ಸಾರಾಂಶ
ಅಧಿಕಾರಿಗಳಿಗೆ ಸಚಿವ ಎಂ.ಬಿ.ಪಾಟೀಲ ಸೂಚನೆ
ಕನ್ನಡಪ್ರಭ ವಾರ್ತೆ ವಿಜಯಪುರ
ನಗರಕ್ಕೆ ಕುಡಿಯುವ ನೀರು ಪೂರೈಸುವ ಪ್ರಮುಖ ಭೂತ್ನಾಳ ಕೆರೆಗೆ ತಿಡಗುಂದಿ ಅಕ್ವಾಡಕ್ಟ್ ಮೂಲಕ ಆದಷ್ಟು ಬೇಗ ನೀರು ತುಂಬಿಸಲು ಕ್ರಮ ಕೈಗೊಳ್ಳುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಗೃಹ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸ್ಪಂದಿಸಿದರು. ಸಚಿವರನ್ನು ಭೇಟಿ ಮಾಡಿದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಗುತ್ತಿಗೆ ಸಿಬ್ಬಂದಿ ತಮ್ಮ ಸೇವೆಯನ್ನು ಬೇರೊಂದು ಏಜೆನ್ಸಿಗೆ ವರ್ಗಾಯಿಸದಂತೆ ಮನವಿ ಮಾಡಿದರು.
ಆಗ ಸ್ಥಳದಲ್ಲಿಯೇ ಇದ್ದ ಎಕ್ಸಿಕ್ಯೂಟಿವ್ ಎಂಜಿನಿಯರ್ ಎಸ್.ಎಸ್. ಪಟ್ಟಣಶೆಟ್ಟಿ ಅವರಿಂದ ಸಚಿವರು ಸಮಸ್ಯೆ ಕುರಿತು ಮಾಹಿತಿ ಪಡೆದರು. ಅಲ್ಲದೇ, ಈ ಸಮಸ್ಯೆ ಕುರಿತು ಪರಿಶೀಲನೆ ನಡೆಸಿ ಸಭೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರಿಗೆ ಕರೆ ಮಾಡಿ ಸೂಚನೆ ನೀಡಿದರು.ಇದೇ ವೇಳೆ ವಿಜಯಪುರ ನಗರಕ್ಕೆ ನೀರು ಸರಬರಾಜು ಮಾಡುವ ಪ್ರಮುಖ ಜಲಮೂಲಗಳಲ್ಲಿ ಒಂದಾಗ ಐತಿಹಾಸಿಕ ಭೂತ್ನಾಳ ಕೆರೆಗೆ ತಿಡಗುಂದಿ ಅಕ್ವಾಡಕ್ಟ್ ಮೂಲಕ ನೀರು ತುಂಬಿಸುವ ಯೋಜನೆ ವಿಳಂಬದ ಹಿನ್ನೆಲೆಯಲ್ಲಿ ಕೆಬಿಜೆಎನ್ಎನ್ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿದ ಸಚಿವರು, ಆದಷ್ಟು ಬೇಗ ನೀರು ತುಂಬಿಸಲು ಎಲ್ಲ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ತಿಕೋಟಾ ಮತ್ತು ಬಬಲೇಶ್ವರ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮೀಣ ನೀರು ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಹೇಳಿದರು. ಸಚಿವರನ್ನು ಭೇಟಿ ಮಾಡಿದ ಜಾಲಗೇರಿ ಸುತ್ತಮುತ್ತಲಿನ ಜನತೆ, ಕೆರೆಗೆ ನೀರು ತುಂಬಿಸುವಂತೆ ಮನವಿ ಮಾಡಿದರು. ಆಗ ಕೂಡಲೇ ಸ್ಪಂದಿಸಿದ ಸಚಿವರು, ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ ಕೆರೆಗೆ ನೀರು ತುಂಬಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ್ದ ನೂರಾರು ಜನ ಸಮಸ್ಯೆಗಳಿಗೆ ಸಚಿವ ಎಂ.ಬಿ.ಪಾಟೀಲ ಅವರು ಸ್ಥಳದಲ್ಲಿಯೇ ಸ್ಪಂದಿಸುವ ಮೂಲಕ ಗಮನಸೆಳೆದರು.