ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ
ರಾಜ್ಯ ಸರ್ಕಾರದ ಅಧೀಸೂಚನೆಯಂತೆ 2024ರ ಸೆಪ್ಟೆಂಬರ್ 10ಕ್ಕೂ ಮುಂಚೆ ನೋಂದಣಿ ಆದ ಆಸ್ತಿಗಳಿಗೆ ಬಿ ಖಾತಾ ನೀಡುವುದರಿಂದ ರಾಜ್ಯದ ಒಟ್ಟು 32 ಲಕ್ಷ ಆಸ್ತಿಗಳಿಗೆ ಈ ಸೌಲಭ್ಯ ದೊರಕಲಿದೆ, ಬಿ ಖಾತೆ ಪಡೆಯಲು ಮೇ 10ರವರೆಗೆ ಅವಕಾಶವಿದ್ದು, ನಗರದ ಸುಮಾರು 5 ಸಾವಿರ ಕುಟುಂಬಗಳಿಗೆ ಇದರ ಪ್ರಯೋಜನವಾಗಲಿದೆ. ಅವರು ತಮ್ಮ ಆಸ್ತಿಗಳಿಗೆ ಅಧಿಕೃತ ಮಾಲೀಕರಾಗಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ತಿಳಿಸಿದರು.ನಗರಸಭೆ ಆವರಣದಲ್ಲಿ ನಡೆದ ಎ ಮತ್ತು ಬಿ ಖಾತಾಗಳಿಗಾಗಿ ಇ ಆಸ್ತಿ ಉತಾರ ಪಡೆಯುವ ಅಭಿಯಾನಕ್ಕೆ ಇ ಮತ್ತು ಬಿ ಖಾತಾ ದಾರರಿಗೆ ಸಾಕೇಂತಿಕವಾಗಿ ಉತಾರ ನೀಡಿ ಚಾಲನೆ ನೀಡಿ ಮಾತನಾಡಿದ ಅವರು, ಅಗತ್ಯ ದಾಖಲಾತಿ ನೀಡಿ ಕೇವಲ ಒಂದು ವರ್ಷದ ಆಸ್ತಿ ಕರ ಮಾತ್ರ ತುಂಬಿದರೆ ಅವರು ಅಧಿಕೃತವಾಗಿ ತಮ್ಮ ಅಸ್ತಿಯ ಮಾಲೀಕರಾಗುತ್ತಾರೆ, ಅದರಿಂದ ಬ್ಯಾಂಕ್ ಸಾಲ ಸೇರಿದಂತೆ ಸರ್ಕಾರದ ಎಲ್ಲ ಸೌಲಭ್ಯ ಪಡೆಯಬಹುದು ಎಂದು ತಿಳಿಸಿದ ಸಚಿವರು, ಕೇವಲ ಒಂದು ತಿಂಗಳ ಹಿಂದೆ ಜಾರಿಯಾದ ಈ ಯೋಜನೆ ಯನ್ನು ಸಮಪ೯ಕವಾಗಿ ಅನುಷ್ಠಾನಗೊಳಿಸಲು ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸದಸ್ಯರು ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಆಯಕಟ್ಟಿನ ಜಾಗದಲ್ಲಿ ನಗರಸಭೆಯವರು ವಾಣಿಜ್ಯ ಮಳಿಗೆ ಕಟ್ಟಲು ಮುಂದಾದರೆ ಸರ್ಕಾರದಿಂದ ₹50 ಕೋಟಿ ಅನುದಾನ ಮಂಜೂರಾತಿ ಮಾಡಿಸುವುದಾಗಿ ಭರವಸೆ ನೀಡಿದರು, ₹177 ಕೋಟಿ ಅನುದಾನದಲ್ಲಿ ಮುಧೋಳ ನಗರಕ್ಕೆ ಶುದ್ಧ ಕುಡಿಯುವ ನೀರಿನ ಯೋಜನೆಗೆ ಟೆಂಡರ್ ಕರೆಯಲಾಗಿದೆ, ₹19 ಕೋಟಿ ಅನುದಾನದಲ್ಲಿ ಮುಧೋಳ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಲಾಗುವುಗುವುದು, ₹5.40 ಕೋಟಿ ವೆಚ್ಚದಲ್ಲಿ ಉದ್ಯಾನ ಸುಧಾರಣೆ, ನಗರ ರಸ್ತೆಗಳ ಸುಧಾರಣೆ ಹಾಗೂ ಡಾಂಬರೀಕರಣ, ನಗರದ ಎಲ್ಲ ನಾಲ್ಕೂ ದಿಕ್ಕಿನಲ್ಲಿ ತರಕಾರಿ ಮಾರುಕಟ್ಟೆ ಹಾಗೂ ಸ್ಮಶಾನ ನಿರ್ಮಿಸಲಾಗುವುದೆಂದು ತಿಳಿಸಿದ ಅವರು, ಸರ್ಕಾರಿ ರಸ್ತೆ ವಿಸ್ತರಣೆಗೆ ಎಲ್ಲರೂ ಸಹಕಾರ ನೀಡಿ ಸ್ವ ಇಚ್ಛೆಯಿಂದ ಒತ್ತುವರಿ ತೆರವು ಮಾಡಬೇಕೆಂದು ಜನತೆಯಲ್ಲಿ ಮನವಿ ಮಾಡಿದರು.ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಉಪಾಧ್ಯಕ್ಷ ಎಂ.ಎಂ.ಬಾಗವಾನ ವಿವಿಧ ವಾರ್ಡ್‌ಗಳ ಸದಸ್ಯರು, ಕಾಂಗ್ರೆಸ್ ಮುಖಂಡರಾದ ಸಂಗಪ್ಪ ಇಮ್ಮಣ್ಣವರ, ಉದಯಸಿಂಗ ಪಡತರೆ, ರಾಘು ಮೋಕಾಸಿ, ಪುಂಡಲೀಕ ಭೋವಿ, ಕೀರಣ ಹೊನವಾಡ ರಿಂಕು ಶಹಾ ಇತರರಿದ್ದರು. ಪೌರಾಯುಕ್ತ ಗೋಪಾಲ ಕಾಸೆ ಪ್ರಾಸ್ತಾವಿಕವಾಗಿ ಮಾತನಾಡಿದರು, ಇಂಜಿನಿಯರ ಎಂ.ಬಿ. ಹೊಸೂರ ವಂದಿಸಿದರು.