ಬಿದರಿ ವೇದಿಕೆ ಕಾರ್‍ಯ ಮಾದರಿ: ರಹೀಂಖಾನ್

| Published : Nov 06 2023, 12:47 AM IST

ಬಿದರಿ ವೇದಿಕೆ ಕಾರ್‍ಯ ಮಾದರಿ: ರಹೀಂಖಾನ್
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್‌ನಲ್ಲಿ ಸಂಗೀತ, ಸಾಂಸ್ಕೃತಿಕ ಚಟುವಟಿಕೆ ಆಯೋಜನೆ, ಶ್ಲಾಘನನೀಯ, ಲತಾ ಹಂಸಲೇಖಾಗೆ ಬಿದರಿ ದತ್ತಿ ಪ್ರಶಸ್ತಿ ಪ್ರದಾನ

ಬೀದರ್‌: ಮೊಬೈಲ್‌ನಿಂದಾಗಿ ಸಂಗೀತ ಆಸಕ್ತಿ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಬೀದರ್‌ನ ಬಿದರಿ ಸಾಂಸ್ಕೃತಿಕ ವೇದಿಕೆ ಹಲವಾರು ಸಂಗೀತ, ಸಾಹಿತ್ಯ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಜಿಲ್ಲೆಯಲ್ಲಿ ನಿರಂತರವಾಗಿ ನಡೆಸುವ ಮೂಲಕ ಮಾದರಿಯಾಗಿದೆ ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂಖಾನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಬೀದರಿ, ಬೀದರ್ ಜಿಲ್ಲೆಯ ಸಾಂಸ್ಕೃತಿಕ ವೇದಿಕೆ ವತಿಯಿಂದ ‘ಬಿದರಿ ಉತ್ಸವ-2023’ ಪ್ರಯುಕ್ತ ಭಾನುವಾರ ಸಂಜೆ ಆಯೋಜಿಸಿದ್ದ ರಾಜ್ಯಮಟ್ಟದ ಬಿದರಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮೊಬೈಲ್ ಬಂದಾಗಿನಿಂದ ವೇದಿಕೆಯ ಸಂಗೀತ ಕಾರ್ಯಕ್ರಮಗಳು ಗಣನೀಯ ಕ್ಷೀಣಿಸಿವೆ. ಹೆಚ್ಚಿನವರಿಗೆ ಮನೆಯಲ್ಲಿ ಏನು ನಡೆಯುತ್ತಿದೆ ಎನ್ನುವುದೂ ತಿಳಿಯದ ಮಟ್ಟಿಗೆ ಮೊಬೈಲ್ ಆವರಿಸಿದೆ. ಮೊಬೈಲ್‌ನಿಂದ ಒಳ್ಳೆಯದು, ಕೆಟ್ಟದ್ದು ಎರಡೂ ಇವೆ. ಮೊಬೈಲ್ ಸದ್ಬಳಕೆ ಮಾಡಿಕೊಳ್ಳಬೇಕು. ಸಂಬಂಧಗಳನ್ನು ಕಾಯ್ದುಕೊಳ್ಳಬೇಕು. ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ತಿಳಿಸಿದರು.

ಬಿದರಿ, ಬೀದರ್ ಜಿಲ್ಲೆಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷೆ ರೇಖಾ ಅಪ್ಪಾರಾವ್ ಸೌದಿ ಅವರು ಬಿದರಿ ಉತ್ಸವ ಮೂಲಕ ಸಂಗೀತ ಕಲಾವಿದರಿಗೆ ವೇದಿಕೆ ಕಲ್ಪಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಸಂಗೀತದ ವಾತಾವರಣ ಇಮ್ಮಡಿಗೊಳಿಸುತ್ತಿರುವುದಲ್ಲದೆ ರಾಜ್ಯ ಹಾಗೂ ಹೊರ ರಾಜ್ಯದಲ್ಲಿಯೂ ಅನೇಕ ಸಂಗೀತ ಕಾರ್ಯಕ್ರಮಗಳನ್ನು ನೀಡಿ ಶ್ಲಾಘನೆಗೆ ಪಾತ್ರರಾಗುತ್ತಿದ್ದಾರೆ ಎಂದು ಪ್ರಶಂಸಿದರು.

ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಮಾತನಾಡಿ, ಸಂಗೀತ ಆಲಿಸುವುದು ಆರೋಗ್ಯಕ್ಕೆ ಒಳ್ಳೆಯದು. ಸಂಗೀತ ಕೇಳುವುದರಿಂದ ಹೃದಯಾಘಾತ ತಪ್ಪುತ್ತದೆ. ಅನೇಕ ರೋಗಗಳು ಸನಿಹಕ್ಕೂ ಸುಳಿಯುವುದಿಲ್ಲ ಎಂದು ಹೇಳಿದರು.

ಹುಮನಾಬಾದ್ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ ಮಾತನಾಡಿ, ಸಂಗೀತದಿಂದ ಒತ್ತಡ ನಿವಾರಣೆಯಾಗುತ್ತದೆ. ವಿದ್ಯಾರ್ಥಿಗಳು ಓದಿನ ಜತೆಗೆ ಸಂಗೀತ ಹಾಗೂ ಕ್ರೀಡಾ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು ಎಂದು ಸಲಹೆ ಮಾಡಿದರು.

ನೇತೃತ್ವ ವಹಿಸಿದ್ದ ಬಸವಕಲ್ಯಾಣದ ಹರಳಯ್ಯ ಪೀಠದ ಡಾ. ಗಂಗಾಂಬಿಕೆ ಅಕ್ಕ ಮಾತನಾಡಿ, 64 ಕಲೆಗಳಲ್ಲಿ ಸಂಗೀತ, ನೃತ್ಯ ಹಾಗೂ ಚಿತ್ರಕಲೆ ಶ್ರೇಷ್ಠವಾದವು ಎಂದು ನುಡಿದರು.

ಇದೆ ಸಂದರ್ಭದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಲತಾ ಹಂಸಲೇಖಾ ಅವರಿಗೆ ರಾಜ್ಯಮಟ್ಟದ ಬಿದರಿ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಲತಾ ಹಂಸಲೇಖಾ ಅವರು ‘ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯ...’ ವಚನ ಸುಶ್ರಾವ್ಯವಾಗಿ ಹಾಡಿ ಸಭಿಕರ ಮನ ತಣಿಸಿದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ ವಹಿಸಿದ್ದರು. ಬಿದರಿ, ಬೀದರ್ ಜಿಲ್ಲೆಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷೆ ರೇಖಾ ಅಪ್ಪಾರಾವ್ ಸೌದಿ ಅಧ್ಯಕ್ಷತೆ ವಹಿಸಿದ್ದರು.ಬೆಂಗಳೂರಿನ ಖ್ಯಾತ ಹಿನ್ನೆಲೆ ಗಾಯಕಿ ನಾಗಚಂದ್ರಿಕಾ ಕೆ.ಎಸ್, ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸೋದ್ದಿನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಕರ್ನಾಟಕ ವಸತಿ ಶಿಕ್ಷಣ ಸಂಘ-ಸಂಸ್ಥೆಗಳ ಜಿಲ್ಲಾ ಸಮನ್ವಯಾಧಿಕಾರಿ ಶರಣಪ್ಪ ಬಿರಾದಾರ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ, ಬಿಡಿಎ ಮಾಜಿ ಅಧ್ಯಕ್ಷ ಬಾಬುವಾಲಿ, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಭಾರತಿ ವಸ್ತ್ರದ್ ಇದ್ದರು. ಪತ್ರಕರ್ತ ಅಪ್ಪಾರಾವ್ ಸೌದಿ ಸ್ವಾಗತಿಸಿದರು. ಬಿ.ಎಂ.ಅಮರವಾಡಿ ಹಾಗೂ ಡಿ.ಎಸ್. ಜೋಶಿ ನಿರೂಪಿಸಿದರು. ಚನ್ನಬಸವ ಹೆಡೆ ವಂದಿಸಿದರು.