ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಸಚಿವರ ಆರ್ಥಿಕ ನೆರವು

| Published : Nov 03 2025, 03:15 AM IST

ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಸಚಿವರ ಆರ್ಥಿಕ ನೆರವು
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನೀಟ್ ಪಾಸಾಗಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಸೀಟು ಪಡೆದರೂ ಆರ್ಥಿಕ ಸಮಸ್ಯೆಯಿಂದಾಗಿ ಸಂಕಷ್ಟದಲ್ಲಿದ್ದ ಆರು ಜನ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಿಎಲ್‌ಡಿಇ ಸಂಸ್ಥೆಯ ಅಧ್ಯಕ್ಷ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹಣಕಾಸು ನೆರವು ನೀಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ. ನಗರದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ರವಿವಾರ ಆರು ಜನ ವಿದ್ಯಾರ್ಥಿಗಳಿಗೆ ಪ್ರಥಮ ವರ್ಷದ ಬೋಧನಾ ಶುಲ್ಕ, ಊಟ ಮತ್ತು ವಸತಿಗೆ ಅಗತ್ಯವಿರುವ ಹಣದ ಚೆಕ್ ನ್ನು ವಿತರಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನೀಟ್ ಪಾಸಾಗಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಸೀಟು ಪಡೆದರೂ ಆರ್ಥಿಕ ಸಮಸ್ಯೆಯಿಂದಾಗಿ ಸಂಕಷ್ಟದಲ್ಲಿದ್ದ ಆರು ಜನ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಿಎಲ್‌ಡಿಇ ಸಂಸ್ಥೆಯ ಅಧ್ಯಕ್ಷ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹಣಕಾಸು ನೆರವು ನೀಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ. ನಗರದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ರವಿವಾರ ಆರು ಜನ ವಿದ್ಯಾರ್ಥಿಗಳಿಗೆ ಪ್ರಥಮ ವರ್ಷದ ಬೋಧನಾ ಶುಲ್ಕ, ಊಟ ಮತ್ತು ವಸತಿಗೆ ಅಗತ್ಯವಿರುವ ಹಣದ ಚೆಕ್ ನ್ನು ವಿತರಿಸಿದರು.

ಈ ವೇಳೆ ಮಾತನಾಡಿದ ಸಚಿವರು, ವಿದ್ಯಾರ್ಥಿಗಳು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಬೇಕು. ತಮ್ಮ ಶಿಕ್ಷಣಕ್ಕೆ ಅಗತ್ಯವಾಗಿರುವ ಆರ್ಥಿಕ ನೆರವನ್ನು ನೀಡಲಾಗುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಪೋಷಕರು, ತಮ್ಮ ಊರು ಮತ್ತು ಬಸವನಾಡು ವಿಜಯಪುರ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಕಿವಿಮಾತು ಹೇಳಿ ಶುಭ ಹಾರೈಸಿದರು. ಆರು ಜನ ವಿದ್ಯಾರ್ಥಿಗಳಿಗೆ ಒಟ್ಟು ₹ 10,61,390 ಮೊತ್ತದ ಚೆಕ್ ನ್ನು ಸಚಿವರು ವಿತರಿಸಿದರು. ಸಚಿವರಿಂದ ಆರ್ಥಿಕ ನೆರವು ಪಡೆದ ವಿದ್ಯಾರ್ಥಿಗಳು ಬಬಲೇಶ್ವರ ತಾಲೂಕಿನ ಹಲಗಣಿ ಗ್ರಾಮದ ವಿದ್ಯಾರ್ಥಿ ಸುದೀಪ ಬಸವರಾಜ ಬಾವಲತ್ತಿ ನೀಟ್ ನಲ್ಲಿ 43481ನೇ ಸ್ಥಾನ ಪಡೆದಿದ್ದು, ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಎಂಬಿಬಿಎಸ್ ಪ್ರವೇಶ ಪಡೆದಿದ್ದಾರೆ. ಇವರ ತಂದೆ ಅನಾರೋಗ್ಯಕ್ಕೊಳಗಾಗಿದ್ದು, ತಾಯಿ ಮನೆಗೆಲಸ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಯ ಪ್ರಥಮ ವರ್ಷದ ಶುಲ್ಕ ₹ 1,54,150 ಚೆಕ್ ನ್ನು ವಿತರಿಸಲಾಯಿತು. ಮತ್ತು ತಿಟೋಟಾ ಪಟ್ಟಣದ ಸಚೀನ ಭೀಮಣ್ಣ ಮಾಳಿ ನೀಟ್ ನಲ್ಲಿ 75173 ಸ್ಥಾನ ಪಡೆದಿದ್ದು, ಇವರ ತಂದೆ ಭೀಮಣ್ಣ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.ಈತನಿಗೆ ಬಾಗಲಕೋಟೆಯ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿದ್ದಾರೆ. ಈ ವಿದ್ಯಾರ್ಥಿಯ ಪ್ರಥಮ ವರ್ಷದ ಶುಲ್ಕ ₹ 1,56,621 ಚೆಕ್ ನ್ನು ವಿತರಿಸಲಾಯಿತು. ಇನ್ನು, ತಿಕೋಟಾ ತಾಲೂಕಿನ ಬಾಬಾನಗರದ ವಿದ್ಯಾರ್ಥಿನಿ ಪ್ರತೀಕ್ಷಾ ಗಣಪತಿ ಶಿಂದೆ ನೀಟ್ ನಲ್ಲಿ 175450 ಸ್ಥಾನ ಪಡೆದಿದ್ದು, ಇವರ ತಂದೆ ಗಣಪತಿ ಕಾರ್ಮಿಕರು. ತಾಯಿ ಸುನಂದಾ ಮನೆಗೆಲಸ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿನಿ ಮಂಗಳೂರಿನ ಕುಂತಿಕಾನಾ.ಎ.ಜೆ.ಇನಸ್ಟಿಟ್ಯೂಟ್ ಆಫ್ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿದ್ದಾರೆ. ಈ ವಿದ್ಯಾರ್ಥಿನಿಯ ಪ್ರಥಮ ವರ್ಷದ ಶುಲ್ಕ ₹ 2,51,571 ಚೆಕ್ ನ್ನು ವಿತರಿಸಲಾಯಿತು.ಬಬಲೇಶ್ವರ ತಾಲೂಕಿನ ಬೋಳಚಿಕ್ಕಲಕಿ ಗ್ರಾಮದ ಸಂದೇಶ ಶಿವಾಜಿ ನಂದ್ಯಾಳ ನೀಟ್ ಪರೀಕ್ಷೆಯಲ್ಲಿ 162446 ಸ್ಥಾನ ಪಡೆದಿದ್ದು, ಹಾವೇರಿಯ ಇನಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯಿನ್ಸ್ ನಲ್ಲಿ ಎಂಬಿಬಿಎಸ್ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿದ್ದಾರೆ. ಇವರ ತಂದೆ ಶಿವಾಜಿ ಕೃಷಿಕರಾಗಿದ್ದು, ತಾಯಿ ಯಶೋದಾ ಮನೆಗೆಲಸ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಯ ಪ್ರಥಮ ವರ್ಷದ ಶುಲ್ಕ 1,48,400 ಚೆಕ್ ವಿತರಿಸಲಾಯಿತು.ವಿಜಯಪುರ ತಾಲೂಕಿನ ನಾಗಠಾಣದ ವಿದ್ಯಾರ್ಥಿನಿ ಭವಾನಿ ಬಗಲಿ ನೀಟ್ ಪರೀಕ್ಷೆಯಲ್ಲಿ 100195 ಸ್ಥಾನ ಪಡೆದಿದ್ದು, ಇವರ ತಂದೆ ಮಲ್ಲಿಕಾರ್ಜುನ ಮತ್ತು ತಾಯಿ ಮಲ್ಲಮ್ಮ ಕೃಷಿಕರು. ಈ ವಿದ್ಯಾರ್ಥಿನಿಗೆ ನಾಗಮಂಗಲ ತಾಲೂಕಿನ ಬೆಳ್ಳೂರಿನ ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಸಿಕ್ಕಿದೆ. ಈ ವಿದ್ಯಾರ್ಥಿನಿಯ ಪ್ರಥಮ ವರ್ಷದ ಶುಲ್ಕ ₹ 1,40,000 ಚೆಕ್ ವಿತರಿಸಲಾಯಿತು.ಇನ್ನು, ತಿಕೋಟಾ ತಾಲೂಕಿನ ಹಂಚಿನಾಳ ಎಲ್.ಟಿ-3ರ ವಿದ್ಯಾರ್ಥಿ ರೋಹಿತ ರಾಠೋಡ ನೀಟ್ ನಲ್ಲಿ 110929 ಸ್ಥಾನ ಪಡೆದಿದ್ದು, ಮಂಗಳೂರಿನ ಕಸ್ತೂರಬಾ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಪಡೆದಿದ್ದಾನೆ. ಇವರ ತಂದೆ ಅಶೋಕ ನಿಧನರಾಗಿದ್ದು, ತಾಯಿ ಸುನೀತಾ ತಮ್ಮ ಹಿರಿಯ ಪುತ್ರನೊಂದಿಗೆ ವಿಜಯಪುರ ನಗರದಲ್ಲಿ ಚಹ ಅಂಗಡಿ ನಡೆಸುತ್ತಿದ್ದಾರೆ. ಈ ವಿದ್ಯಾರ್ಥಿಯ ಪ್ರಥಮ ವರ್ಷದ ಶುಲ್ಕ ₹ 2,10,638 ಚೆಕ್ ಸಚಿವರು ವಿತರಿಸಿದರು.

ವೈದ್ಯರಾಗುವ ಕನಸು ನನಸಾಗಲು ಕಾರಣರಾದ ಸಚಿವ ಎಂ.ಬಿ.ಪಾಟೀಲ ಅವರ ನೆರವಿಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ ರಜಿಸ್ಟಾರ್ ಆರ್.ವಿ.ಕುಲಕರ್ಣಿ ಮತ್ತು ಅಕೌಂಟ್ಸ್ ಸುಪರಿಂಟೆಂಡೆಂಟ್ ಎಸ್.ಎಸ್.ಪಾಟೀಲ ಉಪಸ್ಥಿತರಿದ್ದರು.