ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಗಿರಿ
ಇಲ್ಲಿನ ತಹಸೀಲ್ದಾರ ಕಚೇರಿಯ ಅಭಿಲೇಖಾಲಯದ ದಾಖಲಾತಿಗಳ ಡಿಜಿಟಲೀಕರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಬುಧವಾರ ಚಾಲನೆ ನೀಡಿದರು.ನಂತರ ಸುದ್ದಿಗಾರರೊಂದಿಗೆ ಮತನಾಡಿದ ಅವರು, ಈಗಾಗಲೇ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಕಾರಟಗಿ ತಾಲೂಕಿನ ತಹಸೀಲ್ದಾರ ಕಚೇರಿಯಲ್ಲಿನ ಖಾಸ್ರಾ, ಆರ್‌ಟಿಸಿ, ಎ ಹಾಗೂ ಬಿ ಶ್ರೇಣಿಯ ದಾಖಲಾತಿಗಳನ್ನು ಸ್ಕ್ಯಾನಿಂಗ್ ಮಾಡಿ ಡಿಜಿಟಲೀಕರಣಗೊಳಿಸಲಾಗಿದೆ. ಇದೇ ಮಾದರಿಯಲ್ಲಿ ಕನಕಗಿರಿ ತಾಲೂಕಿನ ಭೂದಾಖಲೆಗಳನ್ನ ಸ್ಕ್ಯಾನಿಂಗ್ ಮಾಡುವ ಮೂಲಕ ಡಿಜಿಟಲೀಕರಣ ಮಾಡುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಫೆ.೧೦ರ ನಂತರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ದಾಖಲೆ ಪಡೆದುಕೊಳ್ಳಬಹುದು. ಮೊದಲಿನಂತೆ ನಿಯಮಗಳನ್ನು ಸರಳೀಕರಣಗೊಳಿಸಿ ದಾಖಲೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕ್ರಿಯೆ ಜಿಲ್ಲೆಯಾದ್ಯಂತ ನಡೆಯಲಿದೆ ಎಂದು ತಿಳಿಸಿದರು.
ತಹಸೀಲ್ದಾರ ವಿಶ್ವನಾಥ ಮುರುಡಿ, ಗ್ರೇಡ್-೨ ತಹಸೀಲ್ದಾರ ವಿ.ಎಚ್. ಹೊರಪೇಟೆ, ಶಿರಸ್ತೇದಾರ ಅನಿತಾ ಇಂಡಿ, ಗ್ರಾಮ ಆಡಳಿತಾಧಿಕಾರಿ ಅಮರ ತೆಗ್ಗಿನಮನಿ, ಪಪಂ ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯ ಸಂಗಪ್ಪ ಸಜ್ಜನ, ಪ್ರಮುಖರಾದ ಅಮರಪ್ಪ ಗದ್ದಿ, ರಾಮಣ್ಣ ಆಗೋಲಿ, ವಿರೂಪಾಕ್ಷ ಸೇರಿದಂತೆ ತಹಸೀಲ್ದಾರ ಕಚೇರಿ ಸಿಬ್ಬಂದಿ ಇದ್ದರು.ಕನಕಾಚಲಪತಿ ಜಾತ್ರೆಯ ಜತೆಗೆ ಕನಕಗಿರಿ ಉತ್ಸವ ಆಚರಣೆ:
ಸ್ಥಳೀಯರ ಅಭಿಪ್ರಾಯ ಪಡೆದು ಕನಕಾಚಲಪತಿ ಜಾತ್ರೆ ದಿನ ಕನಕಗಿರಿ ಉತ್ಸವ ಆಚರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.ಕನಕಗಿರಿ ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷದ ಕನಕಗಿರಿ ಜಾತ್ರೆ, ಉತ್ಸವ ಅದ್ದೂರಿಯಾಗಿ ಆಚರಣೆ ಮಾಡಲಾಗಿತ್ತು.ಅದರಂತೆ ಈ ವರ್ಷವೂ ಕನಕರಾಯನ ಜಾತ್ರೆ ದಿನ ಉತ್ಸವ ಆಚರಣೆಗೆ ಸ್ಥಳೀಯರು ಸಹಕರಿಸಬೇಕು. ಕನಕಗಿರಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಬೆಳೆಯುತ್ತಿದೆ. ಜಾತ್ರೆಯ ಜತೆಗೆ ಉತ್ಸವ ಆಚರಣೆ ಮಾಡಿದರೆ ಪ್ರತಿ ವರ್ಷವೂ ಜಾತ್ರೆಯೊಂದಿಗೆ ಉತ್ಸವ ನಡೆಯಲಿದೆ ಎಂಬ ಉದ್ದೇಶ ಹೊಂದಿದ್ದೇನೆ ಎಂದರು.
ಉತ್ಸವಕ್ಕಾಗಿ ಪಟ್ಟಣದ ಸ್ವಚ್ಛತೆ, ಅಲಂಕಾರ, ದೀಪಾಲಂಕಾರ ಜಾತ್ರೆಗೆ ಬಂದ ಭಕ್ತರ ಮನ ಸೆಳೆಯಲಿವೆ. ಜಾತ್ರೆ ಹಾಗೂ ಉತ್ಸವಕ್ಕೆಂದು ಪ್ರತ್ಯೇಕವಾಗಿ ಎರಡೆರಡು ಬಾರಿ ಕೆಲಸ ಮಾಡುವುದು ತಪ್ಪಲಿದೆ. ಜಾತ್ರೆಗೆ ಬಂದ ಭಕ್ತರಿಗೆ ಸಂಜೆ ಕಲಾವಿದರ ಕಾರ್ಯಕ್ರಮಗಳನ್ನು ನೋಡಲು ಅವಕಾಶ ಮಾಡಿಕೊಟ್ಟಂತಾಗಲಿದೆ.ಜಾತ್ರೆ ಮತ್ತು ಉತ್ಸವ ಒಟ್ಟಿಗೆ ನಡೆದರೆ ಪಟ್ಟಣಕ್ಕೆ ಆ ಸಮಯದಲ್ಲಿ ಬರುವ ಜನರ ಸಂಖ್ಯೆಯೂ ಹೆಚ್ಚಾಗಲಿದೆ. ವ್ಯಾಪಾರ, ವಹಿವಾಟು ಉತ್ತಮವಾಗಿ ನಡೆಯಲಿದೆ. ಸ್ಥಳೀಯ ಮುಖಂಡರು, ಸಾರ್ವಜನಿಕರು ಒಪ್ಪಿದರೆ ಜಾತ್ರೆಯೊಂದಿಗೆ ಉತ್ಸವ ಆಚರಣೆ ಮಾಡಲು ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಕೆಲಸ ಮಾಡುವವರಿಗೆ ಸಲಹೆ ಸೂಚನೆ ಜತೆಗೆ ಪ್ರೋತ್ಸಾಹಿಸುವ ಕೆಲಸ ಮಾಧ್ಯಮದವರು ಮಾಡಬೇಕು ಎಂದರು.ಪ್ರಮುಖರಾದ ಸಿದ್ದಪ್ಪ ನಿರ್ಲೂಟಿ, ಅಮರಪ್ಪ ಗದ್ದಿ, ಪಪಂ ಉಪಾಧ್ಯಕ್ಷ ಕಂಠಿರಂಗ ನಾಯಕ, ಸದಸ್ಯರಾದ ರಾಜಾಸಾಬ ನಂದಾಪುರ, ಸಂಗಪ್ಪ ಸಜ್ಜನ್, ನೂರಸಾಬ್ ಗಡ್ಡಿಗಾಲ್, ಕಾಂಗ್ರೆಸ್ ವಕ್ತಾರ ಶರಣಪ್ಪ ಭತ್ತದ ಇತರರಿದ್ದರು.