8 ವಸತಿ ಗೃಹಗಳಿಗೆ ಸಚಿವ ತಿಮ್ಮಪೂರ ಭೂಮಿ ಪೂಜೆ

| Published : Dec 26 2024, 01:05 AM IST

ಸಾರಾಂಶ

1924 ಡಿ.26ರ ಮಧ್ಯಾಹ್ನ 3 ಗಂಟೆಗೆ ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ ನಡೆದು ಈಗ 100 ವರ್ಷ ತುಂಬಿದೆ.

ಕನ್ನಡಪ್ರಭ ವಾರ್ತೆ ಮುಧೋಳ

ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಅಗ್ನಿ ಶಾಮಕ ಇಲಾಖೆಯ ಸಿಬ್ಬಂದಿಗಳು ವಾಸಿಸಲು ಹೆಚ್ಚುವರಿ ವಸತಿ ಗೃಹಗಳನ್ನು ನಿರ್ಮಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.

2022-23ನೇ ಸಾಲಿನ 8443 ಠೇವಣಿ ವಂತಿಕೆ ಯೋಜನೆಯಡಿ ₹3 ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ ತಾಲೂಕಿನ ಅಗ್ನಿಶಾಮಕ ಇಲಾಖೆಯ ಹೆಚ್ಚುವರಿ 8 ವಸತಿ ಗೃಹಗಳು, ಕಂಪೌಂಡ್‌ ಹಾಗೂ ಆರ್.ಸಿ.ಸಿ ಚರಂಡಿ ನಿರ್ಮಾಣ ಕಾಮಗಾರಿಗೆ ಬುಧವಾರ ಗುದ್ದಲಿ ಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1924 ಡಿ.26ರ ಮಧ್ಯಾಹ್ನ 3 ಗಂಟೆಗೆ ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ ನಡೆದು ಈಗ 100 ವರ್ಷ ತುಂಬಿದೆ. ಅದೇ ಸಮಯದಲ್ಲಿ ನಾಳೆ ಕೂಡಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಬೆಳಗಾವಿಯು ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ. ಡಿ.27ರಂದು ಬೆಳಗಾವಿ ಸಿಪಿಎಡ್ ಮೈದಾನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ದೇಶ, ರಾಜ್ಯದ ವಿವಿಧ ಭಾಗಗಳಿಂದ ಅಂದಾಜು 3 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ. ಅದರಂತೆ ಬಾಗಲಕೋಟ ಜಿಲ್ಲೆಯಿಂದ 25 ಸಾವಿರ, ಮುಧೋಳ ತಾಲೂಕಿನಿಂದ ಕನಿಷ್ಠ 5 ಸಾವಿರ ಜನರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಬೆಳಗಾವಿಯ ಗಲ್ಲಿ ಗಲ್ಲಿಗಳಲ್ಲಿ ಮಹಾತ್ಮಾ ಗಾಂಧಿ ಹೆಜ್ಜೆ ಗುರುತುಗಳನ್ನು ನೆನಪಿಸುವ ಸ್ವಾತಂತ್ರ್ಯ ಹೋರಾಟದ ಸನ್ನಿವೇಶವನ್ನು ಜನರಿಗೆ ಪರಿಚಯಿಸುವ ಕೆಲಸ ನಡೆಯುತ್ತಿದೆ. ಮತ್ತೊಂದಡೆ ವೃತ್ತಗಳು, ಮುಖ್ಯರಸ್ತೆಗಳು, ದ್ವಾರಗಳಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ಹೇಳಿದರು.

ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ, ಕೆಪಿಸಿಸಿ ಪದಾಧಿಕಾರಿಗಳು, ಸಂಸದೆ ಪ್ರಿಯಾಂಕಾ ಗಾಂಧಿ, ನಾಲ್ಕು ರಾಜ್ಯದ ಮುಖ್ಯಮಂತ್ರಿಗಳು, ಕಾಂಗ್ರೆಸ್ಸಿನ 150 ಸಂಸದರು ಸೇರಿದಂತೆ ರಾಜ್ಯ ಸರ್ಕಾರದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ಕಾಂಗ್ರೆಸ್ ಶಾಸಕರು ಭಾಗವಹಿಸಲಿದ್ದಾರೆ. ಈ ಸಮಾವೇಶದ ಮೂಲಕ ಇಂದಿನ ಯುವ ಜನಾಂಗಕ್ಕೆ ಗಾಂಧಿಜಿಯವರ ಕುರಿತು ಸಮಗ್ರ ಮಾಹಿತಿ ನೀಡಲಾಗುವುದು ಎಂದರು. ಅಗ್ನಿಶಾಮಕ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಕಾಂಗ್ರೆಸ್ ಮುಖಂಡರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.