ರಾಜ್ಯದ ಪ್ರಮುಖ ಜಾತ್ರೆಗಳಲ್ಲೊಂದಾದ ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೋತ್ಸವ ಫೆ.24 ಮತ್ತು 25ರಂದು ನಡೆಯುವ ಹಿನ್ನೆಲೆಯಲ್ಲಿ ಶ್ರೀ ದುರ್ಗಾಂಬಿಕಾ ಮಂಟಪ ನಿರ್ಮಾಣಕ್ಕೆ ಮಂಗಳವಾರ ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್‌ನ ಕಾರ್ಯಾಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹಾಗೂ ಟ್ರಸ್ಟಿಗಳು ಹಂದರಗಂಬ ಪೂಜೆ ನೆರವೇರಿಸಿದರು.

ದಾವಣಗೆರೆ: ರಾಜ್ಯದ ಪ್ರಮುಖ ಜಾತ್ರೆಗಳಲ್ಲೊಂದಾದ ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೋತ್ಸವ ಫೆ.24 ಮತ್ತು 25ರಂದು ನಡೆಯುವ ಹಿನ್ನೆಲೆಯಲ್ಲಿ ಶ್ರೀ ದುರ್ಗಾಂಬಿಕಾ ಮಂಟಪ ನಿರ್ಮಾಣಕ್ಕೆ ಮಂಗಳವಾರ ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್‌ನ ಕಾರ್ಯಾಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹಾಗೂ ಟ್ರಸ್ಟಿಗಳು ಹಂದರಗಂಬ ಪೂಜೆ ನೆರವೇರಿಸಿದರು.

ನಗರದ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಮುಂಭಾಗದಲ್ಲಿ ನಗರ ದೇವತೆ ಪೂಜೆ, ಪ್ರಾರ್ಥನೆ ಸಲ್ಲಿಸಿದ ನಂತರ ಹಂದರಗಂಬ ಪೂಜೆ ನೆರವೇರಿತು. ಸಚಿವರ ಪುತ್ರ ಸಮರ್ಥ ಎಂ. ಶಾಮನೂರು, ದೇವಸ್ಥಾನ ಟ್ರಸ್ಟ್‌ ಪದಾಧಿಕಾರಿಗಳು, ಮುಖಂಡರು ಸಹ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ ಎಸ್.ಎಸ್.ಮಲ್ಲಿಕಾರ್ಜುನ ಮಾತನಾಡಿ, ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಫೆ.24 ಮತ್ತು 25ರಂದು ನಡೆಯಲಿದೆ. ಜಾತ್ರೆ ಪೂರ್ವ ಸಿದ್ಥತೆಗಾಗಿ ಹಂದರ ಕಂಬದ ಪೂಜೆ ನೆರವೇರಿಸಿದ್ದೇವೆ. ಪ್ರತಿ 2 ವರ್ಷಕ್ಕೊಮ್ಮೆ ನಡೆಯುವ ವಿಜೃಂಭಣೆಯ ಜಾತ್ರೆಗೆ ಇಂದಿನಿಂದಲೇ ಸಕಲ ಸಿದ್ಧತಾ ಕಾರ್ಯ ಕೈಗೊಳ್ಳಲು ಪದ್ಧತಿ, ಸಂಪ್ರದಾಯಗಳಂತೆ ಅಧಿಕೃತವಾಗಿ ಚಾಲನೆ ನೀಡಿದ್ದೇವೆ ಎಂದರು.

ದುಗ್ಗಮ್ಮನ ಜಾತ್ರೆಗೆ ದಾವಣಗೆರೆ ಜನರಷ್ಟೇ ಅಲ್ಲ, ಪರ ಜಿಲ್ಲೆ, ಪರ ರಾಜ್ಯ, ವಿದೇಶದಲ್ಲಿರುವ ಸದ್ಭಕ್ತರು, ಬಂಧು-ಬಳಗದವರು ಉತ್ಸುಕರಾಗಿದ್ದಾರೆ. ದುಗ್ಗಮ್ಮನ ಹಬ್ಬವೆಂದರೆ ಎಲ್ಲರಿಗೂ ಬಹಳ ಖುಷಿ. ಎಲ್ಲರೂ ಒಳ್ಳೆಯ ಹಾಗೂ ಶಾಂತ ರೀತಿಯಿಂದ ಹಬ್ಬ ಆಚರಿಸೋಣ ಎಂದು ಕರೆ ನೀಡಿದರು.

ಅನೇಕ ಉಪ ಸಮಿತಿಗಳ ರಚನೆ:

ಟ್ರಸ್ಟಿ, ನಗರಸಭೆ ಮಾಜಿ ಸದಸ್ಯ ಕರಿಗಾರ ಬಸಪ್ಪ ಮಾತನಾಡಿ, ದುಗ್ಗಮ್ಮ ಜಾತ್ರೆಗೆ ಕರ್ನಾಟಕವಲ್ಲದೇ ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣ ಸೇರಿದಂತೆ ಅನೇಕ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಬರುತ್ತಾರೆ. ಜಾತ್ರೆ ಯಶಸ್ವಿಗೆ ಟ್ರಸ್ಟ್ ಕಾರ್ಯಾಧ್ಯಕ್ಷರು, ಧರ್ಮದರ್ಶಿಗಳು ಸೇರಿ ಅನೇಕ ಉಪ ಸಮಿತಿ ರಚಿಸಲಾಗಿದೆ. ಕುರಿ ಕಾಳಗ, ಕುಸ್ತಿ, ಪೆಂಡಾಲ್, ಮೆರವಣಿಗೆ, ಸಾಂಸ್ಕೃತಿಕ ಕಮಿಟಿ ಸೇರಿದಂತೆ ವಿವಿಧ ಕಮಿಟಿಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು.

ಪರಸ್ಥಳದಿಂದ ಬಂದವರು, ಸ್ಥಳೀಯ ಭಕ್ತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಜಿಲ್ಲಾ ಆಡಳಿತ, ಮಹಾನಗರ ಪಾಲಿಕೆ, ಜಿಲ್ಲಾ ಪೊಲೀಸ್ ಇಲಾಖೆ ನೋಡಿಕೊಳ್ಳಲಿವೆ. ಜಾತ್ರೆಯ ಕೊನೆಗೆ ಈ ಜಾತ್ರೆಗೆ ಸಹಕರಿಸಿದ ವಿವಿಧ ಇಲಾಖೆಯ ಅಧಿಕಾರಿಗಳಿಗೆ, ಟ್ರಸ್ಟ್‌ನ ಬಾಬುದಾರರಿಗೆ ಸನ್ಮಾನಿಸಲಾಗುವುದು ಎಂದು ಅವರು ಹೇಳಿದರು.

ಟ್ರಸ್ಟ್‌ ಪದಾಧಿಕಾರಿಗಳಾದ ದೂಡಾ ಮಾಜಿ ಅಧ್ಯಕ್ಷರೂ ಆದ ಯಶವಂತ ರಾವ್ ಜಾಧವ್, ಮಾಲತೇಶ ರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಮಾಜಿ ಮೇಯರ್ ವಿನಾಯಕ ಪೈಲ್ವಾನ್, ಹನುಮಂತ ರಾವ್ ಸಾಳಂಕೆ. ಹನುಮಂತ ರಾವ್ ಸಾವಂತ್, ಉಮೇಶ ಸಾಳಂಕಿ. ಬಾಬುರಾವ್ ಸಾಳಂಕಿ. ಗೌಡರ ಸುರೇಶ, ಬಿ.ಎಚ್.ವೀರಭದ್ರಪ್ಪ, ಎಲ್‌.ಎಂ.ಹನುಮಂತಪ್ಪ, ಎಲ್.ಡಿ. ಗೋಣೆಪ್ಪ, ಮುದೇಗೌಡರ ಗಿರೀಶ, ಶಂಕರರಾವ್ ಸಿಂಧೆ, ಎಲ್‌ಎಂಎಚ್ ಸಾಗರ್, ಇಟ್ಟಿಗುಡಿ ಮಂಜುನಾಥ, ಗೌಡರ ರಾಮಪ್ಪ, ಚೌಡಪ್ಪ, ಕವಿರಾಜ, ಕರಿಬಸಪ್ಪ, ಇಟ್ಟಿಗುಡಿ ಆನಂದ, ಗೌಡರು, ಶಾನುಬೋಗರು, ಬಣಕಾರರು, ರೈತರು, ಬಡಿಗೇರರು, ಕುಂಬಾರರು, ತಳವಾರರು ಹಾಗೂ ಸದ್ಭಕ್ತರು ಭಾಗವಹಿಸಿದ್ದರು.

ವಿವಿಧ ಕಾರ್ಯಕ್ರಮ, ಭಕ್ತರಿಗೆ ಮೂಲಸೌಕರ್ಯ

ಟ್ರಸ್ಟ್‌ ಧರ್ಮದರ್ಶಿ, ಮಾಜಿ ಮೇಯರ್ ಎಚ್.ಬಿ.ಗೋಣೆಪ್ಪ ಮಾತನಾಡಿ, ಪ್ರತಿ 2 ವರ್ಷಕ್ಕೊಮ್ಮೆ ಅದ್ಧೂರಿಯಾಗಿ ದುಗ್ಗಮ್ಮನ ಜಾತ್ರೆ ನಡೆಯುತ್ತದೆ. ಜಾತ್ರೆ ಸಿದ್ಧತೆ ಕಾರ್ಯಕ್ಕಾಗಿ ಹಂದರಗಂಬ ಪೂಜೆ ನೆರವೇರಿದೆ. ಇಂದಿನಿಂದಲೇ ನಗರದ ಅಷ್ಟದಿಕ್ಕುಗಳಲ್ಲೂ ಡಬ್ಬಿ ಗಡಿಗೆ ಹೋಗುತ್ತದೆ. ದೇಣಿಗೆ ಸ್ವೀಕಾರ ಸೇರಿದಂತೆ ಅನೇಕ ಜಾತ್ರೆ ಕಾರ್ಯ, ಸಿದ್ಧತಾ ಕೆಲಸಗಳೂ ವಿದ್ಯುಕ್ತವಾಗಿ ಚಾಲನೆಗೊಂಡಿವೆ. ಜಾತ್ರೆ ಅಂಗವಾಗಿ ದುಗ್ಗಮ್ಮನಿಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರ, ಕುಸ್ತಿ ಕಾಳಗ, ಕುರಿ ಕಾಳಗ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ತಿಂಗಳ ಕಾಲ ನಡೆಯುತ್ತಿರುತ್ತವೆ. ಜಾತ್ರೆ ವೇಳೆ ನಿತ್ಯವೂ 1 ಲಕ್ಷಕ್ಕೂ ಅಧಿಕ ಭಕ್ತರು ದುಗ್ಗಮ್ಮ ತಾಯಿ ದರ್ಶನ ಪಡೆದುಹೋಗುತ್ತಾರೆ. ಭಕ್ತರಿಗೆ ದೀಡು ನಮಸ್ಕಾರ, ಪ್ರದಕ್ಷಿಣೆ, ಕುಡಿಯುವ ನೀರು, ಶೌಚಾಲಯ, ಬಟ್ಟೆ ಬದಲಿಸಲು ಜಾಗದ ವ್ಯವಸ್ಥೆ ಕಲ್ಪಿಸಲಾಗುವುದು. ಎಲ್ಲರೂ ಸೇರಿಕೊಂಡು ಶ್ರದ್ಧಾ-ಭಕ್ತಿಯಿಂದ ತಾಯಿ ದುಗ್ಗಮ್ಮನ ಜಾತ್ರೆ ಮಾಡಿ, ದೇವಿಯ ಕೃಪೆಗೆ ಪಾತ್ರರಾಗೋಣ ಎಂದು ಮನವಿ ಮಾಡಿದರು.