ಕೇಂದ್ರದ ರೈತ ವಿರೋಧಿ ನೀತಿ ವಿರುದ್ಧ ಸಚಿವ ರಾಜಣ್ಣ ಕಿಡಿ

| Published : Apr 01 2024, 12:45 AM IST

ಕೇಂದ್ರದ ರೈತ ವಿರೋಧಿ ನೀತಿ ವಿರುದ್ಧ ಸಚಿವ ರಾಜಣ್ಣ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ನರೇಂದ್ರ ಮೋದಿ ಸರ್ಕಾರದಿಂದ ದೊಡ್ಡ ದೊಡ್ಡ ಕಾರ್ಪೋರೇಟ್‌ ಸಂಸ್ಥೆಗಳ ಸಾಲ ಮನ್ನಾ ಮಾಡಿದ್ದಾರೆ. ಈಗ ದೇಶ ದಿವಾಳಿಯಾಗಿಲ್ಲವೇ.? ಹಾಗಾಗಿ ಇವರದು ಉದ್ಯಮಿಗಳ ಪರ ಸರ್ಕಾರವಾಗಿದ್ದು, ಇವರಿಗೆ ಯಾವುದೇ ಕಾರಣಕ್ಕೂ ಮತ ಚಲಾಯಿಸಬೇಡಿ.

ಕನ್ನಡಪ್ರಭ ವಾರ್ತೆ ಮಧುಗಿರಿ

ದೇಶದಲ್ಲಿ ರೈತ ವಿರೋಧಿ ನೀತಿ ಹಾಗೂ ಸರ್ವಾಧಿಕಾರಿ ಮನೋಭಾವದ ಕೇಂದ್ರದ ನರೇಂದ್ರ ಮೋದಿ ಸರ್ಕಾರವನ್ನು ತೊಲಗಿಸಬೇಕು ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಕೇಂದ್ರದ ಕಾರ್ಯ ವೈಖರಿ ವಿರುದ್ಧ ಕಿಡಿಕಾರಿದರು.

ತಾಲೂಕು ಬ್ಲಾಕ್‌ ಕಾಂಗ್ರೆಸ್‌ ನಿಂದ ಕೆ.ಎನ್‌.ರಾಜಣ್ಣ ಅವರ ನಿವಾಸದಲ್ಲಿ ಭಾನುವಾರ ತುಮಕೂರು ಲೋಕಸಭಾ ಚುನಾವಣೆ ನಿಮಿತ್ತ ಕರೆದಿದ್ದ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನರೇಂದ್ರ ಮೋದಿ ಭ್ರಷ್ಟರ ವಿರುದ್ಧ ಆದಾಯ,ಇಡಿ,ಸಿಬಿಐ.ಸಿಐಡಿ ಅಧಿಕಾರಿಗಳನ್ನು ಬಿಟ್ಟು ನಂತರ ಅವರನ್ನು ಬಿಜೆಪಿಗೆ ಸೇರಿಸಿಕೊಂಡು ಭ್ರಷ್ಟಾಚಾರವನ್ನು ವಾಷಿಂಗ್‌ ಮಿಷನ್‌ ಮೂಲಕ ತೊಳೆದು ಕ್ಲೀನ್‌ ಚೀಟ್‌ ನೀಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಲೇವಡಿ ಮಾಡಿದ ಅವರು, ಕೆಲ ಸಂಸ್ಥೆಗಳು ಇಂದು ಕೇಂದ್ರದ ಬಿಜೆಪಿ ಸರ್ಕಾರದ ಕೈಗೊಂಬೆಗಳಾಗಿ ಕೆಲಸ ಮಾಡುತ್ತಿವೆ, ಹಾಗಾಗಿ ಭ್ರಷ್ಟಾಚಾರ ನಿರ್ಮೂಲನೆ ಆಗುತ್ತಿಲ್ಲ. ರೈತರ ಬಗ್ಗೆ ಮೋದಿಗೆ ಕಾಳಜಿಯಿಲ್ಲ, ರೈತರು ನಡೆಸುತ್ತಿರುವ ದೆಹಲಿ ಚಲೋ ಪ್ರತಿಭಟನೆಯಲ್ಲಿ 300 ಜನ ರೈತರು ಸಾವನ್ನಪ್ಪಿದ್ದಾರೆ. ಅವರ ಬಗ್ಗೆ ಅನುಕಂಪವಿಲ್ಲ, 12,900 ಕೋಟಿ ರು.ಗಳ ಬಾಂಡ್‌ ಭ್ರಷ್ಟಾಚಾರದಲ್ಲಿ ಬಿಜೆಪಿ ತೊಡಗಿದೆ ಎಂದರು.

ನರೇಂದ್ರ ಮೋದಿ ಸರ್ಕಾರದಿಂದ ದೊಡ್ಡ ದೊಡ್ಡ ಕಾರ್ಪೋರೇಟ್‌ ಸಂಸ್ಥೆಗಳ ಸಾಲ ಮನ್ನಾ ಮಾಡಿದ್ದಾರೆ. ಈಗ ದೇಶ ದಿವಾಳಿಯಾಗಿಲ್ಲವೇ.? ಹಾಗಾಗಿ ಇವರದು ಉದ್ಯಮಿಗಳ ಪರ ಸರ್ಕಾರವಾಗಿದ್ದು, ಇವರಿಗೆ ಯಾವುದೇ ಕಾರಣಕ್ಕೂ ಮತ ಚಲಾಯಿಸಬೇಡಿ ಎಂದು ತಿಳಿಸಿದರು.

ಮಧುಗಿರಿ ಸೇರಿ ಎಲ್ಲ ಗ್ರಾಮಗಳಲ್ಲಿ ಈಗಾಗಲೇ 10 ಸಾವಿರ ನಿವೇಶನ ನೀಡಲು ಪ್ರಯತ್ನ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನಿವೇಶನದ ಜೊತೆ ಹಕ್ಕುಪತ್ರ ಹಾಗೂ ಜಮೀನುಗಳ ಸಾಗುವಳಿ ಪತ್ರ ಖಾತೆ ನೀಡುವ ಮೂಲಕ ರೈತರ ಹಾಗೂ ಬಡವರ ಬದುಕು ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ರಾಜಣ್ಣ ತಿಳಿಸಿದರು.

ಲೋಕಸಭಾ ಅಭ್ಯರ್ಥಿ ಎಸ್‌.ಪಿ.ಮುದ್ದಹನುಮೇಗೌಡ ಮಾತನಾಡಿ, ನಾನು ಡಾ.ಶ್ರೀ ಶಿವಕುಮಾರಸ್ವಾಮಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಕಳೆದ ಲೋಕಸಭೆಯಲ್ಲಿ ಒತ್ತಾಯಿಸಿದ್ದೆ, ಆದರೆ 5 ಬಾರಿ ಸಂಸತ್‌ ಸದಸ್ಯರಾಗಿದ್ದ ಬಸವರಾಜು ಒಂದು ಬಾರಿಯೂ ಶ್ರೀಗಳ ಭಾರತ ರತ್ನದ ಬಗ್ಗೆ ಮಾತನಾಡಿಲ್ಲ. ಇಡೀ ಜಿಲ್ಲೆಯಲ್ಲಿ ಇವರ ಅಭಿವೃದ್ಧಿ ಶೂನ್ಯ ,ಇನ್ನೂ ನಮ್ಮ ಜಿಲ್ಲೆಗೆ ಸೋಮಣ್ಣನವರ ಕೊಡುಗೆ ಏನೂ ಎಂದು ಪ್ರಶ್ನಿಸಿ, ನಿಮ್ಮ ಕಷ್ಟ - ಸುಖಗಳಿಗೆ ಸ್ಪಂದಿಸುವ ನನ್ನನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು.

ಸಭೆಯಲ್ಲಿ ಎಂಎಲ್‌ಸಿ ಆರ್‌.ರಾಜೇಂದ್ರ, ಜಿಪಂ ಮಾಜಿ ಅಧ್ಯಕ್ಷೆ ಶಾಂತಲ ರಾಜಣ್ಣ ,ಜಿ.ಜೆ.ರಾಜಣ್ಣ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಶೇಖರಗೌಡ, ಮುಖಂಡರಾದ ಶಶಿ ಹುಲಿಕಂಟೆಮಠ್‌, ಮಲ್ಲಿಕಾರ್ಜುನಯ್ಯ, ಆದಿನಾರಾಯಣರೆಡ್ಡಿ, ಗೋಪಾಲಯ್ಯ, ರಾಮಣ್ಣ, ಬಿ.ನಾಗೇಶ್‌ಬಾಬು, ಪಿ.ಸಿ.ಕೃಶ್ಣಾರೆಡ್ಡಿ, ಇಂದಿರಮ್ಮ, ಚಂದ್ರಮ್ಮ, ಸುವರ್ಣಮ್ಮ, ಡಿಜಿಎಸ್‌ಶಟ್ಟಿ, ಕಲ್ಲಹಳ್ಳಿ ದೇವರಾಜು, ವಿಜಯ್‌ಕುಮಾರ್‌ ಜೈನ್‌ ,ಗಂಗಣ್ಣ ಸೇರಿ ಅನೇಕರಿದ್ದರು.

ದೇವೇಗೌಡರು ಜಾತಿವಾದಿಯಲ್ಲ, ಕುಟುಂಬವಾದಿ:

ದೇವೇಗೌಡರು ಜಾತಿವಾದಿಯಲ್ಲ, ಕುಟುಂಬವಾದಿ. ತನ್ನ ಸೆಕ್ಯೂಲರ್‌ ನೀತಿ, ಸಿದ್ಧಾಂತಗಳನ್ನು ಗಾಳಿಗೆ ತೂರಿ, ಕೋಮುವಾದಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೋಸ್ಕರ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದ ರಾಜಣ್ಣ, ಗೌಡರು ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟಬೇಕು ಎಂದಿದ್ದರು. ಮೋದಿ ಈ ದೇಶದ ಪ್ರಧಾನಿಯಾದರೆ ನಾನು ಈ ದೇಶ ಬಿಟ್ಟು ಹೋಗುತ್ತೇನೆ ಎಂದಿದ್ದರು. ಹೋದರೇ? ಎಂದು ಪ್ರಶ್ನಿಸಿದರು.

ಅಧಿಕಾರಕ್ಕಾಗಿ ಕೋಮವಾದಿಗಳ ಜತೆ ಸೇರಿದ್ದು, ಹಾಸನ, ಬೇಂಗಳೂರು ಗ್ರಾಮಾಂತರ ಹಾಗೂ ಮಂಡ್ಯದಲ್ಲಿ ಇವರ ಪರಿವಾರ ಸ್ಪರ್ಧಿಸಿದ್ದು, ಇವರದು ಕುಟುಂಬ ರಾಜಕಾರಣ. ಇಂಥವರಿಗೆ ಪ್ರಭುದ್ಧ ಮತದಾರ ಬಂಧುಗಳು ಈ ಸಲ ತಕ್ಕ ಪಾಠ ಕಲಿಸಬೇಕು ಎಂದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಎಚ್‌ಡಿಡಿ ಸೋಲಿಗೆ ವಿ.ಸೋಮಣ್ಣ, ಜಿ.ಎಸ್‌. ಬಸವರಾಜು ಅವರೇ ಕಾರಣ, ಇದೇ ಎಚ್‌ಡಿಡಿ ಇವತ್ತು ಅವರನ್ನು ಅಕ್ಕಪಕ್ಕದಲ್ಲಿ ಕೂರಿಸಿಕೊಂಡು ನನ್ನ ಸೋಲಿಸಿದವರನ್ನು ಸೋಲಿಸಿ ಎಂದು ಭಾಷಣ ಮಾಡುತ್ತಾರೆ, ಇವರ ಸೆಕ್ಯೂಲರ್‌ ಎಲ್ಲಿ ಹೋಯಿತು ಎಂದು ರಾಜಣ್ಣ ಪ್ರಶ್ನಿಸಿದರು.