Minister Priyank Kharge information
- ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ । ಸ್ವಚ್ಛ ಕಲಬುರಗಿ, ಶಾಶ್ವತ ಸಮೃದ್ಧಿ ಯೋಜನೆಯಡಿ ಗುರುತಿಸಲ್ಪಟ್ಟ ಐದು ವಲಯಗಳ ಅಭಿವೃದ್ಧಿಗೆ ಅನುದಾನ
--ಕನ್ನಡಪ್ರಭ ವಾರ್ತೆ ಕಲಬುರಗಿ
ಸ್ವಚ್ಛ ಕಲಬುರಗಿ, ಶಾಶ್ವತ ಸಮೃದ್ಧಿ ಯೋಜನೆಯಡಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ₹ 296 ಕೋಟಿ ವೆಚ್ಚದ ನೀಲಿ ನಕ್ಷೆ ತಯಾರಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.ಜಿಲ್ಲಾಡಳಿತ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಪ್ರಮುಖವಾಗಿ ನಗರದಲ್ಲಿ ರಸ್ತೆಗಳು ಹಾಳಾಗಿರುವ ಕುರಿತು ಸಾರ್ವಜನಿಕರ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದವು. ಜೊತೆಗೆ ಕಲಬುರಗಿ ನಗರದ ಅಭಿವೃದ್ಧಿಗೆ ವಿವಿಧ ವಲಯದ ಪ್ರಮುಖ ಬೇಡಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮೂರು ವರ್ಷಗಳ ಅವಧಿಗಾಗಿ " ಸ್ವಚ್ಛ ಕಲಬುರಗಿ, ಶಾಶ್ವತ ಸಮೃದ್ಧಿ " ಯೋಜನೆಯ ನೀಲಿ ನಕ್ಷೆ ತಯಾರಿಸಲಾಗಿದ್ದು, ಗುರುತಿಸಲ್ಪಟ್ಟ ಐದು ವಲಯಗಳ ಅಭಿವೃದ್ಧಿಗೆ ₹ 296 ಕೋಟಿ ಅನುದಾನ ವಿನಿಯೋಗಿಸಲಾಗುತ್ತಿದೆ. ಈ ಯೋಜನೆಗಳಿಗಾಗಿ ಟೆಂಡರ್ ಕರೆಯಲಾಗಿದೆ ಎಂದು ಸಚಿವರು ಹೇಳಿದರು.ರಸ್ತೆ ಅಭಿವೃದ್ಧಿಪಡಿಸುವ ಉದ್ದೇಶದಿಂದ ಈಗಾಗಲೇ ರಸ್ತೆಗಳ ಆಡಿಟ್ ಮಾಡಲಾಗಿದೆ ಎಂದು ಹೇಳಿದ ಸಚಿವರು ಸ್ವಚ್ಚ ಕಲಬುರಗಿ ನಿರ್ಮಾಣ ಮಾಡುವ ದೇಯೋದ್ಯೇಶದಿಂದ ಉದ್ಯಾನಗಳ ಅಭಿವೃದ್ಧಿ, ನೀರಿನ ಮೂಲಗಳ ಸಂರಕ್ಷಣೆ, ಉದ್ಯಾನವನ ಹಾಗೂ ವೃತ್ತಗಳ ಅಧುನೀಕರಣ ಹಾಗೂ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದರು.
ರಸ್ತೆಗಳ ಮೂಲಭೂತ ಅಭಿವೃದ್ಧಿಗಾಗಿ ₹ 116 ಕೋಟಿ ಖರ್ಚು ಮಾಡಲಾಗುತ್ತಿದೆ. ಈ ಕಾರ್ಯಕ್ರಮದಡಿಯಲ್ಲಿ ಒಟ್ಟು 63 ರಸ್ತೆಗಳನ್ನು ಗುರುತಿಸಲಾಗಿದ್ದು ಈ ರಸ್ತೆಗಳ ಅಭಿವೃದ್ಧಿಗೆ ಕ್ರಮವಹಿಸಲಾಗುವುದು.ನಗರದ ವ್ಯಾಪ್ತಿಯ 33 ಉದ್ಯಾನವನಗಳ ಅಭಿವೃದ್ಧಿಗೆ ಒಟ್ಟು ₹ 22.4 ಕೋಟಿ, 25 ಸರ್ಕಲ್ ಗಳ ಅಭಿವೃದ್ಧಿಗೆ ₹ 13.4 ಕೋಟಿ, 4 ಕೆರೆಗಳ ಅಭಿವೃದ್ಧಿ ಹಾಗೂ ಜಲಮೂಲಗಳ ಸಂರಕ್ಷಣೆಗೆ ₹ 39.3 ಕೋಟಿ ಹಾಗೂ ಘನತ್ಯಾಜ್ಯ ಸಂಸ್ಕರಣೆ ಹಾಗೂ ವಿಲೇವಾರಿಗೆ ₹ 55.7 ಕೋಟಿ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಮಾಡಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿವರಿಸಿದರು.
ಸರ್ಕಾರದ ಯೋಜನೆಗಳು ವಿಸ್ತಾರವಾಗಿ ಜನರಿಗೆ ತಲುಪಬೇಕು ಎಂದರೆ, ಸಾರ್ವಜನಿಕರ ಭಾಗಿತ್ವ ಪ್ರಮುಖವಾಗುತ್ತದೆ. ಹಾಗಾಗಿ, ಸಾರ್ವಜನಿಕರು ಈ ಯೋಜನೆಗಾಗಿ ಕೈ ಜೋಡಿಸಬೇಕು ಎಂದು ಅವರು ಮನವಿ ಮಾಡಿದರು.ನಗರದ ಸೌಂದರ್ಯಿಕರಣ, ಕೆರೆಗಳ ಅಭಿವೃದ್ಧಿ, ಕೋಟೆಗಳ ರಕ್ಷಣೆ, ಜಲ ಸಂಪನ್ಮೂಲಗಳ ಸಂರಕ್ಷಣೆ, ವೈಜ್ಞಾನಿಕ ಘನ ತ್ಯಾಜ್ಯ ನಿರ್ವಹಣೆ ಹಾಗೂ ವಿಲೇವಾರಿ, ಪ್ರಮುಖ ಸರ್ಕಲ್ ಗಳ ಅಭಿವೃದ್ಧಿ, ಪಾದಚಾರಿ ರಸ್ತೆಗಳ ನಿರ್ಮಾಣ, ರಸ್ತೆ ನಿರ್ಮಾಣ ಹಾಗೂ ತಗ್ಗುಗುಂಡಿ ಮುಚ್ಚುವುದು ಪ್ರಮುಖ ಅಭಿವೃದ್ಧಿ ಕೆಲಸ ಕೈಗೆತ್ತಿಕೊಳ್ಳಲಾಗುವುದು. ಇದಕ್ಕೆ ನಿಗದಿಪಡಿಸಿದ ಅನುದಾನ ಕೂಡಾ ನಗರಸಭೆ, ಕೆಕೆ ಆರ್ ಡಿಬಿ, ನಗರಾಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಬಳಸಿಕೊಳ್ಳಲಾಗುತ್ತಿದೆ.
ಸ್ವಚ್ಛ ಕಲಬುರಗಿ, ಶಾಶ್ವತ ಸಮೃದ್ಧಿ ಯೋಜನೆಯ ಬಗ್ಗೆ ಹಾಗೂ ಅದರ ರೂಪುರೇಷೆ ವಿವರಿಸುವ ಚಿತ್ರಣಯುಕ್ತ ಯೋಜನೆಯನ್ನು ಪೋಟೋಗಳ ಮೂಲಕ ಮಹಾನಗರ ಪಾಲಿಕೆ ಕಮೀಷನರ್ ಅವಿನಾಶ್ ಶಿಂಧೆ ವಿವರಿಸಿದರು.ಈ ಯೋಜನೆ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತೆ ಮೂಡಿಸಲು ಬೀದಿ ನಾಟಕ, ವಸ್ತುಪ್ರದರ್ಶನ ಸೇರಿದಂತೆ ಹಲವಾರು ಅಭಿಯಾನಗಳನ್ನು ಆಯೋಜಿಸಲಾಗುವುದು ಎಂದು ಅವರು ಹೇಳಿದರು.
ಫೋಟೊಕಲಬುರಗಿ ಜಿಲ್ಲಾಡಳಿತ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿದರು.
