ಕರ್ನಾಟಕದ ಹಲವು ಭಾಗಗಳಲ್ಲಿ ಬರಗಾಲದ ಪರಿಸ್ಥಿತಿ ಎದುರಾಗಿದ್ದು, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಮಳೆ ಆಧಾರಿತ ಕೃಷಿ ಮಾಡುವ ರೈತರು, ಕೃಷಿ ಕಾರ್ಮಿಕರು ಹಾಗೂ ತೋಟಗಾರಿಕೆ ಬೆಳೆಗಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲಸವಿಲ್ಲದೆ ಕೂಲಿ ಕಾರ್ಮಿಕರು ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಹಾಸನಾಂಬೆ ತಾಯಿ ರೈತರ ಕಷ್ಟಗಳನ್ನು ದೂರ ಮಾಡಿ, ನಾಡಿನ ಜನರಿಗೆ ರಕ್ಷಣೆ ನೀಡಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ತಿಳಿಸಿದರು. ನಗರದ ಅಧಿದೇವತೆ ಹಾಸನಾಂಬೆ ದೇವಿಯ ದರ್ಶನ ಪಡೆದ ಬಳಿಕ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹಾಸನ

ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆ ತಾಯಿಯ ದರ್ಶನ ಪಡೆಯಬೇಕೆಂಬ ಹಂಬಲ ಪ್ರತಿಯೊಬ್ಬ ಭಕ್ತನಲ್ಲೂ ಇರುತ್ತದೆ. ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ದರ್ಶನ ಪಡೆಯುವುದು ಕಷ್ಟವೆಂಬ ಭಾವನೆ ಮೂಡಿದರೂ, ತಾಯಿಯ ದರ್ಶನ ಮಾಡಲೇಬೇಕೆಂಬ ಭಕ್ತಿಯ ತುಡಿತ ಎಲ್ಲರಲ್ಲೂ ಇರುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ನಗರದ ಅಧಿದೇವತೆ ಹಾಸನಾಂಬೆ ದೇವಿಯ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ಕುಟುಂಬ ಹಾಗೂ ಭಕ್ತರೊಂದಿಗೆ ತಾಯಿಯ ದರ್ಶನ ಪಡೆದಿರುವುದು ಸಂತಸ ತಂದಿದೆ. ತಾಯಿ ಹಾಸನಾಂಬೆ ದುರ್ಗೆ, ಮಹಾಕಾಳಿ, ಮಹಾಲಕ್ಷ್ಮಿ ಹಾಗೂ ಮಹಾಸರಸ್ವತಿಯ ಸ್ವರೂಪವಾಗಿದ್ದು, ದೇಶಕ್ಕೆ ಒಳಿತಾಗಲಿ, ದೇಶದ ರಕ್ಷಣೆ ಮತ್ತು ಅಭಿವೃದ್ಧಿಯಾಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.ಕರ್ನಾಟಕದ ಹಲವು ಭಾಗಗಳಲ್ಲಿ ಬರಗಾಲದ ಪರಿಸ್ಥಿತಿ ಎದುರಾಗಿದ್ದು, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಮಳೆ ಆಧಾರಿತ ಕೃಷಿ ಮಾಡುವ ರೈತರು, ಕೃಷಿ ಕಾರ್ಮಿಕರು ಹಾಗೂ ತೋಟಗಾರಿಕೆ ಬೆಳೆಗಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲಸವಿಲ್ಲದೆ ಕೂಲಿ ಕಾರ್ಮಿಕರು ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಹಾಸನಾಂಬೆ ತಾಯಿ ರೈತರ ಕಷ್ಟಗಳನ್ನು ದೂರ ಮಾಡಿ, ನಾಡಿನ ಜನರಿಗೆ ರಕ್ಷಣೆ ನೀಡಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿದ್ಯುತ್ ದರ, ಬಸ್ ಪ್ರಯಾಣ ದರ, ಹಾಲಿನ ದರ, ಮದ್ಯದ ದರ ಹಾಗೂ ಬೆಂಗಳೂರಿನ ಮೆಟ್ರೋ ಪ್ರಯಾಣ ದರ ಸೇರಿದಂತೆ ಹಲವು ಸೇವೆಗಳ ದರ ಏರಿಕೆಯಾಗಿದೆ. ಮೂರು ವರ್ಷಗಳ ಹಿಂದಿನ ವಿದ್ಯುತ್ ಬಿಲ್ ಹಾಗೂ ಇಂದಿನ ಬಿಲ್‌ಗಳನ್ನು ಹೋಲಿಕೆ ಮಾಡಿದರೆ ಹೆಚ್ಚಳವಾಗಿರುವುದು ಗೊತ್ತಾಗುತ್ತದೆ. ಬಸ್ ಪ್ರಯಾಣ ದರವನ್ನು ಶೇ.೧೬ರಷ್ಟು ಹೆಚ್ಚಿಸಲಾಗಿದೆ. ಹಾಲಿನ ದರವನ್ನೂ ಹಲವು ಬಾರಿ ಹೆಚ್ಚಿಸಲಾಗಿದೆ. ಈ ಎಲ್ಲ ಹೊರೆಗಳು ಅಂತಿಮವಾಗಿ ಜನಸಾಮಾನ್ಯರ ಮೇಲೆಯೇ ಬೀಳುತ್ತಿವೆ ಎಂದು ಟೀಕಿಸಿದರು. ಮಧ್ಯಮ ವರ್ಗ, ಕೆಳಮಧ್ಯಮ ವರ್ಗ ಹಾಗೂ ಬಡ ಕುಟುಂಬಗಳು ತಮ್ಮ ಅಲ್ಪ ಆದಾಯದಲ್ಲಿ ಜೀವನ ನಡೆಸುತ್ತಿವೆ. ಪ್ರತಿಯೊಂದು ಅಗತ್ಯ ವಸ್ತು ಮತ್ತು ಸೇವೆಗಳ ದರ ಹೆಚ್ಚಳದಿಂದ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸಿದ್ದರೂ, ಬಸ್‌ಗಳಿಗೆ ಡೀಸೆಲ್ ಖರೀದಿಸಲು ಹಾಗೂ ದುರಸ್ತಿ ಕಾರ್ಯ ಕೈಗೊಳ್ಳಲು ಹಣವಿಲ್ಲದ ಪರಿಸ್ಥಿತಿ ಇದೆ ಎಂಬ ದೂರುಗಳಿವೆ. ತೆರಿಗೆ ಸಂಗ್ರಹದ ಹೆಸರಿನಲ್ಲಿ ಜನಸಾಮಾನ್ಯರ ಮೇಲೆ ಮತ್ತಷ್ಟು ಹೊರೆ ಹಾಕಬಾರದು. ಬಸ್ ಪ್ರಯಾಣ ದರ ಏರಿಕೆ ಮಾಡಬಾರದು ಹಾಗೂ ಹೆಚ್ಚಿಸಿರುವ ಹಾಲಿನ ದರವನ್ನು ಇಳಿಸಬೇಕು ಎಂದು ಒತ್ತಾಯಿಸಿದರು.ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬರಪೀಡಿತ ಪ್ರದೇಶಗಳ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಕೇಂದ್ರದ ತಂಡ ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವರದಿ ಸಿದ್ಧಪಡಿಸುತ್ತಿದೆ. ಈ ವಿಚಾರವನ್ನು ದೆಹಲಿಯಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾಪಿಸಿ, ಕೇಂದ್ರದ ವರದಿ ಬರುವವರೆಗೆ ಕಾಯದೆ ರಾಜ್ಯ ಸರ್ಕಾರ ತನ್ನ ಬೊಕ್ಕಸದಿಂದ ರೈತರಿಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದೇನೆ. ವರದಿ ಬಂದ ಬಳಿಕ ಕೇಂದ್ರ ಸರ್ಕಾರದಿಂದ ಪರಿಹಾರ ಮರುಪಾವತಿಸುವ ವ್ಯವಸ್ಥೆ ಮಾಡಬಹುದು ಎಂದು ತಿಳಿಸಿದ್ದೇವೆ ಎಂದರು. ರಾಜ್ಯ ಸರ್ಕಾರ ಬರ ಪರಿಹಾರವಾಗಿ ಘೋಷಿಸಿರುವ ೨,೫೦೦ ರು. ರೈತರಿಗೆ ಯಾವುದೇ ರೀತಿಯಲ್ಲೂ ಸಾಕಾಗುವುದಿಲ್ಲ. ಕೃಷಿ ಚಟುವಟಿಕೆಗಳಿಗೆ ಆಗಿರುವ ನಷ್ಟವನ್ನು ಪರಿಗಣಿಸಿ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು. ರೈತರ ಬದುಕಿಗೆ ಸರ್ಕಾರ ತಕ್ಷಣ ನೆರವಾಗಬೇಕು ಎಂದು ಒತ್ತಾಯಿಸಿದರು.ಹಾಲಿನ ದರ ಹೆಚ್ಚಳದ ಹೊರೆ ಗ್ರಾಹಕರ ಮೇಲೆ ಹಾಕುವ ಬದಲು, ಹಾಲು ಉತ್ಪಾದಕರಿಗೆ ರಾಜ್ಯ ಸರ್ಕಾರ ತನ್ನ ಬೊಕ್ಕಸದಿಂದಲೇ ಪ್ರೋತ್ಸಾಹಧನ ನೀಡಬೇಕು. ಹಿಂದಿನ ಯಡಿಯೂರಪ್ಪ ನೇತೃತ್ವದ ಸರ್ಕಾರದ ಅವಧಿಯಲ್ಲಿ ನೀಡಿದ ಮಾದರಿಯಲ್ಲಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡುವ ವ್ಯವಸ್ಥೆ ಜಾರಿಗೊಳಿಸಬೇಕು. ಹಾಲಿನ ದರ ಹೆಚ್ಚಳದಿಂದ ದಿನಕ್ಕೆ ಅರ್ಧ ಲೀಟರ್ ಹಾಲು ಖರೀದಿಸಿ ಜೀವನ ಸಾಗಿಸುವ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೂ ಆರ್ಥಿಕ ಹೊರೆ ಹೆಚ್ಚಾಗಿದೆ. ಆದ್ದರಿಂದ ಹೆಚ್ಚಿಸಿರುವ ಹಾಲಿನ ದರವನ್ನು ಕಡಿಮೆ ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದೇವೆ ಎಂದು ಹೇಳಿದರು.

=====

ಫೋಟೋ:

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಸನಾಂಬೆ ದೇವಿ ದರ್ಶನ ಪಡೆದರು.