ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಹೊರವಲಯದ ತೊರವಿಯಲ್ಲಿ ಜ.೧೦ ರಿಂದ ೧೮ರವರೆಗೆ ಜರುಗುವ ಸಂಕ್ರಮಣ ಸಿದ್ದೇಶ್ವರ ಜಾನುವಾರು ಜಾತ್ರೆಯನ್ನು ವ್ಯವಸ್ಥಿತವಾಗಿ ಆಯೋಜಿಸಬೇಕು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಿದ್ದೇಶ್ವರ ಜಾನುವಾರು ಜಾತ್ರೆ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿರುವ ಅವರು, ಜಾನುವಾರು ಜಾತ್ರೆಯಲ್ಲಿ ಮಹಾರಾಷ್ಟ್ರ ಸೇರಿ ವಿವಿಧೆಡೆಯಿಂದ ಸಾವಿರಾರು ರೈತರು, ಜಾನುವಾರುಗಳು ಆಗಮಿಸಲಿವೆ. ಈ ಹಿನ್ನೆಲೆ ಸೂಕ್ತ ಲಸಿಕಾಕರಣ, ಜಾತ್ರೆಯಲ್ಲಿ ಭಾಗವಹಿಸಿದ ರೈತರಿಗೆ ಕುಡಿಯುವ ನೀರಿನ ವ್ಯವಸ್ಥೆ, ಜಾತ್ರೆ ಸ್ಥಳದಲ್ಲಿ ಸ್ವಚ್ಛತೆ ನೋಡಿಕೊಳ್ಳಬೇಕು. ಒಂದು ವಾರಕ್ಕೂ ಹೆಚ್ಚು ದಿನ ಜಾತ್ರೆ ನಡೆಯುವುದರಿಂದ ಸಮರ್ಪಕ ವಿದ್ಯುತ್ ವ್ಯವಸ್ಥೆ ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಂಡು, ಯಾವುದೇ ಅಡೆ-ತಡೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದರು.
ಜಾನುವಾರುಗಳನ್ನು ವ್ಯವಸ್ಥಿತವಾಗಿ ಕಟ್ಟಲು ಹಾಗೂ ಹೊಸ ತಳಿಯ ಜಾನುವಾರುಗಳ ಪ್ರದರ್ಶನ ಹಾಗೂ ಜಾತ್ರೆಯಲ್ಲಿ ವಿವಿಧ ವಸ್ತು ಪ್ರದರ್ಶನ ಮಳಿಗೆಗಳ ಆಯೋಜನೆ ಮಾಡಬೇಕು. ಜಾತ್ರೆಗೆ ಅಂದಾಜು ೫೦ ರಿಂದ ೬೦ ಸಾವಿರ ಜಾನುವಾರುಗಳು ಬರುವ ಸಾಧ್ಯತೆ ಇದೆ. ಚಳಿಗಾಲ ಇರುವುದರಿಂದ ಜಾನುವಾರುಗಳಿಗೆ ರೋಗ - ರುಜಿನಗಳು ಬರುವ ಸಾಧ್ಯತೆ ಹೆಚ್ಚು. ಮುಂಜಾಗ್ರತಾ ಕ್ರಮವಾಗಿ ಲಸಿಕೆ, ಔಷಧಗಳ ವ್ಯವಸ್ಥೆ ಮಾಡಬೇಕು ಎಂದರು.ಜಾನುವಾರುಗಳಿಗೆ ರೋಗ ನಿರೋಧಕ ಲಸಿಕೆ ನೀಡಲು ೫೦ ಜನ ಪಶುವೈದ್ಯಕೀಯ ಪದವೀಧರರು, ಪಶು ವೈದ್ಯಾಧಿಕಾರಿಗಳನ್ನು ನೇಮಿಸಿ, ೩ ಡಗಳನ್ನು ರಚಿಸಿ ವೈದ್ಯಕೀಯ ಸೇವೆ ಒದಗಿಸಬೇಕು. ಅತಿ ಹೆಚ್ಚು ಜನರು ಭಾಗವಹಿಸುವುದರಿಂದ ಆರೋಗ್ಯ ತಪಾಸಣಾ ಕೇಂದ್ರ, ಔಷಧಿ ಸಿಂಪರಣೆ (ಫಾಗಿಂಗ್) ಹಾಗೂ ಜಾತ್ರೆಯಲ್ಲಿ ದಿನನಿತ್ಯ ಶೇಖರಣೆಯಾಗುವ ಕಸ ತೆರವುಗೊಳಿಸಿ, ಸ್ವಚ್ಛತೆ ಕಾಪಾಡುವುದು ಸೇರಿದಂತೆ ಮಹಾನಗರ ಪಾಲಿಕೆಯಿಂದ ಪಬ್ಲಿಕ್ ಮೊಬೈಲ್ ಶೌಚಾಲಯ ವ್ಯವಸ್ಥೆ, ಹೆಸ್ಕಾಂದಿಂದ ತಾತ್ಕಾಲಿಕವಾಗಿ ವಿದ್ಯುತ್ ವ್ಯವಸ್ಥೆ, ಬೀದಿ ದೀಪಗಳ ಅಳವಡಿಕೆ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ಜಾನುವಾರು ಜಾತ್ರೆಗೆ ಬರಲು ಅನುಕೂಲವಾಗುವಂತೆ ಕೇಂದ್ರ ಬಸ್ ನಿಲ್ದಾಣದಿಂದ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಮುಖ್ಯ ರಸ್ತೆಯಿಂದ ಜಾನುವಾರು ಜಾತ್ರೆ ಸ್ಥಳಕ್ಕೆ ಹೋಗುವ ರಸ್ತೆ ಸುಗಮಗೊಳಿಸಿ, ಜಾತ್ರೆ ಹೋಗುವ ರೈತರಿಗೆ ಅನುಕೂಲ ಕಲ್ಪಿಸುವುದು, ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ವಾಹನ ನಿಲುಗಡೆ, ಪೊಲೀಸ್ ಬಂದೋಬಸ್ತ ಹಾಗೂ ಪ್ರತಿ ದಿನ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿ ಕಾರ್ಯಕ್ರಮಗಳ ಆಯೋಜನೆ ಹಾಗೂ ಜಾನುವಾರುಗಳ ಮಾರಾಟದ ನಂತರ ರಸೀದಿ ನೀಡುವ ಸಂದರ್ಭದಲ್ಲಿ ಜಾನುವಾರುಗಳನ್ನು ಮಾರಾಟ ಮಾಡುವವರು ಹಾಗೂ ಕೊಳ್ಳುವವರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಆಧಾರ ಸಂಖ್ಯೆ ಪಡೆಯುವಂತೆ ಮತ್ತು ಮದ್ಯ ಮಾರಾಟ ನಿಷೇಧಿಸಬೇಕು ಎಂದರು.ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೊನಾವಣೆ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಮಹಾನಗರ ಪಾಲಿಕೆ ಆಯುಕ್ತ ಬದ್ರೂದ್ದಿನ ಸೌದಾಗರ, ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ, ತಹಸೀಲ್ದಾರ ಕವಿತಾ ಆರ್. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಎಂ.ವಿ.ಶೈಲಜಾ, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಅಶೋಕ ಘೊಣಸಗಿ ಸೇರಿ ವಿವಿಧ ಅಧಿಕಾರಿಗಳು ಇದ್ದರು.