.