ರಾಜ್ಯ ಮಟ್ಟದಲ್ಲಿ ಜಲಸಂಪನ್ಮೂಲ ಸಚಿವರ ನೇತೃತ್ವದ ವ್ಯವಸ್ಥೆ ಇರುವುದರಿಂದ, ಅಲ್ಲಿಂದ ಬರುವ ನಿರ್ದೇಶನದಂತೆ ನೀರು ಬಿಡುಗಡೆ ಮಾಡಲಾಗುತ್ತದೆ. ನೀರಿನ ಹಂಚಿಕೆ ಕುರಿತು ಸಭೆ ಕರೆದಾಗ ಎ.ಮಂಜು ಭಾಗವಹಿಸಿದ್ದರು. ಯಾವುದೇ ಅಸಮಾಧಾನ ಅಥವಾ ಆಕ್ಷೇಪಣೆ ಇದ್ದರೆ ಸಭೆಯಲ್ಲಿಯೇ ಚರ್ಚಿಸಬೇಕಿತ್ತು. ಸಭೆಯಲ್ಲಿ ಮೌನವಾಗಿದ್ದು ಹೊರಗೆ ಬಂದು ಜನರಲ್ಲಿ ತಪ್ಪು ಸಂದೇಶ ನೀಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು. ತಮಿಳುನಾಡಿಗೆ ನಿಗದಿತ ಪ್ರಮಾಣದ ನೀರು ಹರಿಸಬೇಕಾದ ಕಾನೂನು ಬದ್ಧತೆಯಿದ್ದು, ಹಾಸನ ಹಾಗೂ ತುಮಕೂರು ಜಿಲ್ಲೆಗಳ ಕೆರೆ-ಕಟ್ಟೆಗಳನ್ನು ತುಂಬಿಸುವ ಅಗತ್ಯವೂ ಇದೆ. ನೀರು ಬಿಡುಗಡೆ ಮಾಡಿದ ನಂತರ ಅದರ ಸ್ವಾಭಾವಿಕ ಹರಿವನ್ನು ನಿರ್ದಿಷ್ಟ ಸ್ಥಳದಲ್ಲಿ ತಡೆಯಲು ಸಾಧ್ಯವಿಲ್ಲ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಸಚಿವ ಸತೀಶ್ ಜಾರಕಿಹೋಳಿ ಅವರ ನಿವಾಸದ ಮೇಲೆ ನಡೆದ ಜಾರಿ ನಿರ್ದೇಶನಾಲಯ (ಇಡಿ) ದಾಳಿ ಮೇಲ್ನೋಟಕ್ಕೆ ರಾಜಕೀಯ ಪ್ರೇರಿತವಾಗಿರಬಹುದು. ಆದರೂ ತನಿಖೆಯಿಂದ ಸತ್ಯಾಂಶ ಹೊರಬರಲಿ ಎಂದು ಅಬಕಾರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಅವರೇ ತನಿಖೆಯನ್ನು ಎದುರಿಸುವುದಾಗಿ ಹಾಗೂ ದೊರೆತಿರುವ ಹಣದ ಬಗ್ಗೆ ಸೂಕ್ತ ಲೆಕ್ಕ ನೀಡುವುದಾಗಿ ಹೇಳಿದ್ದಾರೆ. ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕಿದ್ದು, ಸಂಪೂರ್ಣ ಮಾಹಿತಿ ಲಭ್ಯವಾಗುವವರೆಗೂ ಹೆಚ್ಚಿನ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದರು. ಇಡಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ತನಿಖಾ ಸಂಸ್ಥೆಯಾಗಿದ್ದು, ತನಿಖೆಯಲ್ಲಿ ಯಾವುದೇ ಅಕ್ರಮ ನಡೆದಿರುವ ಬಗ್ಗೆ ಸಾಬೀತಾಗದಿದ್ದರೆ ಈ ದಾಳಿ ಕುರಿತು ಸಾರ್ವಜನಿಕರಲ್ಲಿ ವ್ಯಕ್ತವಾಗಿರುವ ಅನುಮಾನಗಳಿಗೆ ಮತ್ತಷ್ಟು ಬಲ ಸಿಗಬಹುದು ಎಂದು ಶಿವಲಿಂಗೇಗೌಡ ತಿಳಿಸಿದರು.

ಎ.ಮಂಜು ಸಭೆಯಲ್ಲೇಕೆ ಮಾತನಾಡಲಿಲ್ಲ?

ಜಿಲ್ಲೆಯ ರೈತರಿಗೆ ಅನ್ಯಾಯ ಮಾಡಿ ತುಮಕೂರು ಜಿಲ್ಲೆಗೆ ಹೆಚ್ಚಿನ ಹೇಮಾವತಿ ನೀರನ್ನು ಹರಿಸಲಾಗುತ್ತಿದೆ ಎಂಬ ಮಾಜಿ ಸಚಿವ ಹಾಗೂ ಅರಕಲಗೂಡು ಶಾಸಕ ಎ.ಮಂಜು ಅವರ ಆರೋಪವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ತಳ್ಳಿಹಾಕಿದರು. ಹೇಮಾವತಿ ನೀರು ಬಿಡುಗಡೆ ಕುರಿತ ನಿರ್ಧಾರವನ್ನು ತಾವು ವೈಯಕ್ತಿಕವಾಗಿ ತೆಗೆದುಕೊಳ್ಳುವುದಿಲ್ಲ. ರಾಜ್ಯ ಮಟ್ಟದಲ್ಲಿ ಜಲಸಂಪನ್ಮೂಲ ಸಚಿವರ ನೇತೃತ್ವದ ವ್ಯವಸ್ಥೆ ಇರುವುದರಿಂದ, ಅಲ್ಲಿಂದ ಬರುವ ನಿರ್ದೇಶನದಂತೆ ನೀರು ಬಿಡುಗಡೆ ಮಾಡಲಾಗುತ್ತದೆ. ನೀರಿನ ಹಂಚಿಕೆ ಕುರಿತು ಸಭೆ ಕರೆದಾಗ ಎ.ಮಂಜು ಭಾಗವಹಿಸಿದ್ದರು. ಯಾವುದೇ ಅಸಮಾಧಾನ ಅಥವಾ ಆಕ್ಷೇಪಣೆ ಇದ್ದರೆ ಸಭೆಯಲ್ಲಿಯೇ ಚರ್ಚಿಸಬೇಕಿತ್ತು. ಸಭೆಯಲ್ಲಿ ಮೌನವಾಗಿದ್ದು ಹೊರಗೆ ಬಂದು ಜನರಲ್ಲಿ ತಪ್ಪು ಸಂದೇಶ ನೀಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು. ತಮಿಳುನಾಡಿಗೆ ನಿಗದಿತ ಪ್ರಮಾಣದ ನೀರು ಹರಿಸಬೇಕಾದ ಕಾನೂನು ಬದ್ಧತೆಯಿದ್ದು, ಹಾಸನ ಹಾಗೂ ತುಮಕೂರು ಜಿಲ್ಲೆಗಳ ಕೆರೆ-ಕಟ್ಟೆಗಳನ್ನು ತುಂಬಿಸುವ ಅಗತ್ಯವೂ ಇದೆ. ನೀರು ಬಿಡುಗಡೆ ಮಾಡಿದ ನಂತರ ಅದರ ಸ್ವಾಭಾವಿಕ ಹರಿವನ್ನು ನಿರ್ದಿಷ್ಟ ಸ್ಥಳದಲ್ಲಿ ತಡೆಯಲು ಸಾಧ್ಯವಿಲ್ಲ ಎಂದರು.

ನೀರಿನ ಹಂಚಿಕೆಗೆ ಸಂಬಂಧಿಸಿದ ಅಂಕಿ-ಅಂಶಗಳನ್ನು ವಿವರಿಸಲು ತಾವು ಸಿದ್ಧರಾಗಿದ್ದು, ಈ ವಿಷಯದ ಕುರಿತು ವಿಧಾನಸಭೆಯಲ್ಲಿಯೂ ಸುದೀರ್ಘವಾಗಿ ಮಾತನಾಡಿದ್ದೇನೆ. ರಾಜಕೀಯ ಲಾಭಕ್ಕಾಗಿ ವೈಯಕ್ತಿಕ ಆರೋಪಗಳನ್ನು ಮಾಡಬಾರದು. ಎ.ಮಂಜು ಅವರು ಹಿರಿಯ ಶಾಸಕರಾಗಿದ್ದು, ಮಾಜಿ ಸಚಿವರೂ ಆಗಿರುವ ಕಾರಣ ಹೆಚ್ಚು ಜವಾಬ್ದಾರಿಯಿಂದ ಮಾತನಾಡಬೇಕು. ಅವರ ಬಗ್ಗೆ ಗೌರವವಿದ್ದರೂ, ಹಾಸನ ಜಿಲ್ಲೆಯ ಜನರಿಗೆ ನೀರಿನ ವಿಚಾರದಲ್ಲಿ ಅನ್ಯಾಯ ಮಾಡಲಾಗಿದೆ ಎಂಬ ಆರೋಪ ಸಂಪೂರ್ಣ ಸುಳ್ಳು ಎಂದು ಶಿವಲಿಂಗೇಗೌಡ ಹೇಳಿದರು. ನಮ್ಮ ಜಿಲ್ಲೆಯ ಜನರ ಹಿತ ಕಾಪಾಡುವುದು ನನಗೆ ಗೊತ್ತಿದೆ. ನೀರಾವರಿ ವಿಚಾರದಲ್ಲಿ ಸುಳ್ಳು ಹೇಳುವುದಿಲ್ಲ. ಜಿಲ್ಲೆಯ ರೈತರ ಹಿತದೃಷ್ಟಿಯಿಂದಲೇ ಕೆಲಸ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.

ಇದೇ ವೇಳೆ ಸಂಸದ ಶ್ರೇಯಸ್ ಎಂ. ಪಟೇಲ್ ಇತರರು ಇದ್ದರು.