ಪ್ರಾಧಿಕಾರದ ಹೆಸರಿನಲ್ಲಿ ಅಕ್ರಮವಾಗಿ ಖಾತೆ ತೆರೆದಿರುವುದು ಹಾಗೂ ಕೋಟಿ ಕೋಟಿ ಬೇರೆ ಬೇರೆ ಖಾತೆಗೆ ವರ್ಗಾಯಿಸಿಕೊಂಡಿರುವ ಮಾಹಿತಿ ಕೇಳಿ ಖುದ್ದು ಸಚಿವರು ಬೆರಗಾಗಿದ್ದಾರೆ

ಕೊಪ್ಪಳ: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಅಕ್ರಮದ ರಾದ್ಧಾಂತದ ನಡುವೆ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಕೊಪ್ಪಳ ಜಿಲ್ಲೆಗೆ ಭೇಟಿ ನೀಡುತ್ತಿರುವುದು ಪ್ರಕರಣದ ಕುರಿತು ಕುತೂಹಲ ಹೆಚ್ಚಳವಾಗಿದೆ.

ಕೊಪ್ಪಳ ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಅಕ್ರಮದ ಕುರಿತು ಅರಿತುಕೊಂಡಿರುವ ಸಚಿವ ಡಾ.ಯತೀಂದ್ರ ಸಿದ್ರಾಮಯ್ಯ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದಾರೆ ಎನ್ನುವುದು ಪ್ರಕರಣದ ತನಿಖೆಗೆ ಮತ್ತಷ್ಟು ಮಹತ್ವ ಬಂದಿದೆ.

ಪ್ರಾಧಿಕಾರದ ಹೆಸರಿನಲ್ಲಿ ಅಕ್ರಮವಾಗಿ ಖಾತೆ ತೆರೆದಿರುವುದು ಹಾಗೂ ಕೋಟಿ ಕೋಟಿ ಬೇರೆ ಬೇರೆ ಖಾತೆಗೆ ವರ್ಗಾಯಿಸಿಕೊಂಡಿರುವ ಮಾಹಿತಿ ಕೇಳಿ ಖುದ್ದು ಸಚಿವರು ಬೆರಗಾಗಿದ್ದಾರೆ.

ಈಗ ಯಲಬುರ್ಗಾದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಲು ಡಾ.ಯತೀಂದ್ರ ಸಿದ್ದರಾಮಯ್ಯ ಆ.30 ರಂದು ಕೊಪ್ಪಳ ಜಿಲ್ಲೆಗೆ ಆಗಮಿಸುತ್ತಿರುವುದರಿಂದ ಪ್ರಕರಣದ ಕುರಿತು ಪರಿಶೀಲನೆ ಮಾಡುವರೆ, ಅಥವಾ ಅಧಿಕಾರಿಗಳನ್ನು ಕರೆಸಿಕೊಂಡು ಮಾತನಾಡುವರೇ ಎನ್ನುವುದು ಸದ್ಯದ ಕುತೂಹಲವಾಗಿದೆ.

ತಮ್ಮದೇ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಅಕ್ರಮ ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತಿರುವುದರಿಂದ ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ದಿಸೆಯಲ್ಲಿ ಸಚಿವರ ನಡೆ ಯಾವ ರೀತಿ ಇರಲಿದೆ ಎನ್ನುವುದು ಈಗ ಕೊಪ್ಪಳ ಜಿಲ್ಲೆಯಾದ್ಯಂತ ಚರ್ಚೆಯಾಗುತ್ತಿದೆ.

ಸಂಘಟನೆಗಳಿಂದ ಮನವಿ: ಪ್ರಾಧಿಕಾರದಲ್ಲಿ ನಡೆದಿರುವ ಅಕ್ರಮದ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ವಿವಿಧ ಸಂಘಟನೆ ಹಾಗೂ ಬಿಜೆಪಿ ಪಕ್ಷ ದೊಡ್ಡ ಹೋರಾಟ ಮಾಡಿವೆ. ಈಗ ಖುದ್ದು ನಗರಾಭಿವೃದ್ಧಿ ಸಚಿವರೇ ಆಗಮಿಸುತ್ತಿರುವುದರಿಂದ ಅವರಿಗೆ ಮನವಿ ಸಲ್ಲಿಸಲು ಸಂಘಟನೆಗಳು ಹಾಗೂ ಬಿಜೆಪಿ ಪಕ್ಷ ಸಿದ್ಧತೆ ನಡೆಸಿದೆ.