ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಜಾತ್ರೆಯ ಸಂದರ್ಭದಲ್ಲಿ ದೇವಿಯ ದರ್ಶನ ಪಡೆದರು. ಈ ಸಂದರ್ಭದಲ್ಲಿ ದ್ರಾಕ್ಷಾರಸ ಮಂಡಳಿಯ ಅಧ್ಯಕ್ಷ ಡಾ.ಬಿ. ಯೋಗೀಶ್ ಬಾಬು ಇದ್ದರು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಜಿಲ್ಲೆಯ ಪ್ರಸಿದ್ಧ ಬುಡಕಟ್ಟು ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತೀಕದಂತೆ ಆಚರಿಸುತ್ತಿರುವ ಗೌರಸಮುದ್ರ ಮಾರಮ್ಮನ ಜಾತ್ರೆ ಮಂಗಳವಾರ ಅತ್ಯಂತ ವಿಶಿಷ್ಟ ಆಚರಣೆಗಳೊಂದಿಗೆ ನೆರವೇರಿತು.ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ತುಂಬಲು ಪ್ರದೇಶಕ್ಕೆ ಭೇಟಿ ನೀಡಿ ನಾಡಿಗೆ ಮಳೆ-ಬೆಳೆ ಆಗಲಿ ಎಂದು ಬೇಡಿಕೊಂಡರು.
ದ್ರಾಕ್ಷಾ ರಸ ಮಂಡಳಿ ಅಧ್ಯಕ್ಷ ಡಾ.ಬಿ.ಯೋಗೀಶ್ ಬಾಬು, ಬಾಬುರೆಡ್ಡಿ, ರವಿಕುಮಾರ್, ಸತ್ಯನಾರಾಯಣ ರೆಡ್ಡಿ, ವೀರಭದ್ರಯ್ಯ, ಶಶಿಧರ್ ಜೊತೆಗೂಡಿ ಬಂದು ದೇವಿ ದರ್ಶನ ಪಡೆದರು.*ವ್ಯಾಪಾರ ವಹಿವಾಟು ಜೋರು:
ಸಹಜವಾಗಿಯೇ ಈ ಜಾತ್ರೆಯಲ್ಲಿ ಕಾರ, ಮಂಡಕ್ಕಿ, ಬಣ್ಣ ಬಣ್ಣದ ಸಕ್ಕರೆ ಉಂಡೆಗಳು ಸೇರಿದಂತೆ ಹಣ್ಣು ಹೂವು, ವಿವಿಧ ಮಕ್ಕಳ ಆಟಿಕೆ ಸಾಮಾನುಗಳು ಮಾರಾಟ ಆಗುವುದುಂಟು. ಬರಗಾಲದ ಈ ಹೊತ್ತಿನಲ್ಲೂ ವ್ಯಾಪಾರಕ್ಕೆ ಅಂತಹ ಹೊಡೆತ ಬಿದ್ದಂತೆ ಕಾಣಿಸುತ್ತಿಲ್ಲ. ಎಲ್ಲೆಡೆ ಭರ್ಜರಿ ವ್ಯಾಪಾರ ಆಗುತ್ತಿರುವುದು ಸಾಮಾನ್ಯವಾಗಿತ್ತು.ವಿವಿಧೆಡೆಯಿಂದ ಆಗಮಿಸಿದ್ದ ಭಕ್ತಾಧಿಗಳು ಜಮೀನುಗಳ ನೆರಳಡಿಯಲ್ಲಿ ಬೀಡು ಬಿಟ್ಟಿದ್ದರು. ಈ ಜಾತ್ರೆಯಲ್ಲಿ ಮಾಂಸಾಹಾರವೇ ಪ್ರಧಾನವಾಗಿರುವುದರಿಂದ ನೆರಳು ಹೇರಳವಾಗಿರುವ ಕಡೆಗಳಲ್ಲಿ ಭಕ್ತರು ತಂಗಿದ್ದರು. ಉರಿಯುವ ಬಿಸಿಲು ಜಾತ್ರೆಯಲ್ಲಿ ಜನರನ್ನು ಬೇಯುವಂತೆ ಮಾಡುತ್ತಿದ್ದರೂ ಅಂತಹ ಬಿಸಿಲನ್ನೂ ಲೆಕ್ಕಿಸದೇ ಜನರು ಜಾತ್ರೆಯ ಗುಂಗಿನಲ್ಲಿ ಮೈಮರೆತಿದ್ದರು.
*ಕುಣಿದು ಕುಪ್ಪಳಿಸಿ ಭಕ್ತರು:ತುಂಬುಲು ಪ್ರದೇಶಕ್ಕೆ ದೇವಿಯನ್ನು ಕರೆತರುವಾಗ ಭಕ್ತರು ಕುಣಿದು ಕುಪ್ಪಳಿಸಿ ಕೇಕೆ ಹೊಡೆಯುತ್ತಾ ದೇವಿ ಹೊತ್ತವರ ಸುತ್ತಲೂ ಭಕ್ತರ ಉತ್ಸಾಹ ಬಿಸಿಲಿನಂತೆ ಏರುತ್ತಲೇ ಇತ್ತು. ಪುರುಷರಷ್ಟೇ ಅಲ್ಲ. ಮಹಿಳೆಯರೂ ಸೇರಿದಂತೆ ಮಕ್ಕಳೂ ಜಾತ್ರೆಯ ಸಂತಸದಲ್ಲಿ ಮುಳುಗಿದ್ದರು.